ದೆಹಲಿ: ಉಗ್ರರಿಗೆ ಬೆಂಬಲ ಹಾಗೂ ಪ್ರಚೋದನೆ ನೀಡುವುದನ್ನು ನಿಲ್ಲಿಸುವವರೆಗೂ ಭಾರತ ಸಿಂಧೂ ನದಿ ನೀರು ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ದೆಹಲಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಮಾತನಾಡಿ, ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಮಾತುಕತೆಯಲ್ಲಿ ಕೇವಲ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ವಿಷಯ ಮಾತ್ರ ಚರ್ಚಿಸಲಾಗುತ್ತಿದೆ ಹೊರತು ನೀರು ಬಿಡುಗಡೆ ವಿಚಾರ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದರೆ ತಕ್ಕ ಉತ್ತರ ನೀಡಲಾಗುವುದು. ಎರಡೂ ದೇಶಗಳ ಸಮಸ್ಯೆ ಬಗೆ ಹರಿದ ನಂತರವೇ ಸಿಂಧೂ ನದಿ ನೀರು ಬಿಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದರು.
ಪಾಕಿಸ್ತಾನಕ್ಕೆ ಭಾರತ 6.50 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡುತ್ತಿತ್ತು. ಆದರೆ ಪೆಹಲ್ಗಾಮ್ ದಾಳಿ ನಂತರ 5000 ಕ್ಯೂಸೆಕ್ಸ್ ನೀರು ಮಾತ್ರ ಬಿಡುಗಡೆ ಮಾಡಿದೆ. ಸದ್ಯದ ಪರಿಸ್ಥಿತಿಯಲ್ಲಿ ನೀರು ಬಿಡುವ ವಿಚಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ ಎಂದು ಅವರು ಹೇಳಿದರು.
ಕದನ ವಿರಾಮ ಮಾಡಿಕೊಳ್ಳಲು ಪಾಕಿಸ್ತಾನ ಎರಡು ಬಾರಿ ಕರೆ ಮಾಡಿತ್ತು. ಮೇ 10ರಂದು ಮಧ್ಯಾಹ್ನ 12.37 ಮತ್ತು ಸಂಜೆ 3.55ಕ್ಕೆ ಕರೆ ಮಾಡಿತ್ತು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕದನ ವಿರಾಮಕ್ಕೆ ಸಮ್ಮತಿಸಲಾಯಿತು ಎಂದು ಅವರು ವಿವರಿಸಿದರು.
ಪಾಕಿಸ್ತಾನ್ ಆಕ್ರಮಿತ ಜಮ್ಮು ಕಾಶ್ಮೀರದಿಂದ ಎರಡೂ ದೇಶಗಳ ನಡುವೆ ಮನಸ್ತಾಪ ಉಂಟಾಗಿದೆ. ಪಾಕಿಸ್ತಾನ ಪಿಒಕೆ ವಶಕ್ಕೆ ನೀಡಿದರೆ ಎಲ್ಲಾ ಸಮಸ್ಯೆಗಳು ಬಗೆ ಹರಿಯಲಿವೆ. ಈ ವಿಚಾರದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ನಾವು ಒಪ್ಪುವುದಿಲ್ಲ ಎಂದು ಜೈಸ್ವಾಲ್ ಸರ್ಕಾರದ ನಿಲುವು ಸ್ಪಷ್ಟಪಡಿಸಿದರು.