Menu

ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ: ಆರ್‌.ಅಶೋಕ

ashoka

ಬೆಂಗಳೂರು: ಭಾರತೀಯ ಸೇನೆ 100 ಕ್ಕೂ ಅಧಿಕ ಭಯೋತ್ಪಾದಕರನ್ನು ನಾಶ ಮಾಡಿದೆ. ಕದನ ವಿರಾಮ ಘೋಷಣೆಯಾದ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನು ಆಡಬಾರದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನು ಆಡಬಾರದು. ಯುದ್ಧಕ್ಕೆ ಮುನ್ನ ಶಾಂತಿಯ ಮಾತು ಆಡುತ್ತಾರೆ, ಕದನ ವಿರಾಮವಾದಾಗ ಯುದ್ಧ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸುತ್ತಾರೆ. ಜೊತೆಗೆ ಅಧಿವೇಶನ ನಡೆಸಬೇಕೆಂದು ಕೇಳುತ್ತಾರೆ. ಆದರೆ ಇದು ಅಧಿವೇಶನ ನಡೆಸುವ ಸಮಯವಲ್ಲ. ನಮ್ಮ ಯೋಧರು ಸಾಕ್ಷಿಗಳನ್ನು ನೀಡಿದ್ದಾರೆ. ಇನ್ನು ಮುಂದೆ ಯಾರೂ ಸಾಕ್ಷಿ ಕೇಳಬಾರದು. ಪಾಕ್‌ ಆಕ್ರಮಿತ ಕಾಶ್ಮೀರವನ್ನು ವಾಪಸ್‌ ಪಡೆಯುವ ಬಗ್ಗೆ, ಸಿಂದೂ ನದಿ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿ ಈಗಾಗಲೇ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ನವರು ರಾಜಕಾರಣ ಮಾಡುವುದು ಬಿಟ್ಟು ಯೋಧರಿಗೆ ಬೆಂಬಲ ನೀಡಬೇಕು. ಈ ಹಿಂದೆ ಪಿಒಕೆ ಬಿಟ್ಟುಕೊಟ್ಟಿದ್ದು, ಮುಂಬೈ ದಾಳಿ ಮೊದಲಾದವುಗಳ ಬಗ್ಗೆ ನಾವೇನೂ ಪ್ರಶ್ನೆ ಮಾಡುತ್ತಿಲ್ಲ. ಈ ಘಟನೆಗೆ ಇಂದಿರಾಗಾಂಧಿಯವರ ಹೋಲಿಕೆ ಮಾಡುವ ಅಗತ್ಯವಿಲ್ಲ. ಬಾಂಗ್ಲಾದೇಶದ ರಚನೆಯಾಯಿತು ಎನ್ನುವುದಾದರೆ ಪಿಒಕೆ ಯಾಕೆ ಬಿಟ್ಟಿದ್ದೀರಿ ಎಂಬ ಪ್ರಶ್ನೆ ಬರುತ್ತದೆ. ಆದರೆ ಇದರ ಬಗ್ಗೆ ನಾವ್ಯಾರೂ ಮಾತಾಡುತ್ತಿಲ್ಲ. ಇಂತಹ ಮಾತನಾಡಲು ಇದು ಸಮಯ ಅಲ್ಲ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿಂದಲೂ ಯುದ್ಧ ಬೇಡ ಎಂದರು. ಕಾಂಗ್ರೆಸ್‌ ಪಕ್ಷ ಶಾಂತಿ ಎಂದು ಟ್ವೀಟ್‌ ಮಾಡಿತ್ತು. ಈ ನಡುವೆ ಸಚಿವ ಕೃಷ್ಣ ಭೈರೇಗೌಡ ಉಲ್ಟಾ ಮಾತಾಡುತ್ತಿದ್ದಾರೆ. ಇಲ್ಲಿ ನಾವು ಏನೇ ಮಾತಾಡಿದರೂ ಭಾರತೀಯ ಸೇನೆಯ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಕದನ ವಿರಾಮ ಕೂಡ ಸೇನಾಧಿಕಾರಿಗಳು ಕೈಗೊಂಡ ತೀರ್ಮಾನವಾಗಿದೆ. ಕದನ ವಿರಾಮಕ್ಕೆ ಯಾರದ್ದೇ ಮಧ್ಯಸ್ಥಿಕೆ ಇರಲಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ. ಯಾರದ್ದೇ ಮಧ್ಯಸ್ಥಿಕೆಯನ್ನು ಭಾರತ ಒಪ್ಪಲ್ಲ ಎಂದರು.

ತಿರಂಗಾ ಯಾತ್ರೆ

ಯುದ್ಧ ಆರಂಭವಾಗುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಯೋಧರ ಜೊತೆ ನಾವೆಲ್ಲರೂ ಇದ್ದೇವೆ ಎಂದು ಹೇಳುವುದು ಪ್ರತಿ ಭಾರತೀಯರ ಕರ್ತವ್ಯ. ಅದಕ್ಕಾಗಿ ಬಿಜೆಪಿ ವತಿಯಿಂದ ತಿರಂಗಾ ಯಾತ್ರೆ ನಡೆಯಲಿದೆ. ಮೇ 15 ರಂದು ರಾಜಧಾನಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಯಾತ್ರೆ ನಡೆಯಲಿದೆ. ಬೆಂಗಳೂರಿನಲ್ಲಿ ಮಲ್ಲೇಶ್ವರದ ಸಂಪಿಗೆಯ ರಸ್ತೆಯಲ್ಲಿ ಶಿರೂರು ಪಾರ್ಕ್‌ನಿಂದ 18 ನೇ ಕ್ರಾಸ್‌ವರೆಗೆ ತಿರಂಗಾ ಯಾತ್ರೆ ನಡೆಯಲಿದೆ. ಇದರಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ರಾಷ್ಟ್ರಧ್ವಜ ಇರಲಿದೆ ಎಂದು ತಿಳಿಸಿದರು.

ಮೇ 16 ಮತ್ತು 17 ರಂದು ಜಿಲ್ಲಾ ಕೇಂದ್ರದಲ್ಲಿ, ಮೇ 18 ರಿಂದ 23 ರವರೆಗೆ ತಾಲೂಕು ಕೇಂದ್ರಗಳಲ್ಲಿ ಯಾತ್ರೆ ಮಾಡಲಾಗುವುದು. ಇದರಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಭಾರತೀಯ ಮಹಿಳೆಯರ ಸಿಂದೂರ ಮುಟ್ಟಿದರೆ ಏನಾಗುತ್ತದೆ ಎಂಬುದನ್ನು ಭಾರತೀಯ ಸೇನೆ ತೋರಿಸಿದೆ. 100 ಕ್ಕೂ ಅಧಿಕ ಉಗ್ರರು ಸತ್ತಿದ್ದಾರೆ. ತರಬೇತಿ ಕೇಂದ್ರಗಳು ನಾಶವಾಗಿದೆ. ಯುದ್ಧ ಕೈ ಬಿಡಿ ಎಂದು ಅಂಗಲಾಚುವ ಮಟ್ಟಕ್ಕೆ ಪಾಕಿಸ್ತಾನ ಬಂದಿದೆ ಎಂದರು.

Related Posts

Leave a Reply

Your email address will not be published. Required fields are marked *