ಚೆನ್ನೈ: ಹಲವು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ತಮಿಳುನಾಡಿನ ಪೊಲಾಚ್ಚಿ ಪ್ರಕರಣದ ಎಲ್ಲಾ 9 ಆರೋಪಿಗಳಿಗೆ ಮದ್ರಾಸ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿ ಆರ್.ನಂದಿನಿ ದೇವಿ ನೇತೃತ್ವದ ಪೀಠ, ಮಹಿಳೆಯರನ್ನು ಬ್ಲಾಕ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದೂ ಅಲ್ಲದೇ ಪದೇಪದೇ ಅತ್ಯಾಚಾರ ಎಸಗಿ ದೌರ್ಜನ್ಯ ಎಸಗಿದ ಪ್ರಕರಣದ ಎಲ್ಲಾ 9 ಆರೋಪಿಗಳು ದೋಷಿಗಳು ಎಂದು ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಶಬರಿರಾಜ್ ಅಲಿಯಾಸ್ ರಿಶ್ವಂತ್ (32), ತಿರುವಕ್ಕನರಸು (34), ವಸಂತ ಕುಮಾರ್ (30), ಎಂ.ಸತೀಶ್ (33), ಆರ್.ಮಣಿ ಅಲಿಯಾಸ್ ಮಣಿವಣ್ಣನ್ (33), ಬಾಪು (33), ಹರೂನ್ ಪಾಲ್ (32), ಅರುಲನಾಥಮ್ (39), ಅರುಣ್ ಕುಮಾರ್ (33) ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳು.
ದೇಶಾದ್ಯಂತ ಪೊಲಾಚ್ಚಿ ಪ್ರಕರಣ ಎಂದೇ ಸುದ್ದಿ ಮಾಡಿದ್ದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು 2019ರಿಂದ ಸೇಲಂ ಸೆಂಟ್ರಲ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
ಮಂಗಳವಾರ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಆರೋಪಿಗಳನ್ನು ಕೊಯಮತ್ತೂರಿಗೆ ಕರೆ ತರಲಾಗಿದ್ದು, ಗುಪ್ತಚರ ಇಲಾಖೆ ನೆರವಿನೊಂದಿಗೆ ನಗರದೆಲ್ಲೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಪ್ರಕರಣದಲ್ಲಿ 200 ದಾಖಲೆಗಳು, 400ಕ್ಕೂ ಹೆಚ್ಚು ತಾಂತ್ರಿಕ ಸಾಕ್ಷಿ ಹಾಗೂ ದೌರ್ಜನ್ಯದ ವೇಳೆ ಚಿತ್ರೀಕರಿಸಲಾದ ವೀಡಿಯೊಗಳ ಫೊರೆನ್ಸಿಕ್ ವರದಿ, ಸಂತ್ರಸ್ತರ ವೈದ್ಯಕೀಯ ವರದಿ, ಡಿಜಿಟಲ್ ಸಾಕ್ಷಿ ಸೇರಿದಂತೆ ಹಲವು ರೀತಿಯ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲಾಗಿತ್ತು.
ಏನಿದು ಪ್ರಕರಣ
ಪೊಲಾಚ್ಚಿ ಪ್ರಕರಣ ಎಂದೇ ಖ್ಯಾತಿ ಪಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಿ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಕನಿಷ್ಠ 8 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
2016ರಿಂದ 2018ರ ಅವಧಿಯಲ್ಲಿ ಆರೋಪಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ದೃಶ್ಯವನ್ನು ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದರು.