ಭಾರತ -ಪಾಕಿಸ್ತಾನ ಮಧ್ಯೆ ಯುದ್ಧ ಬಿಕ್ಕಟ್ಟು ಪರಿಸ್ಥಿತಿಯಲ್ಲಿ ನಮ್ಮ ಪಕ್ಷ ಮತ್ತು ಘಟಬಂಧನ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಈ ವಿಚಾರದ ಬಗ್ಗೆ ಚರ್ಚೆಗೆ ಬೇಗನೇ ಪಾರ್ಲಿಮೆಂಟ್ ಸಭೆ ಕರೆಯಿರಿ ಮಾತಾಡೋಣ ಅಂತ ಪ್ರಧಾನಿಗೆ ಪತ್ರ ಬರೆದಿದ್ದೇವೆ.ಆದರೆ ಪ್ರಧಾನಿ ಅವರಿಂದ ಇದು ವರೆಗೂ ರೆಸ್ಪಾನ್ಸ್ ಬಂದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭಾರತ -ಪಾಕಿಸ್ತಾನ ಮಧ್ಯೆ ಕದನ ವಿಚಾರದ ಕುರಿತು ಕಲಬುರಗಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರು ಟಿವಿಯಲ್ಲಿ ಮಾತಾಡೋದು ಬಿಟ್ಟು ಸದನದಲ್ಲಿ ಮಾತಾಡಲಿ ಅಂತ ನಾನು ರಾಹುಲ್ ಗಾಂಧಿ ಪತ್ರ ಬರೆದಿದ್ದೇವೆ. ದಿಢೀರ್ ಕದನ ವಿರಾಮದ ವಿಚಾರ ಬಗ್ಗೆ ನಾನು ಮಾಧ್ಯಮ ಮೂಲಕ ಮಾತನಾಡಲಾರೆ. ಸಂದರ್ಭ ಬಂದಾಗ ನಮ್ಮ ವಿಚಾರ ಹೇಳುವೆ, ಈಗ ಒಡಕಿನ ಮಾತು ನಾನು ಆಡಲಾರೆ ಎಂದರು.
ನಾವು ಸಂಕಟ ಸಮಯದಲ್ಲಿ ಒಂದಾಗಿ ಇರಬೇಕು.
ಯಾವಾಗ ಲೋಕಸಭೆ ನಡೆಯುತ್ತೋ ಅಲ್ಲಿ ನಮ್ಮ ವಿಚಾರ ಹೇಳುವೆವು.ಎಲ್ಲಿ ತಪ್ಪಾಗಿದೆ ? ಎಲ್ಲಿ ಸರಿಯಾಗಿ ನಡೆದಿದೆ ಎಲ್ಲವನ್ನೂ ಲೋಕಸಭೆ ಅಧಿವೇಶನದಲ್ಲಿ ಹೇಳೋಣ. ಈಗ ನಮ್ಮ ಸೈನಿಕರು ಚನ್ನಾಗಿ ಕೆಲಸ ಮಾಡಿದ್ದಾರೆ ಅವರಿಗೆ ಧನ್ಯವಾದ ಹೇಳುತ್ತೆನೆ ಎಂದು ಖರ್ಗೆ ಹೇಳಿದರು.
ಸಂದರ್ಭದಲ್ಲಿ ನಮ್ಮ ದೇಶದವರೆಲ್ಲ ಒಂದಾಗಿ ಒಗ್ಗಟ್ಟಾಗಿ ಇರಬೇಕು.ಕದನ ವಿರಾಮ ವಿಚಾರ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿರುವ ವಿಚಾರ. ಇದುವರೆಗೆ ನಮ್ಮ ದೇಶದಲ್ಲಿ ಬೇರೆ ದೇಶದವರು ಮಧ್ಯಸ್ಥಿಕೆ ವಹಿಸಿ ಹೇಳಿರಲಿಲ್ಲ. ಅದಾಗ್ಯೂ ಈ ಬಗ್ಗೆ ನಾನು ಇಲ್ಲಿ ಏನನ್ನೂ ಮಾತಾಡಲ್ಲ. ಯಾವ ವೇದಿಕೆಯಲ್ಲಿ ಮಾತಾಡಬೇಕೋ ಅಲ್ಲಿ ಮಾತನಾಡುವೆ ಎಂದು ಹೇಳಿದರು.
ಎಲ್ಲರು ಒಂದಾಗಿ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬೇಕು
ಕಲಬುರಗಿ ನಗರದ ಸೇಡಂ ರಸ್ತೆಯಲ್ಲಿರುವ ಬುದ್ದ ವಿಹಾರದಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ನಿಂದ ಆಯೋಜಿಸಿದ 2569ನೇ ವೈಶಾಖ ಬುದ್ಧ ಪೂರ್ಣಿಮಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಬುದ್ದನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ ಖರ್ಗೆ, ಯುದ್ದ ಬೇಕೋ ಅಥವಾ ಬುದ್ದನ ಶಾಂತಿ ಮಂತ್ರ ಬೇಕೋ ಎಂಬ ಸಂಕಷ್ಟದ ಸಮಯದಲ್ಲಿ ಇಂದು ನಾವಿದ್ದೇವೆ. ಸ್ವಾಭಿಮಾನಕ್ಕೆ, ದೇಶದ ಭದ್ರತೆಗೆ ಧಕ್ಕೆಯಾದಾಗ ಜಾತಿ-ಧರ್ಮ ಮೀರಿ ದೇಶ ಪ್ರೇಮ ಮೆರೆಯಬೇಕು. ಧರ್ಮಕ್ಕಿಂತ ದೇಶ ದೊಡ್ಡದು ಎಂದು ಹೇಳಿದರು.
ದೇಶ ಉಳಿದಲ್ಲಿ ಸಂವಿಧಾನ, ಪ್ರಜಾಪ್ರಭುತ್ವ, ಧರ್ಮ ಉಳಿಯಲು ಸಾಧ್ಯ. ಹೀಗಾಗಿ ಯುದ್ದೋನ್ಮಾದದ ಈ ಸಂದರ್ಭದಲ್ಲಿ ದೇಶದ ಜನತೆ ಯಾವುದಕ್ಕೂ ದೃತಿಗೆಡಬಾರದು. ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಎಲ್ಲರು ಒಂದಾಗಿ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕರೆ ನೀಡಿದರು.
ಇತ್ತೀಚೆಗೆ ಜಮ್ಮು ಕಾಶ್ಮೀರ ಪೆಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದುಷ್ಕೃತ್ಯ ಘಟನೆ ನೆನೆದ ಅವರು ಪಾಕಿಸ್ತಾನ ಕಲ್ಕೆರೆದು ಜಗಳ ಮಾಡುತ್ತಿದೆ. ಹಿಂದೆ 2-3 ಯುದ್ದದಲ್ಲಿ ಅವರನ್ನು ನಾವು ಸೋಲಿಸಿದ್ದೇವೆ. ನಾವು ಶಾಂತಿ ಪ್ರಿಯರು. ಯಾವುದೇ ಯುದ್ದವಾದಲ್ಲಿ ಹಾನಿಕಾರಿಕ ತಪ್ಪಿದಲ್ಲ. ಜನಜೀವನ ತೊಂದರೆ ಅನುಭವಿಸಬೇಕಾಗುತ್ತದೆ. ಕೆಲವು ಪರಿಸ್ಥಿತಿಯಲ್ಲಿ ಯುದ್ದ ಅನಿವಾರ್ಯ ಎಂದರೆ ಒಪ್ಪಿಕೊಳ್ಳಲೆಬೇಕಾಗುತ್ತದೆ ಎಂದರು.
ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರ ನಿರಂತರ ಹೋರಾಟ, ತ್ಯಾಗ ಕೊಂಡಾಡಿದ ಅವರು ಆರ್ಮಿಗೆ ದೇಶದ ಸಂಪೂರ್ಣ ಬೆಂಬಲ ಇದೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ದೇಶ ತಲೆಬಾಗುತ್ತದೆ ಎಂದು ಸೈನಿಕರ ಕೆಚ್ಚೆದೆಯ ಹೋರಾಟ ಸ್ಮರಿಸಿದರು. ಗಡಿಯಲ್ಲಿ ದೇಶದ ರಕ್ಷಣೆ ಮಾಡುತ್ತಾ ಹುತಾತ್ಮರಾದ ಸೈನಿಕರು ಮತ್ತು ಪೆಹಲ್ಗಾಂ ಘಟನೆಯಲ್ಲಿ ಜೀವ ಕಳೆದುಕೊಂಡ 26 ಜನರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.