ಆಫ್ರಿಕಾದ ಸಹೇಲ್‌ನ ಜಿಹಾದಿ ಹಿಂಸಾಚಾರ ಪೀಡಿತ ಪ್ರದೇಶ ಬುರ್ಕಿನಾ ಫಾಸೊದಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, 100ಕ್ಕೂ ಹೆಚ್ಚು ಜನರು, ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಜಿಬೋ ನಗರ ಮತ್ತು ಸಮೀಪದ ಮಿಲಿಟರಿ ನೆಲೆಗಳ ಮೇಲೆ ಈ ದಾಳಿ ನಡೆದಿದೆ. ದಾಳಿಯ ಹೊಣೆಯನ್ನು ಅಲ್-ಖೈದಾ ಜೊತೆ ಸಂಬಂಧ ಹೊಂದಿರುವ ಜಮಾತ್ ನಸ್ ಅಲ್-ಇಸ್ಲಾಂ ವಾಲ್-ಮುಸ್ಲಿಮೀನ್ (ಜೆಎನ್‌ಐಎಂ) ಎಂಬ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದೆ. ಈ ಗುಂಪು ಸಹೇಲ್ ಪ್ರದೇಶದ ಮಾಲಿ, ಬುರ್ಕಿನಾ ಫಾಸೊ ಮತ್ತು ನೈಜರ್‌ನಂತಹ ದೇಶಗಳಲ್ಲಿ ಸಕ್ರಿಯವಾಗಿದೆ.ಇಸ್ಲಾಮಿಕ್ ಆಡಳಿತ ಸ್ಥಾಪಿಸುವ ಗುರಿಯೊಂದಿಗೆ ಈ ಸಂಘಟನೆ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದೆ.
ಭಯೋತ್ಪಾದಕ ದಾಳಿಗಳಿಂದಾಗಿ ಸ್ಥಳೀಯರು ತಮ್ಮ ಜೀವನಕ್ಕೆ ಭದ್ರತೆಯ ಭಯ ಅನುಭವಿಸುತ್ತಿದ್ದಾರೆ, ಶಾಲೆಗಳು ಮತ್ತು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ. ಅಂತಾರಾಷ್ಟ್ರೀಯ ಸಮುದಾಯವು ಈ ಬಿಕ್ಕಟ್ಟಿಗೆ ಸ್ಪಂದಿಸಬೇಕಾದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಬುರ್ಕಿನಾ ಫಾಸೊ ಕೆಲವು ವರ್ಷಗಳಿಂದ ರಾಜಕೀಯ ಅಸ್ಥಿರತೆ ಮತ್ತು ಉಗ್ರರ ಹಿಂಸಾಚಾರವನ್ನು ಎದುರಿಸುತ್ತಿದೆ. 2022ರಲ್ಲಿ ಎರಡು ದಂಗೆಗಳ ನಂತರ ಮಿಲಿಟರಿ ಜುಂಟಾ ಅಧಿಕಾರ ವಶಪಡಿಸಿಕೊಂಡಿತ್ತು. ದೇಶದ ಅರ್ಧದಷ್ಟು ಭಾಗ ಭಯೋತ್ಪಾದಕರ ನಿಯಂತ್ರಣದಲ್ಲಿದೆ. ಜಿಹಾದಿ ಗುಂಪುಗಳು ಪ್ರಭಾವವನ್ನು ವಿಸ್ತರಿಸುತ್ತಿದ್ದು, ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿವೆ.