Menu

ವೈಟ್ ಟ್ಯಾಪಿಂಗ್ ರಸ್ತೆ ಗುಣಮಟ್ಟ ಪರಿಶೀಲಿಸಿದ ಡಿಸಿಎಂ ಡಿಕೆ ಶಿವಕುಮಾರ್

dk shivakumar

ಬೆಂಗಳೂರು: ವೈಟ್ ಟ್ಯಾಪಿಂಗ್ ನಡೆಯುತ್ತಿರುವ ರಸ್ತೆಗಳ ಗುಣಮಟ್ಟ ಚೆನ್ನಾಗಿರಬೇಕು. ಈ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರಬೇಕು. ಹೀಗಾಗಿ ನಾನು ಆಗಾಗ್ಗೆ ಕಾಮಗಾರಿಗಳ ಪರಿಶೀಲನೆ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದ ವಿವಿಧ ಕಡೆಗಳಲ್ಲಿ ಸೋಮವಾರ ರಸ್ತೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಮಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಅಧಿಕಾರಿಗಳು ತೋರಿಸುವ ಜಾಗದಲ್ಲಿ ಪರಿಶೀಲನೆ ಮಾಡುವುದಿಲ್ಲ, ನಾನು ಎಲ್ಲಿ ಹೇಳುತ್ತೇನೋ ಅಲ್ಲಿ ನಿಲ್ಲಿಸಿ ಪರಿಶೀಲನೆ ಮಾಡಲಾಗುವುದು. ಈಗ ಪರಿಶೀಲನೆ ಮಾಡಿದಾಗ ಅರ್ಧ ಅಡಿ ರಸ್ತೆ ಇದೆ. ಈ ರಸ್ತೆಯಲ್ಲಿ ನೀರು, ಕೇಬಲ್ ಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಎಲ್ಲಾ ಶಾಸಕರು ಅಗತ್ಯ ಸಹಕಾರ ನೀಡುತ್ತಿದ್ದಾರೆ” ಎಂದು ತಿಳಿಸಿದರು.

ಒಂದೇ ದಿನ ಎಲ್ಲಾ ಬದಲಾವಣೆ ಆಗುವುದಿಲ್ಲ

ಬೆಂಗಳೂರಿನ ಕಸ ವಿಲೇವಾರಿ ಮಾಫಿಯಾವಾಗಿದೆ ಎಂದು ಹೇಳಿದ್ದೀರಿ ಎಂದು ಕೇಳಿದಾಗ, “ಕಸ ವಿಲೇವಾರಿ ಟೆಂಡರ್ ಕರೆಯಲು ಇದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ವಜಾಗೊಳಿಸಿದೆ. ನಾಲ್ಕು ತಿಂಗಳ ಒಳಗೆ ಟೆಂಡರ್ ಕರೆಯಬೇಕು ಎಂದು ನ್ಯಾಯಾಲಯ ಅವಕಾಶ ನೀಡಿದ್ದು, ನಾವು ಟೆಂಡರ್ ಕರೆದು ಕಸ ವಿಲೇವಾರಿ ಕೆಲಸ ಮಾಡುತ್ತೇವೆ. ಕೆಲವರು ಒಂದೇ ಮನೆಯಲ್ಲಿ ಕೂತು ಟೆಂಡರ್ ಹಾಕಿರುವ ದಾಖಲೆಗಳು ನಮಗೆ ಸಿಕ್ಕಿವೆ. ಅವರು ವಿರೋಧ ಪಕ್ಷದವರ ಬಳಿ ಹೋಗಿ ದೂರು ನೀಡಿದ್ದರು. ಈಗಲೂ ಏನೇನೋ ತಂತ್ರ ಮಾಡುತ್ತಿದ್ದಾರೆ. ಅವರು ಸುಮ್ಮನೆ ಕೂತಿಲ್ಲ. ಆದರೆ ನಾವು ಶುದ್ಧ ಆಡಳಿತ ಕೊಟ್ಟು ಸ್ವಚ್ಛ ಬೆಂಗಳೂರು ನಿರ್ಮಾಣ ಮಾಡುತ್ತೇವೆ. ಒಂದೇ ದಿನ ಎಲ್ಲಾ ಬದಲಾವಣೆ, ಟನಲ್, ಫ್ಲೈಓರವ್, ಅಂಡರ್ ಪಾಸ್ ಆಗುವುದಿಲ್ಲ. ಹಂತ ಹಂತವಾಗಿ ಕೆಲಸ ಮಾಡಲಾಗುವುದು” ಎಂದರು.

ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಬಗ್ಗೆ ಕೇಳಿದಾಗ, “ಮಳೆಗಾಲದಲ್ಲಿ ಪರಿಸ್ಥಿತಿ ನಿರ್ವಹಣೆಗೆ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಹಾಗೂ ನಾನು ಎಚ್ಚರದಿಂದ ಇದ್ದೇವೆ” ಎಂದರು.

Related Posts

Leave a Reply

Your email address will not be published. Required fields are marked *