ಪಾಕಿಸ್ತಾನದ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿ ಪೆಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಟ್ಟಿದ್ದೇವೆ ಎಂದು ಭಾರತೀಯ ಸೇನಾಧಿಕಾರಿಗಳು ಹೇಳಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮೇ 9ರಂದು ಆರಂಭಿಸಿದ ಪಾಕಿಸ್ತಾನದ ಮೇಲಿನ ಯುದ್ಧದ ವಿವರಗಳನ್ನು ನೀಡಿದ ಭಾರತೀಯ ಸೇನಾಧಿಕಾರಿಗಳು, ಪಾಕಿಸ್ತಾನದ ಪಿಎಲ್-15 ಕ್ಷಿಪಣಿಯನ್ನು ಭಾರತ ಹೊಡೆದುರುಳಿಸಿದೆ. ಅಲ್ಲದೇ ಪಾಕಿಸ್ತಾನದ ಏರ್ ಡಿಫೆನ್ಸ್ ಭೇದಿಸಿ ಯಶಸ್ವಿಯಾಗಿ ದಾಳಿ ನಡೆಸಿದ್ದೇವೆ ಎಂದರು.
ಚೀನಾ ನಿರ್ಮಿತ ಪಾಕಿಸ್ತಾನದ ಏರ್ ಡಿಫೆನ್ಸ್ (ವಾಯು ರಕ್ಷಣಾ) ವ್ಯವಸ್ಥೆಯನ್ನು ಭಾರತದ ಸ್ವದೇಶೀ ನಿರ್ಮಿತ ಶಸ್ತ್ರಾಸ್ತ್ರಗಳು ಭೇದಿಸಿದ್ದು, ಅತ್ಯಂತ ದುರ್ಬಲಗೊಳಿಸಿದ್ದೇವೆ ಎಂದು ಭಾರತೀಯ ಮೂರು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ನೆಲೆಗಳ ಮೇಲೆ ದಾಳಿ ಮಾಡಿ ಅಪಾರ ಹಾನಿ ಉಂಟು ಮಾಡಿದ್ದೇವೆ. ಆದರೆ ಭಾರತದ ಏರ್ ಡಿಫೆನ್ಸ್ ಅತ್ಯಂತ ಪ್ರಬಲವಾಗಿದ್ದು, ಗೋಡೆಯಂತೆ ರಕ್ಷಣೆ ಮಾಡಿದೆ ಎಂದು ಅವರು ವಿವರಿಸಿದರು.
ಭಾರತ ಉಗ್ರರ ವಿರುದ್ಧ ಯುದ್ಧ ಸಾರಿತ್ತು. ಭಾರತೀಯ ನೌಕಾಪಡೆಗಳ ಮೂಲಕ ವಾಯುದಾಳಿಗೂ ಸಜ್ಜಾಗಿದ್ದೆವು. ಅಲ್ಲದೇ ಮಿಗ್ 29 ವಿಮಾನಗಳು ದಾಳಿ ಸನ್ನದ್ಧವಾಗಿದ್ದವು ಎಂದು ಏರ್ ಮಾರ್ಷಲ್ ಎ.ಭಾರ್ತಿ ತಿಳಿಸಿದರು.
ನಾಲ್ಕು ದಿನಗಳ ಯುದ್ಧದ ವೇಳೆ ಭಾರತ ನಾಗರಿಕರ ರಕ್ಷಣೆಗೂ ಒತ್ತು ನೀಡಿತ್ತು. ಇದರಿಂದ ನಾಗರಿಕ ಮೇಲಿನ ದಾಳಿಯನ್ನು ಯಶಸ್ವಿಯಾಗಿ ತಡೆದೆವು. ಅಲ್ಲದೇ ಪಾಕಿಸ್ತಾನ ನಾಗರಿಕರ ಮೇಲೂ ದಾಳಿ ಮಾಡದೇ ಉಗ್ರರ ನೆಲೆಗಳು ಹಾಗೂ ವಾಯುನೆಲೆಗಳ ಮೇಲಷ್ಟೇ ದಾಳಿ ಮಾಡಲಾಗಿದೆ ಎಂದು ಅವರು ಹೇಳಿದರು.