ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನಾಧಿಕಾರಿಗಳು ಭಾಗಿಯಾಗಿದ್ದ ಫೋಟೋ ವೈರಲ್ ಆಗಿದ್ದು, ಪಾಕ್ ಸೇನೆ ಆತ ಒಬ್ಬ ಮುಗ್ಧ ಧರ್ಮ ಪ್ರಚಾರಕ ಎಂದು ಸಮರ್ಥಿಸಿಕೊಂಡಿದೆ.
ಪಹಲ್ಗಾಮ್‌ನಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಲಷ್ಕರ್-ಇ-ತೈಬಾ ಸಂಘಟನೆಯ ಉಗ್ರ ಸತ್ತಿದ್ದ. ಆತನ ಅಂತ್ಯಕ್ರಿಯೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಭಯೋತ್ಪಾದಕ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್ ಹಾಗೂ ಪಾಕಿಸ್ತಾನ ಅಧಿಕಾರಿಗಳು ಭಾಗಿಯಾಗಿದ್ದ ಫೋಟೋ ವೈರಲ್ ಆಗಿ, ವಿವಾದ ಸೃಷ್ಟಿಯಾಗಿದೆ. ಇದಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಪಾಕಿಸ್ತಾನದ ಸೇನಾ ವಕ್ತಾರ ಡಿಜಿ ಐಎಸ್‌ಪಿಆರ್ ಮಾತನಾಡಿ, ಆತ ಒಬ್ಬ ಸರಳ, ಮುಗ್ಧ ಕುಟುಂಬದ ವ್ಯಕ್ತಿ, ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಅದನ್ನು ಸಾಬೀತುಪಡಿಸಲು ಪಾಕಿಸ್ತಾನ ರಾಷ್ಟ್ರೀಯ ಗುರುತಿನ ಚೀಟಿಯನ್ನು ಕೂಡ ಪ್ರದರ್ಶಿಸಿದ್ದಾರೆ.
ಭಾರತೀಯ ಅಧಿಕಾರಿಗಳ ಮಾಹಿತಿ ಪ್ರಕಾರ, ಭಾರತ ನಡೆಸಿದ ದಾಳಿಯಲ್ಲಿ ಸತ್ತಿದ್ದ ಭಯೋತ್ಪಾದಕನ ಅಂತ್ಯಕ್ರಿಯೆ ವೇಳೆ ಹಿರಿಯ ಎಲ್‌ಇಟಿ ಕಮಾಂಡರ್ ಹಫೀಜ್ ಅಬ್ದುಲ್ ರೌಫ್ ಭಾಗಿಯಾಗಿದ್ದ. ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.
ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ ಮಟ್ಟದ ಮಾತುಕತೆ ಸೋಮವಾರ (ಇಂದು) ನಿಗದಿಯಾಗಿದೆ ಎಂದು ಭಾರತದ ಡಿಜಿಎಂಓ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಪ್ರಕಟಿಸಿದ್ದಾರೆ. ನೌಕಾ ಕಾರ್ಯಾಚರಣೆಗಳ ಮಹಾನಿರ್ದೇಶಕ ವೈಸ್ ಅಡ್ಮಿರಲ್ ಎ.ಎನ್.ಪ್ರಮೋದ್ ಮತ್ತು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎ.ಕೆ.ಭಾರ್ತಿ ಸುದ್ದಿಗೋಷ್ಠಿಯಲ್ಲಿದ್ದರು. ಉನ್ನತ ಮಟ್ಟದ ಸಭೆಯಲ್ಲಿ ಉಭಯ ರಾಷ್ಟ್ರ ನಾಯಕರು ಪರಿಸ್ಥಿತಿತಿಗಳ ಕುರಿತು ಅವಲೋಕಿಸಲಿದ್ದಾರೆ.