ಕಾನೂನು ಬಾಹಿರವಾದ ಸಂಬಂಧದಿಂದ ಜನಿಸಿದ 15 ದಿನಗಳ ಹೆಣ್ಣು ಮಗುವನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆಯ ಪೊಲೀಸರು ಪತ್ತೆ ಹಚ್ಚಿ, ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬೆಳಿಗ್ಗೆ ಎಂಟಿಟಿಸಿ ಕ್ಯಾಟ್ರಸ್ ಹತ್ತಿರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋದಿಂದ ಮಗುವಿನ ಅಳುವಿನ ಶಬ್ದ ಕೇಳಿಸಿತ್ತು. ಸ್ಥಳೀಯರು ನೋಡಿ ದಾಗ 15 ದಿನಗಳ ಹೆಣ್ಣು ಶಿಶು ಕಂಡುಬಂದಿತ್ತು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಬ್ಯಾಟರಾಯನಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಶಿಶುವನ್ನು ರಕ್ಷಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಒಬ್ಬ ಪುರುಷ ಮತ್ತು ಮಹಿಳೆ ಮಗುವನ್ನು ಆಟೋದಲ್ಲಿ ಮಲಗಿಸಿ ಕೆಎಸ್‌ಆರ್ಟಿಸಿ ಬಸ್‌ನಲ್ಲಿ ವಿರಾಜಪೇಟೆಗೆ ಪರಾರಿಯಾಗಿರುವುದು ಗೊತ್ತಾಗಿದೆ. ತನಿಖೆ ತೀವ್ರಗೊಳಿಸಿದ ಪೊಲೀಸರು, ಆರೋಪಿಗಳಾದ ವಿರಾಜಪೇಟೆಯ ಅಪ್ಪಣ್ಣ ಮತ್ತು 30 ವರ್ಷದ ಮಹಿಳೆಯನ್ನು ವಿರಾಜಪೇಟೆಯಲ್ಲಿ ಪತ್ತೆ ಮಾಡಿ ಅಪ್ಪಣ್ಣನನ್ನು ಬಂಧಿಸಿದ್ದಾರೆ.
ಅಪ್ಪಣ್ಣ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ. ವಿಧವೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಆಕೆಗೆ ಈಗಾಗಲೇ ಒಂದು ಮಗುವಿದೆ. ಅಪ್ಪಣ್ಣನ ಜೊತೆಗಿನ ಸಂಬಂಧದಿಂದ ಈ ಹೆಣ್ಣು ಮಗು ಜನಿಸಿತ್ತು. ಮಗುವಿಗೆ ಸೀಳುತುಟಿಯ ದೈಹಿಕ ದೋಷವಿತ್ತು. ಈ ಕಾರಣಕ್ಕೆ ಜೋಡಿಯು ಮಗುವನ್ನು ಬೇಡವೆಂದು ತೀರ್ಮಾನಿಸಿತ್ತು. ವಿರಾಜಪೇಟೆಯಿಂದ ಬೆಂಗಳೂರಿಗೆ ಬಂದು ರಸ್ತೆ ಬದಿಯ ಆಟೋದಲ್ಲಿ ಮಗುವನ್ನು ಮಲಗಿಸಿ ಪರಾರಿಯಾಗಿದ್ದರು.