ಕಾಮಿಡಿ ಕಿಲಾಡಿಗಳು ಸೀಸನ್ 3’ರ ವಿನ್ನರ್ ರಾಕೇಶ್ ಪೂಜಾರಿ ಹೃದಯಾಘಾತದಿಂದ ಇಂದು (ಮೇ 12) ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ನಿನ್ನೆ ಬೆಳಗ್ಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ರ ಶೂಟಿಂಗ್ ಮುಗಿಸಿ ಸಂಜೆ ಗೆಳೆಯರ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಚಿತ್ರದ ಮೇಲೆ ರಾಕೇಶ್ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು.
ರಾಕೇಶ್ ನಿಧನಕ್ಕೆ ಕಾಮಿಡಿ ಕಿಲಾಡಿ ಶೋನ ತೀರ್ಪುಗಾರರಾಗಿದ್ದ ರಕ್ಷಿತಾ ಪ್ರೇಮ್ ಸಂತಾಪ ಸೂಚಿಸಿದ್ದಾರೆ. ನಗುಮುಖದ ರಾಕೇಶ್, ಮೃದು ಸ್ವಭಾವದ ವ್ಯಕ್ತಿತ್ವ ನಿನ್ನದು, ಮಿಸ್ ಯೂ ಮಗನೇ ಎಂದು ಬರೆದುಕೊಂಡಿದ್ದಾರೆ. ಸೀರುಡೆ ರಾಘು, ಗೋವಿಂದೇ ಗೌಡ ಸೇರಿದಂತೆ ಸಂತಾಪ ಸಲ್ಲಿಸಿದ್ದಾರೆ.
ಕನ್ನಡದ ‘ಪೈಲ್ವಾನ್’, ‘ಇದು ಎಂಥಾ ಲೋಕವಯ್ಯ’ ಚಿತ್ರಗಳಲ್ಲಿ, ತುಳು ಭಾಷೆಯ ‘ಪೆಟ್ಕಮ್ಮಿ’, ‘ಅಮ್ಮೆರ್ ಪೊಲೀಸ್’ ಮೊದಲಾದ ಸಿನಿಮಾಗಳಲ್ಲಿ ರಾಕೇಶ್ ನಟಿಸಿದ್ದಾರೆ. ಉಡುಪಿಯ ಹೂಡೆಯಲ್ಲಿ ಇಂದು ಸಂಜೆ ರಾಕೇಶ್ ಪೂಜಾರಿ ಅವರ ಅಂತ್ಯಕ್ರಿಯೆ ನಡೆಯಲಿದೆ.