“ರಾಮನಗರ ಪಟ್ಟಣ ಪ್ರದೇಶದ ಅಭಿವೃದ್ಧಿಗೆ ರೂ.150 ಕೋಟಿ, ನೀರಾವರಿ ಇಲಾಖೆಯಿಂದ ರೂ. 400 ಕೋಟಿ ಅನುದಾನ ನೀಡಲಾಗಿದೆ. ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ತರಲಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಹೊಸರೂಪ ನೀಡಲಾಗುವುದು,” ಎಂದು ಡಿಸಿಎಂ ಡಿ.ಕೆ. ಶಿವ ಕುಮಾರ್ ಹೇಳಿದ್ದಾರೆ.
ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
“100 ಎಕರೆ ಪ್ರದೇಶವನ್ನು ಗುರುತಿಸಿ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಶೀಘ್ರದಲ್ಲಿಯೇ ಇದರ ಬಗ್ಗೆ ಸಭೆ ನಡೆಸಲಾಗುವುದು. ಚನ್ನಪಟ್ಟಣದಲ್ಲಿ 2 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲಾಗಿದೆ. ವಸತಿ ಸಚಿವ ಜಮೀರ್ ಅವರು ನಿವೇಶನ ಅಭಿವೃದ್ಧಿಗೆ ಎಂದು ರೂ.40 ಕೋಟಿ ಹಣ ಮೀಸಲಿಟ್ಟಿದ್ದಾರೆ. ನಿಮ್ಮ ಊರಿನಲ್ಲಿಯೇ ಉದ್ಯೋಗ ದೊರೆಯುವಂತೆ ನಮ್ಮ ಸರ್ಕಾರ ಕೆಲಸ ಮಾಡಲಿದೆ” ಎಂದರು.
ನಾವು ಮಾಡುವ ಕೆಲಸಗಳಿಗೆ ಟೀಕೆ ಮಾಡುತ್ತಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಮ್ಮ ನಾಲ್ಕು ಜನ ಶಾಸಕರು ನಿಮ್ಮ ಜೊತೆ ಸದಾ ಇರುತ್ತಾರೆ. ಇಲ್ಲಿಂದ ಬಿಟ್ಟು ಹೋದವರ ಬಗ್ಗೆ ಚಿಂತೆ ಮಾಡಬೇಡಿ. ಬಡತನ, ಸಿರಿತನ ಶಾಶ್ವತವಲ್ಲ ಆದರೆ ನಾವು ಮಾಡುವ ಕೆಲಸಗಳು ಶಾಶ್ವತ ಎಂದಿದ್ದಾರೆ.
ಯಾರೇ ಎಷ್ಟೇ ಕುತಂತ್ರ ಮಾಡಿದರೂ ಬೆಂಗಳೂರು ದಕ್ಷಿಣ ಹೆಸರನ್ನು ಅಳಿಸಲು ಸಾಧ್ಯವಿಲ್ಲ. 25-30 ವರ್ಷ ಅವಕಾಶವನ್ನು ಬೆಂಗಳೂರಿನಿಂದ ದೆಹಲಿವರೆಗೆ ನೀಡಿದ್ದೀರಿ. ಆದರೂ ಬರೇ ಬುಟ್ಟಿ ಬೇವಿನ ಸೊಪ್ಪು ನಂದೆ ಬೆಳಗು ಪೂಜಾರಿ ಅನ್ನುವಂತಾಯಿತು. ಬರೀ ಖಾಲಿ ಟ್ರಂಕು, ಖಾಲಿ ಮಾತು ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಹೆಸರು ಹೇಳದೆ ಕುಟುಕಿದರು.
ಹಲವು ವರ್ಷಗಳ ನಂತರ ರಾಮನಗರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಬಂದಿದೆ. ನಿಮ್ಮ ಸಹಕಾರದಿಂದ, ನಿಮ್ಮ ಅಭಿವೃದ್ಧಿಗೆ ನಾವು ಸಿದ್ದರಾಗಿದ್ದೇವೆ ಎಂದು ಹೇಳಿದರು.
“ಕೇವಲ ಪರಿಶಿಷ್ಟ ಜಾತಿ, ಪಗಂಡಕ್ಕೆ ಮಾತ್ರ ಸೀಮಿತ ಮಾಡಿ ಅಂಬೇಡ್ಕರ್ ಅವರನ್ನು ಕಟ್ಟಿ ಹಾಕಲಾಗುತ್ತಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂದು ಸಂವಿಧಾನದ ಮೂಲಕ ಸಮಾನತೆ ತಂದವರು. ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ನೆರವಾದವರು. ನಮ್ಮನ್ನು ನಾವೇ ಆಳಿಕೊಳ್ಳುವುದಕ್ಕೆ ಶಕ್ತಿ ತುಂಬಿದವರು ಎಂದರು.
“ಪ್ರತಿದಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನಪಿಸಿಕೊಂಡು ದಿನ ಪ್ರಾರಂಭ ಮಾಡುತ್ತೇನೆ. ಎಲ್ಲಾ ವರ್ಗದ ಜನರನ್ನು ರಕ್ಷಣೆ ಮಾಡುವುದೇ ನಮ್ಮ ಗುರಿ. ಇದು ಅಂಬೇಡ್ಕರ್ ಅವರಿಂದ ಕಲಿತ ಪಾಠ. ಅವರನ್ನು ನೆನಪಿಸಿಕೊಳ್ಳದಿದ್ದರೆ ನಮಗೆ ನಾವು ಮಾಡಿಕೊಳ್ಳುವ ಮೋಸ. ಅವರ ಪ್ರತಿಮೆಗೆ ಪೂಜೆ ಮಾಡುವು ದಕ್ಕಿಂತ ಪ್ರತಿಭೆಗೆ ಪೂಜೆ ಮಾಡಬೇಕು” ಎಂದು ಹೇಳಿದರು.
“2013- 2018 ರಲ್ಲಿ ಅಧಿಕಾರಕ್ಕೆ ಬಂದಾಗ ಪರಿಶಿಷ್ಟ ಪಂಗಡ ಮತ್ತು ಜಾತಿಯವರ ಅಭಿವೃದ್ಧಿಗೆ ಎಸ್ ಇ ಎಸ್ ಪಿ, ಟಿಎಸ್ ಪಿ ಅನುದಾನವನ್ನು ಮೀಸಲಿಡಲಾ ಯಿತು. ಇದು ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಮಾತ್ರ ಸಾಧ್ಯವಾಯಿತು. ಸೋಲಾರ್ ಯೋಜನೆಯಲ್ಲಿ ಮೀಸಲಾತಿ ನೀಡಲಾಗಿದೆ. ಈಗ ಗುತ್ತಿಗೆಯಲ್ಲಿಯೂ ಸಹ ರೂ.2 ಕೋಟಿವರೆಗೆ ಮೀಸಲಾತಿ ನೀಡಲಾಗಿದೆ. ಇದು ಅಂಬೇಡ್ಕರ್ ಅವರು ನಮಗೆ ಕೊಟ್ಟಿರುವ ಶಕ್ತಿಯಿಂದ ಸಾಧ್ಯವಾಯಿತು” ಎಂದರು.
“ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಪ್ರತಿಮೆಗಳಿರುವುದು ಅಂಬೇಡ್ಕರ್ ಅವರದ್ದು. ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕರಾಗಿ ಪ್ರಮಾಣ ವಚನ ತೆಗೆದುಕೊಳ್ಳುವಾಗ ಸಂವಿಧಾನವನ್ನು ಕೈಯಲ್ಲಿ ಹಿಡಿದು ತೆಗೆದುಕೊಂಡರು. ಏಕೆಂದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎನ್ನುವ ಆತಂಕ ನಮಗೆಲ್ಲಾ ಎದುರಾಗಿತ್ತು. ಎದುರಾಳಿ ಪಕ್ಷಗಳು ಸಂವಿಧಾನ ಬದಲಾವಣೆ ಎನ್ನುವ ಆತಂಕ ಸೃಷ್ಟಿಸಿದ್ದವು” ಎಂದು ತಿಳಿಸಿದರು.
“ಮಹಾತ್ಮ ಗಾಂಧಿ ಅವರು ಕುಳಿತಂತಹ ಜಾಗದಲ್ಲಿ ನಮ್ಮ ನಾಡಿನ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿದ್ದಾರೆ. ಅವರ ಮುಖಂಡತ್ವದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ನಡೆಸಲಾಯಿತು. ಬುದ್ದ, ಬಸವ ಮನೆಬಿಟ್ಟ, ಏಸುಕ್ರಿಸ್ತ ಶಿಲುಬೆಗೆ ಏರಿದ, ಪೈಗಂಬರ್ ದಿವ್ಯವಾಣಿ ಕೇಳಿದ ಘಳಿಗೆಯಲ್ಲಿ, ಭೀಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ನೀಡಿದ ಘಳಿಗೆಯಲ್ಲಿ ನಾವು ನೀವು ಸೇರಿದ್ದೇವೆ” ಎಂದು ಹೇಳಿದರು.