ನವದೆಹಲಿ: ಪಾಕಿಸ್ತಾನ ಸೇನೆ ಭಾರತದ ಗಡಿಯತ್ತ ಮುನ್ನುಗ್ಗುತ್ತಿದ್ದು, ಈ ಬಗ್ಗೆ ಭಾರತೀಯ ಸೇನೆ ಕಟ್ಟೆಚ್ಚರ ವಹಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
1999ರ ಕಾರ್ಗಿಲ್ ಯುದ್ಧದ ನಂತರ ಪಾಕಿಸ್ತಾನ ಇದೇ ಮೊದಲ ಬಾರಿಗೆ ಭಾರತದ ಗಡಿಯತ್ತ ಸೇನೆಯನ್ನು ರವಾನಿಸುತ್ತಿದೆ. ಆದರೆ ಕಟ್ಟೆಚ್ಚರ ವಹಿಸುವಂತೆ ಭಾರತೀಯ ಸೇನೆಗೆ ಮುನ್ನೆಚ್ಚರಿಕೆಯ ಮಾಹಿತಿ ರವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಭಾರತ ಪಾಕಿಸ್ತಾನದ 6 ವಾಯುನೆಲೆಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಗಡಿಯ 26 ಪ್ರದೇಶಗಳ ಮೇಲೆ ಡ್ರೋಣ್, ಶೆಲ್ ಹಾಗೂ ಗುಂಡಿನ ದಾಳಿ ನಡೆಸಿದೆ. ಇದರಲ್ಲಿ ಒಂದು ಅತ್ಯಾಧುನಿಕ ಕ್ಷಿಪಣಿಯೊಂದನ್ನು ಬಳಸಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿತ್ತು.
ಭಾರತದ ಮೇಲೆ ಪ್ರಹಾರ ನಡೆಸಲು ಗಡಿಯಲ್ಲಿ ಪಾಕಿಸ್ತಾನ ಸೇನೆ ಮುಂದೆ ಹೆಜ್ಜೆ ಇಡುತ್ತಿದ್ದು, ಪ್ರಚೋದನಕಾರಿಯಾಗಿ ನಡೆದುಕೊಳ್ಳುತ್ತಿದೆ. ಆದರೆ ಭಾರತೀಯ ಸೇನೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಮುಂದಿನ ದಾಳಿ ಪ್ರಯತ್ನಗಳನ್ನು ಹತ್ತಿಕ್ಕಲು ಸಜ್ಜಾಗಿವೆ ಎಂದು ಕರ್ನಲ್ ಸೋಫಿಯಾ ಖುರೇಷಿ ತಿಳಿಸಿದ್ದಾರೆ.
ಪಾಕಿಸ್ತಾನ ಆಪರೇಷನ್ ಬುನಿಯಾನ್ ಉಲ್ ಮಾರೂಸ್ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಈಗಾಗಲೇ ಭಾರತದ ಗಡಿಯಲ್ಲರುವ ಉಧಂಪುರ್, ಭುಜ್, ಪೆಹಲ್ಕೋಟ್, ಬಂಟಿಡಾದಲ್ಲಿ ದಾಳಿ ನಡೆಸಲು ಯತ್ನಿಸಿದೆ ಎಂದು ಅವರು ವಿವರಿಸಿದರು.