ನವದೆಹಲಿ: ಭಾರತದ ಗಡಿ ಪ್ರದೇಶಗಳ 26 ಸ್ಥಳಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋಣ್ ಮತ್ತು ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನದ 4 ವಾಯುನೆಲೆಗಳ ಮೇಲೆ ದಾಳಿ ಮಾಡಿದೆ.
ಜಮ್ಮು ಕಾಶ್ಮೀರ ಮತ್ತು ಗುಜರಾತ್ ನೆಲೆಗಳ ಮೇಲೆ ಪಾಕಿಸ್ತಾನ ಶುಕ್ರವಾರ ರಾತ್ರಿ ಹಲವು ಕಡೆ ಡ್ರೋಣ್ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ವಾಯುಪಡೆ ವಿಮಾನಗಳು ಪಾಕಿಸ್ತಾನದ ವಿಮಾನ ನಿಲ್ದಾಣ ಹಾಗೂ ವಾಯುನೆಲೆಗಳ ಮೇಲೆ ಪ್ರತಿದಾಳಿ ನಡೆಸಿ ಸಾಕಷ್ಟು ಹಾನಿ ಉಂಟು ಮಾಡಿದೆ.
ಪಾಕಿಸ್ತಾನದ ರಾವಲ್ಪಿಂಡಿಯ ನೂರ್ ಖಾನ್, ಚಕ್ವಾಲ್ ನ ಮುರಿದ್ ಮತ್ತು ರಾಫಿಕ್ ನಲ್ಲಿರುವ ಶೋರ್ ಕೋಟ್ ಮತ್ತು ಸಿಯಾಲ್ ಕೋಟ್ ಮೇಲೆ ಯಶಸ್ವಿಯಾಗಿ ಭಾರತ ದಾಳಿ ನಡೆಸಿದೆ. ದಾಳಿ ಬೆನ್ನಲ್ಲೇ ಪಾಕಿಸ್ತಾನ ಎಲ್ಲಾ ವಾಯುನೆಲೆಗಳನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಚ್ಚಲು ನಿರ್ಧರಿಸಿದೆ.
ಪಾಕಿಸ್ತಾನ ಈ ಬಾರಿ ದೂರಗಾಮಿ ಕ್ಷಿಪಣಿಗಳನ್ನು ಬಳಸಿದೆ. ಆದರೆ ಭಾರತದ ರಕ್ಷಣಾ ವ್ಯವಸ್ಥೆಗಳು ಈ ದಾಳಿಯನ್ನು ವಿಫಲಗೊಳಿಸಿದ್ದು, ಪಾಕಿಸ್ತಾನದ ಮೂರು ಜೆಟ್ ವಿಮಾನಗಳನ್ನು ಭಾರತ ಹೊಡೆದುರುಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ 6 ರಾಡರ್ ಗಳನ್ನು ನಾಶಗೊಳಿಸಲಾಗಿದ್ದು, ಪಾಕಿಸ್ತಾನದ ಸೇನಾ ನೆಲಕಗಳ ಮೇಲಷ್ಟೇ ದಾಳಿ ಮಾಡಲಾಗಿದ್ದು, ಯಾವುದೇ ನಾಗರಿಕರ ಮೇಲೆ ದಾಳಿ ಆಗಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.