ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಅಗತ್ಯಬಿದ್ದರೆ ಯಾವುದೇ ಸಮಯದಲ್ಲಿ ಮುಂದುವರಿಸಲಾಗುವುದು. ಇದಕ್ಕಾಗಿ ಸೇನೆ ಸನ್ನದ್ಧವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ದೆಹಲಿಯಲ್ಲಿ ಗುರುವಾರ ನಡೆದ ಸರ್ವಪಕ್ಷ ಸಭೆಯಲ್ಲಿ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ ಸದ್ಯಕ್ಕೆ ಇಲ್ಲಿಗೆ ನಿಲ್ಲಿಸಲಾಗಿದೆ. ಆದರೆ ಯಾವುದೇ ಸಮಯದಲ್ಲಿ ಆಪರೇಷನ್ ಸಿಂಧೂರ 2.0 ನಡೆಸಲಾಗುವುದು ಎಂದರು.
ಭಾರತ ಸದಕ್ಕೆ ಇಲ್ಲಿಗೆ ಕಾರ್ಯಾಚರಣೆ ನಿಲ್ಲಿಸಿದೆ. ಪಾಕಿಸ್ತಾನ ಒಂದು ವೇಳೆ ಪ್ರತಿಕ್ರಿಯೆ ನೀಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಅಲ್ಲದೇ ಉಗ್ರರ ಮೇಲೆ ಅಗತ್ಯಬಿದ್ದರೆ ಮತ್ತೊಮ್ಮೆ ದಾಳಿ ನಡೆಸಲು ಹಿಂಜರಿಯುವುದಿಲ್ಲ ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.
ಪಾಕಿಸ್ತಾನದ ನೆಲದಲ್ಲಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಅವರು ಅಂಕಿ-ಅಂಶ ನೀಡಿದರು.
ಈ ವೇಳೆ ದಾಳಿಯ ನಂತರ ಪಾಕಿಸ್ತಾನದಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗಿದ್ದು, ಅತ್ಯಂತ ಮಹತ್ವದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಭಾರತೀಯ ಸೇನೆಯ ದಾಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಎಲ್ಲಾ ಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ಭಾರತೀಯ ಸೇನೆಯ ನಿಖರ ದಾಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಉಗ್ರರ ವಿರುದ್ಧ ಕೇಂದ್ರ ಸರ್ಕಾರ ಹಾಗೂ ಭಾರತೀಯ ಸೇನೆ ಯಾವುದೇ ಕ್ರಮ ಕೈಗೊಂಡರೂ ನಮ್ಮ ಬೆಂಬಲವಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು.