ಪಹಲ್ಗಾಂನಲ್ಲಿ ಉಗ್ರರು 26 ಮಂದಿಯನ್ನು ಹತ್ಯೆಗೈದ ಬಳಿಕ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಯಶಸ್ವಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಉಗ್ರರು ಹತರಾಗಿದ್ದು, ಅವರ ನೆಲೆಗಳು ನಾಶವಾಗಿವೆ. ಭಯೋತ್ಪಾದಕರನ್ನು ದಮನ ಮಾಡಿ ದೇಶದಲ್ಲಿ ಶಾಂತಿ ಸ್ಥಾಪನೆಗೆ ಹೋರಾಡುತ್ತಿರುವ ಹೆಮ್ಮೆಯ ಸೈನಿಕರಿಗೆ ಶಕ್ತಿ ತುಂಬಲು ಮತ್ತು ಅವರ ಶ್ರೇಯಸ್ಸಿಗಾಗಿ ರಾಜ್ಯದ ಎಲ್ಲಾ ವಕ್ಫ್‌ಗೆ ಸೇರಿದ ಮಸೀದಿಗಳು ಮತ್ತು ಇತರ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಸೂಚನೆ ನೀಡಿದ್ದಾರೆ.
ಮುಜರಾಯಿ ದೇಗುಲಗಳಲ್ಲಿ ಸೇನೆ ಮತ್ತು ಯೋಧರಿಗೆ ಒಳಿತಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವಂತೆ ಸಚಿವ ರಾಮಲಿಂಗಾ ಗೌಡ ಆದೇಶಿಸಿದ್ದು, ಅದರಂತೆ ಬೆಂಗಳೂರು ಸೇರಿದಂತೆ ರಾಜ್ಯದ ದೇಗುಲಗಳಲ್ಲಿ ವಿಶೇಷ, ಪೂಜೆ, ಪ್ರಾರ್ಥನೆ, ಹೋಮ ನಡೆದಿದೆ.