ಕೋಟ್ಯಾಂತರ ರೂಪಾಯಿಗಳ ಅಕ್ರಮ ಆಸ್ತಿ ಸಂಗ್ರಹ ಆರೋಪದ ಹಿನ್ನೆಲೆಯಲ್ಲಿ ಕೋಲಾರ, ದಾವಣಗೆರೆ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿ ಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳಲ್ಲಿ ದಾಖಲೆಗಳನ್ನು, ಕಡತಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸುತ್ತಿ ದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಲೋಕಾಯುಕ್ತ ಎಸ್ಪಿ ಧನಂಜಯ ನೇತೃತ್ವದ ತಂಡವು ಸರ್ವೆ ಇಲಾಖೆಯ ಸೂಪರ್ವೈಸರ್ ಸುರೇಶ್ ಬಾಬು ಮನೆ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಸಂಗ್ರಹದ ಆರೋಪದಡಿ ಸುರೇಶ್ ಬಾಬು ಮತ್ತು ಇತರ ಅಧಿಕಾರಿಗಳ ವಿರುದ್ಧ ಈ ಕಾರ್ಯಾಚರಣೆ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯಲ್ಲಿಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ನೀರು ಸರಬರಾಜು ಇಲಾಖೆಯ ಸಹಾಯಕ ಇಂಜಿನಿಯರ್ ಬಿ. ರವಿ ಅವರ ಕಚೇರಿ ಮತ್ತು ಅವರ ತಾಯಿಯ ನಿವಾಸದ ಮೇಲೆ ದಾಳಿಮಾಡಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತ ತಂಡವು ಆಸ್ತಿ, ಬ್ಯಾಂಕ್ ಖಾತೆಗಳು, ಮತ್ತು ಇತರ ಸಂಬಂಧಿತ ದಾಖಲೆಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದೆ. ಈ ದಾಳಿಗಳು ಕೇವಲ ಆರಂಭ ವಷ್ಟೇ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳಲ್ಲಿಯೂ ಕಾರ್ಯಾಚರಣೆಗಳು ನಡೆಯುವ ಸಾಧ್ಯತೆ ಇದೆ. ವಶಪಡಿಸಿ ಕೊಂಡ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಿಶ್ಲೇಷಿಸಲಿದ್ದಾರೆ. ಆರೋಪಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಸಾಧ್ಯತೆ ಇದೆ.