Wednesday, December 10, 2025
Menu

ಕೆಪಿಎಸ್‌ಸಿ ಕರ್ಮಕಾಂಡದ ಸಮಗ್ರ ತನಿಖೆಗೆ ಸಚಿವ ಪ್ರಲ್ಹಾದ ಜೋಷಿ ಆಗ್ರಹ

ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಸಮಗ್ರ ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.

ಕೆಪಿಎಸ್‌ಸಿ ಸಂಸ್ಥೆಯ ಪರೀಕ್ಷೆ ಪ್ರಹಸನಗಳು ಒಂದೆರೆಡಲ್ಲ, ಬೆಳಗ್ಗೆ ಪರೀಕ್ಷೆ ಇದ್ದರೆ ಸಂಜೆವರೆಗೂ ಅರ್ಜಿ ಸ್ವೀಕಾರ, ಮಧ್ಯರಾತ್ರಿವರೆಗೂ ಹಾಲ್‌ಟಿಕೆಟ್‌ ವಿತರಣೆ, ಪ್ರಶ್ನೆ ಪತ್ರಿಕೆಯಲ್ಲಿ ತಪ್ಪು ತಪ್ಪು ಪ್ರಶ್ನೆಗಳ ಮುದ್ರಣ, ಪ್ರಶ್ನೆ ಪತ್ರಿಕೆ ಸೋರಿಕೆ ಸಾಲದ್ದಕ್ಕೆ ಈಗ “ಕಾರ್‌ ಪಂಕ್ಚರ್‌” ಎಂಬ ಹೊಸದೊಂದು ನಾಟಕ. ಇದೆಲ್ಲದರ ಹೂರಣ ಬಯಲಾಗಲು ಸರ್ಕಾರ ಸಮಗ್ರ ತನಿಖೆ ನಡೆಸಲೇಬೇಕು ಎಂದು ಸಚಿವರು ಒತ್ತಾಯಿಸಿದ್ದಾರೆ.

384 ಪ್ರೊಬೇಷನರಿಸ್‌ ಹುದ್ದೆಗಳಿಗೆ ರಾತ್ರೋರಾತಿ ಹಾಲ್‌ಟಿಕೆಟ್‌ ವಿತರಿಸಿ ಬೆಳಗ್ಗೆ ಪರೀಕ್ಷೆ ನಡೆಸುವ ಜರೂರತ್‌ ಏನಿತ್ತು, ಇದು ಯಾರ ಸುಖಕ್ಕಾಗಿ ಎಂದು ಪ್ರಶ್ನಿಸಿರುವ ಸಚಿವ ಜೋಶಿ, ಕೆಪಿಎಸ್‌ಸಿ ಸಾಲು ಸಾಲು ಲೋಪವೆಸಗಿದ ಅಭ್ಯರ್ಥಿಗಳ ಮನೋಸ್ಥೈರ್ಯವನ್ನೇ ಕುಗ್ಗಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಕ್ಷಾಂತರ ಅಭ್ಯರ್ಥಿಗಳು ನಾಗರೀಕ ಸೇವೆಯ ಕನಸಿನಲ್ಲಿ ವರ್ಷಗಟ್ಟಲೇ ಪರಿಶ್ರಮ ವಹಿಸಿ ಅಭ್ಯಾಸ ಮಾಡಿ ಕೊನೆಯ ಹಂತ ಎನ್ನುವಂತೆ ಅತ್ಯಂತ ಶ್ರದ್ಧೆಯಿಂದ ಪರೀಕ್ಷೆ ಬರೆಯುತ್ತಾರೆ. ಅವರ ಪರಿಶ್ರಮ, ಅಭ್ಯಾಸದ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಅರಿವಿದಿಯೇ ಎಂದು ಪ್ರಶ್ನಿಸಿದ ಸಚಿವರು, ಕೆಪಿಎಸ್‌ಸಿಯ ಈ ಪ್ರಹಸನ ಕುರಿತು ಸರ್ಕಾರ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ದುರಾಡಳಿತ ಮತ್ತು ಭ್ರಷ್ಟಾಚಾರದಿಂದಾಗಿ ಕೆಪಿಎಸ್‌ಸಿ ಪರೀಕ್ಷಾ ತಯಾರಿ ನಡೆಸಿದ ವಿದ್ಯಾರ್ಥಿಗಳ ಭವಿಷ್ಯ ಅಡಕತ್ತರಿಗೆ ಸಿಲುಕಿದಂತಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನಜೀವನ ದುಸ್ತರ ಮಾಡಿರುವ ಈ ಕಾಂಗ್ರೆಸ್‌ ಸರ್ಕಾರ ಸಾಲದ್ದಕ್ಕೆ ವಿದ್ಯಾರ್ಥಿಗಳ ಭವಿಷ್ಯದೊಂದಿಗೂ ಚೆಲ್ಲಾಟವಾಡುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಆಡಳಿತ ವ್ಯವಸ್ಥೆ, ಕಾರ್ಯತತ್ಪರತೆ ದಿನೇದಿನೇ ಯಾವ ರೀತಿ ಕುಸಿಯುತ್ತಿದೆ ಎಂಬುದಕ್ಕೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಬಯಲಾದ ಈ ಲೋಪದೋಷಗಳೇ ನಿದರ್ಶನ. ಈ ಪರಿಸ್ಥಿತಿಗೆ ಸರ್ಕಾರವೇ ಸಂಪೂರ್ಣ ಹೊಣೆ ಹೊತ್ತು ಕೂಡಲೇ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಿಎಂ ಕೆಪಿಎಸ್‌ಸಿ ವಿರುದ್ಧ ದರ್ಪ ಪ್ರದರ್ಶಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ನಿಷ್ಠಾವಂತ ಮತ್ತು ಖಡಕ್‌ ಅಧಿಕಾರಿಗಳ ವಿರುದ್ಧ ದರ್ಪ ತೋರುವುದನ್ನು ಬಿಟ್ಟು ದೇಶದಲ್ಲೇ ಒಂದು ಕಪ್ಪು ಚುಕ್ಕೆಯಂತೆ ಬೇಜವಾಬ್ದಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕೆಪಿಎಸ್‌ಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಚಾಟಿ ಬೀಸಿದ್ದಾರೆ.

ಕೆಪಿಎಸ್‌ಸಿ ಕೊಟ್ಟ ಸ್ಪಷ್ಟೀಕರಣ ದುರಂತ: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಪರೀಕ್ಷಾರ್ಥಿಗಳು ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಕೆಪಿಎಸ್‌ಸಿ ಬಾಲಿಶ ಸ್ಪಷ್ಟೀಕರಣ ನೀಡಿದ್ದು, ನಿಜಕ್ಕೂ ದುರಂತ. ಪರೀಕ್ಷೆಯಲ್ಲಿ ಯಾವುದೇ ಸಂದೇಹಗಳಿಗೆ ಆಸ್ಪದವಾಗದಂತೆ ನೋಡಿಕೊಳ್ಳುವುದು ಅಗತ್ಯ ಮತ್ತು ಕಡ್ಡಾಯವಾಗಿತ್ತು ಎಂದು ಸಚಿವರು ಹೇಳಿದ್ದಾರೆ.

ಕೆಪಿಎಸ್‌ಸಿ, ಪರೀಕ್ಷಾರ್ಥಿಗಳಿಗೆ ಅದ್ಯಾವ ಸಂದೇಶ ರವಾನಿಸಲು ಈ ರೀತಿಯ ಸ್ಪಷ್ಟೀಕರಣ ನೀಡುತ್ತಿದೆ, ಕೆಪಿಎಸ್‌ಸಿಯನ್ನು ಗಂಭೀರವಾಗಿ ಪರಿಗಣಿಸಬೇಡಿ ಎಂದೇ, ವಿಶೇಷವಾಗಿ ನಮ್ಮ ಪರೀಕ್ಷಾ ತಯಾರಿಗೆ ನಿಮ್ಮ ಅಮೂಲ್ಯ ಸಮಯವನ್ನು ಕಳೆಯಬೇಡಿ ಎಂದೇ ಅಥವಾ ಕೆಪಿಎಸ್‌ಸಿ ತನ್ನ ಕೆಲಸವನ್ನು ಗಂಭೀರವಾಗಿ ಮಾಡುತ್ತಿಲ್ಲ ಎಂಬರ್ಥದಲ್ಲಿ ಸಲ್ಲದ ಸ್ಪಷ್ಟೀಕರಣ ನೀಡಿದೆಯೇ ಎಂದು ಜೋಶಿ ತರಾಟೆಗೆ ತೆಗೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *