ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ಶಬರಿಮಲೆಗೆ ಹೋಗುತ್ತಿದ್ದು, ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವರು ಎಂದು ಹೇಳಲಾಗಿದೆ.
ದ್ರೌಪದಿ ಮುರ್ಮು, ಕುಮಾರಕೋಮ್ ನಿಂದ ಟೇಕ್ ಆಫ್ ಆದ ನಂತರ ನಿಲಕ್ಕಲ್ ನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿದು ಕಾರಿನಲ್ಲಿ ಪಂಪಾಗೆ ಹೋಗಿ ಇರುಮುಡಿ ಹೊತ್ತು ತೆರೆಳಲಿದ್ದಾರೆ. ದೇವಸ್ವಂ ಅತಿಥಿ ಗೃಹ ಅಥವಾ ಶಬರಿ ಅತಿಥಿ ಗೃಹದಲ್ಲಿ ತಂಗುವರು. ರಾಷ್ಟ್ರಪತಿಗಳ ಕಚೇರಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಈ ಸಂಬಂಧ ಸೂಚನೆ ಬಂದಿದ್ದು, ದ್ರೌಪದಿ ಮುರ್ಮು 18 ಮತ್ತು 19 ರಂದು ಶಬರಿಮಲೆಯಲ್ಲಿ ಇರುತ್ತಾರೆ.
ಮೇ 18 ರಂದು ಪಾಲಾದಲ್ಲಿ ನಡೆಯುವ ಸೇಂಟ್ ಥಾಮಸ್ ಕಾಲೇಜು ಜಯಂತಿ ಆಚರಣೆಯಲ್ಲಿ ರಾಷ್ಟ್ರಪತಿ ಭಾಗವಹಿಸುವರು. ಮೇ 19 ರಂದು ಪಂಪಾಗೆ ಭೇಟಿ ನೀಡಿ ಶಬರಿಮಲೆಗೆ ಹೋಗಲಿದ್ದಾರೆ. ಮೇ 14 ರಂದು ಎಡವ ಮಾಸದ ಪೂಜೆಗಾಗಿ ದೇವಾಲಯ ತೆರೆಯಲಿದ್ದು, 19 ರಂದು ರಾತ್ರಿ 10 ಗಂಟೆಗೆ ಮುಚ್ಚಲಿದೆ.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಶಬರಿಮಲೆಗೆ ಭೇಟಿ ನೀಡುವ ಬಯಕೆ ವ್ಯಕ್ತಪಡಿಸಿದ್ದರು, ಭದ್ರತಾ ಇಲಾಖೆಯು ಅವರು ನೇರವಾಗಿ ಇಳಿಯಲು ಸನ್ನಿಧಾನದಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಯೋಜಿಸಿತ್ತು. ಆದರೆ ವಿರೋಧದಿಂದಾಗಿ ಆ ಆಲೋಚನೆಯನ್ನು ಕೈ ಬಿಡಲಾಗಿತ್ತು.