ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸ್ಥಳೀಯ ಪೊಲೀಸ್ ಠಾಣೆಯ ಮುಸ್ಲಿಂ ಹೆಡ್ ಕಾನ್ಸ್‌ಟೇಬಲ್ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿದೆ.
ಸೇಡಿಗಾಗಿ ಫಾಝಿಲ್ ತಮ್ಮ ಆದಿಲ್ ಮೆಹರೂಫ್ ಸುಫಾರಿ ಕೊಟ್ಟು ಹತ್ಯೆ ನಡೆಸಿದ್ದಾನೆಂದು ಆರೋಪಿಗಳ ಬಂಧನ ವೇಳೆ ಸುದ್ದಿ ಕೇಳಿ ಬಂದಿತ್ತು. ಬಳಿಕ ಹತ್ಯೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆ ಭಾಗಿಯಾಗಿದೆ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಈಗ ಹತ್ಯೆಯಲ್ಲಿ ಪೊಲೀಸ್ ಕೈ ಜೋಡಿಸಿರುವ ಮಾಹಿತಿ ಹೊರಬಂದಿದೆ.
ಆರಂಭದಿಂದಲೂ ಸುಹಾಸ್ ತಾಯಿ ಬಜಪೆ ಪೊಲೀಸರೇ ನಮ್ಮ ಮಗನನ್ನು ಸಾಯುವಂತೆ ಮಾಡಿದ್ದಾರೆಂದು ಎಂದು ಹೇಳುತ್ತಿದ್ದರು. ಪ್ರಕರಣದ ತನಿಖೆಯನ್ನು ಎನ್‌ಐಎಗೆ ನೀಡುವಂತೆ ಆಗ್ರಹ ತೀವ್ರಗೊಂಡಿದೆ.
ಸುಹಾಸ್ ಹತ್ಯೆಯಲ್ಲಿ ಬಜಪೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಶೀದ್ ನೇರವಾಗಿ ಭಾಗಿಯಾಗಿದ್ದಾರೆ ಎನ್ನುವ ಶಂಕೆ ದಟ್ಟವಾಗಿದೆ. ಸುಹಾಸ್ ಶೆಟ್ಟಿ ಬಜಪೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಈ ವ್ಯಾಪ್ತಿಗೆ ಬರುವ ಬಜಪೆ ಪೊಲೀಸ್ ಠಾಣೆ ಪೊಲೀಸರು ಆಗಾಗ ಸುಹಾಸ್ ನನ್ನು ಠಾಣೆಗೆ ಕರೆಸಿ ಕಿರುಕುಳ ನೀಡುತ್ತಿದ್ದರು. ಕಾನ್ಸ್‌ಟೇಬಲ್ ರಶೀದ್ ಪದೇ ಪದೆ ಕರೆದು ಕಿರುಕುಳ ನೀಡುತ್ತಿದ್ದರು. ವಾರದ ಹಿಂದೆ ಕುಡುಪು ಎಂಬಲ್ಲಿ ಅಶ್ರಫ್ ಎಂಬಾತನ ಗುಂಪು ಹತ್ಯೆ ನಡೆದ ದಿನವೂ ರಶೀದ್ ಸುಹಾಸ್ ಶೆಟ್ಟಿಯನ್ನು ಬಜಪೆ ಠಾಣೆಗೆ ಕರೆಸಿ ನೀನು ಯಾವುದೇ ಮಾರಕಾಸ್ತ್ರಗಳನ್ನು ಇಡಬೇಡ, ನಿನ್ನ ಜೊತೆ ಯಾರೂ ಇರಬಾರದು, ಹೆಚ್ಚಿಗೆ ಓಡಾಡಬೇಡ ಎಂದು ಎಚ್ಚರಿಕೆ ನೀಡಿದ್ದರು. ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಗಮನಿಸುತ್ತಿದ್ದ ಹೆಡ್ ಕಾನ್ಸ್‌ಟೇಬಲ್ ರಶೀದ್ ಹಂತಕರಿಗೆ ಸುಹಾಸ್ ಬರುವ ಹಾಗೂ ನಿರಾಯುಧನಾಗಿ ಇದ್ದಾನೆ ಎನ್ನುವ ಮಾಹಿತಿ ನೀಡಿದ್ದಾರೆಂದು ವಿಎಚ್‌ಪಿ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮತ್ತು ಹಿಂದೂ ಜಾಗರಣ ವೇದಿಕೆ ಪ್ರಾಂತ ಸಂಚಾಲಕ ಕೆ.ಟಿ.ಉಲ್ಲಾಸ್ ಆರೋಪ ಮಾಡಿದ್ದಾರೆ.
ರಶೀದ್ ಅವರನ್ನು ತನಿಖೆ ನಡೆಸಬೇಕೆಂದು ಹಿಂದೂ ಸಂಘಟನೆ ಒತ್ತಾಯಿಸಿದೆ. ಎನ್‌ಐಎ ತನಿಖೆಯಾದರೆ ರಶೀದ್ ಸೇರಿ ಎಲ್ಲರ ತನಿಖೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.