Menu

ರೈತರ ಆಸ್ತಿಗೆ ಮೂರು ಪಟ್ಟು ಪರಿಹಾರ, ಜಯನಗರ, ಸದಾಶಿವ ನಗರ ಮೀರಿಸುವ ಗ್ರೇಟರ್‌ ಬೆಂಗಳೂರು: ಡಿಸಿಎಂ

ಬಿಡದಿ ಸೇರಿದಂತೆ ಇತರ ಟೌನ್ ಶಿಪ್ ಗಳ ನೋಟಿಫಿಕೇಷನ್ ಮಾಡಿದವರು ಕುಮಾರಸ್ವಾಮಿ, ನಾನು ಇದನ್ನು ಮಾಡಿದ್ದಲ್ಲ, ಅವರೇ ಡಿ ನೋಟಿಫಿಕೇಷನ್ ಮಾಡಬಹುದಿತ್ತು, ನಾವು ಈಗ ಅದನ್ನು ಮಾಡಲು ಹೋಗುವುದಿಲ್ಲ. ಗ್ರೇಟರ್‌ ಬೆಂಗಳೂರು ಯೋಜನೆಗಾಗಿ ನಮ್ಮ ಜಿಲ್ಲೆಯ ಜನ ಆಸ್ತಿ ಕಳೆದುಕೊಳ್ಳುತ್ತಾರೆ‌. ಆದರೆ ಅವರು ಏನು ಆಲೋಚನೆ ಮಾಡಿದ್ದಾರೋ ಅದಕ್ಕಿಂತ ಎರಡು, ಮೂರು ಪಟ್ಟು ಬೆಲೆ ಸಿಗುವಂತಹ ಕೆಲಸ ನಾನು ಮಾಡುತ್ತೇನೆ. ಜಯನಗರ, ಸದಾಶಿವ ನಗರ ಮಾದರಿ ಎಂದು ಹೇಳುತ್ತಾರಲ್ಲ. ಅದಕ್ಕಿಂತ ಒಳ್ಳೇ ಪರಿಸರ ಸೃಷ್ಟಿ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಚನ್ನಪಟ್ಟಣದ ತಾಲೂಕು ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಬೆಂಗಳೂರು ಗ್ರಾಮಾಂತರ ಸಂಸದರು ಹಾಗೂ ಎಚ್.ಡಿ.ದೇವೇಗೌಡರು ಈ ಯೋಜನೆಯನ್ನು ಕೈ ಬಿಡಿ ಎಂದು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಬಗ್ಗೆ ಕೇಳಿದಾಗ, ಅವರು ಏನು ಬೇಕಾದರೂ ಮಾಡಿಸಿಕೊಳ್ಳಲಿ. ಸಿದ್ದರಾಮಯ್ಯ ಅವರಿಗೂ ನನಗೂ ಇದನ್ನು ಕೈ ಬಿಡುವ ಹಕ್ಕಿಲ್ಲ. ನಾನು ಇರುವ ತನಕ ಇದನ್ನು ಪ್ರಗತಿ ಮಾಡುತ್ತೇವೆ. ಇದನ್ನು ಡಿ ನೋಟಿಫಿ ಕೇಷನ್ ಮಾಡಲು ಬರುವುದಿಲ್ಲ ಎಂದರು.

ಯೋಜನೆ ವಿರೋಧಿಸಿ ರೈತರ ಹೋರಾಟದ ಬಗ್ಗೆ ಕೇಳಿದಾಗ, “ಹೋರಾಟ ಮಾಡಲಿ. ಹೋರಾಟ ಮಾಡುವುದನ್ನು ತಪ್ಪು ಎನ್ನಲು ಆಗುವುದಿಲ್ಲ. ಜಾಸ್ತಿ ಪರಿಹಾರ ಕೇಳಿದರೆ ತಪ್ಪೇನಿಲ್ಲ. ಅವರ ಮಕ್ಕಳ ಕಾಲಕ್ಕೆ ಡಿ.ಕೆ.ಶಿವಕುಮಾರ್ ಒಳ್ಳೇ ಕೆಲಸ ಮಾಡಿದ್ದಾರೆ ಎಂದು ಅವರಿಗೆ ಅರ್ಥವಾಗುತ್ತದೆ. ರಾಮನಗರಕ್ಕೆ ಬಂದು ರೈತರ ದುಃಖ, ದುಮ್ಮಾನ, ನೋವು ನಲಿವು ಕೇಳುತ್ತೇನೆ” ಎಂದರು. ಬೆಂಗಳೂರು ದಕ್ಷಿಣ ಜಿಲ್ಲೆ ನಾಮಕರಣ ಎಲ್ಲಿಗೆ ಬಂತು ಎಂಬ ಪ್ರಶ್ನೆಗೆ, “ಮುಹೂರ್ತ ನಿಗದಿ ಮಾಡು ತ್ತಿದ್ದೇನೆ ಎಂದು ಉತ್ತರಿಸಿದ್ದಾರೆ.

ಚನ್ನಪಟ್ಟಣಕ್ಕೆ ನನ್ನ ಇಲಾಖೆಯಿಂದಲೇ ರೂ.158 ಕೋಟಿ ಅನುದಾನ

ನನ್ನ ಇಲಾಖೆಯಿಂದಲೇ ರೂ.158 ಕೋಟಿ ಅನುದಾನವನ್ನು ಚನ್ನಪಟ್ಟಣಕ್ಕೆ ನೀಡಿದ್ದೇನೆ. ಮೂರು ದಿನಗಳ ಹಿಂದೆಯಷ್ಟೇ ಒಂದಷ್ಟು ಅನುದಾನ ನೀಡಿದ್ದೇನೆ. ನಾನೇ ಸಚಿವನಿದ್ದೇನೆ. ಅಗತ್ಯ ಬಿದ್ದರೇ ಇನ್ನಷ್ಟು ನೀಡುತ್ತೇನೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ನೀಡಿದ ಅನುದಾನದಲ್ಲಿ ರಸ್ತೆ, ಸೇತುವೆಗಳನ್ನು ಚೆನ್ನಾಗಿ ನಿರ್ಮಾಣ ಮಾಡಲಾಗಿದೆ. ಇದನ್ನು ಶಾಸಕರಾದ ಯೋಗೇಶ್ವರ್ ಅವರೂ ಒಪ್ಪಿದ್ದಾರೆ. ನನ್ನ ಕ್ಷೇತ್ರಕ್ಕೇ ರೂ.500 ಕೋಟಿಯೂ ಕೊಟ್ಟಿರಲಿಲ್ಲ. ಇಂತಹ ಸದಾವಕಾಶ ಚನ್ನಪಟ್ಟಣಕ್ಕೆ ಸಿಕ್ಕಿದೆ. ಕ್ಷೇತ್ರಕ್ಕೆ ಸಿಕ್ಕಿರುವ ಎಲ್ಲಾ ಯೋಜನೆಗಳು ಜಾರಿಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

ಚನ್ನಪಟ್ಟಣ ಉಪಚುನಾವಣೆಗೆ ಮುಂಚಿತವಾಗಿ ಸುಮಾರು ರೂ.500 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಇದರಲ್ಲಿ ಒಂದಷ್ಟು ಕೆಲಸಗಳು ನೆನೆಗುದಿಗೆ ಬಿದ್ದಿದ್ದವು. ಯಾವ ಕಾರಣಕ್ಕೆ ಕಾಮಗಾರಿಗಳು ಹಿಂದುಳಿದಿವೆ ಎಂದು ಪರಿಶೀಲನೆ ಮಾಡಲಾಯಿತು ಎಂದರು.

“2010 ರಿಂದಲೂ ಅರ್ಚಕರಹಳ್ಳಿ, ಸುಣ್ಣಘಟ್ಟ, ಜಿಗಣೇನಹಳ್ಳಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಪ್ರಯೋಜನ ಪಡೆದವರು ಒಂದು ಚದರ ಅಡಿಗೆ ರೂ.200 ಪಾವತಿಸಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಒಂದಷ್ಟು ಜನರು ಮಾತ್ರ ಉಪಯೋಗ ಪಡೆದಿದ್ದು ಎಲ್ಲರೂ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಅಧಿಕಾರಿಗಳ ಬಳಿ ತಾಂತ್ರಿಕ ಕಾರಣಗಳ ಬಗ್ಗೆ ಚರ್ಚೆ ನಡೆಸಲಾಯಿತು. ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಉಂಟಾಗಿರುವ ತೊಂದರೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಇತರೇ ವಿಚಾರಗಳನ್ನು ಕೆಡಿಪಿ ಸಭೆಯಲ್ಲಿ ಚಿಂತನೆ ಮಾಡಲಾಗುವುದು ಎಂದು ಹೇಳಿದರು.

ಈ ಹಿಂದೆ ಸಾರ್ವಜನಿಕರು ನೀಡಿದ್ದ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದೇ ಎಂದು ಕೇಳಿದಾಗ, “ದೇವಸ್ಥಾನಕ್ಕೆ ಅನುದಾನ ಸೇರಿದಂತೆ ವೈಯಕ್ತಿಕ ಅರ್ಜಿಗಳನ್ನೂ ವಿಲೇವಾರಿ ಮಾಡಲಾಗುತ್ತಿದೆ. 5 ಸಾವಿರ ಮನೆ ಮಂಜೂರಾಗಿದೆ.‌ 2500 ಅರ್ಜಿಗಳು ಬಂದಿದ್ದು ಇನ್ನೂ 2,500 ಮನೆಗಳು ಉಳಿದುಕೊಂಡಿವೆ. ವಸತಿ ಸಚಿವರಾದ ಜಮೀರ್ ಅವರು ಅಪಾರ್ಟ್ ಮೆಂಟ್ ಮಾದರಿಯಲ್ಲಿ ಮನೆ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಚುನಾವಣೆ ಸಮಯದಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಪಟ್ಟಿ ಹಾಕಿಕೊಂಡು ಈಡೇರಿಸುತ್ತೇವೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *