Menu

ಡಿಸೆಂಬರ್ ವೇಳೆಗೆ ರಾಮನಗರ ಜಿಲ್ಲೆಗೆ ಕಾವೇರಿ ಕುಡಿಯುವ ಶಾಶ್ವತ ನೀರಾವರಿ ಯೋಜನೆ: ಡಿಸಿಎಂ ಡಿಕೆ ಶಿವಕುಮಾರ್

ಮಂಡ್ಯ:  ತಮ್ಮ ಜಿಲ್ಲೆಯ ಜನರ ಬಾಯಾರಿಕೆ ನೀಗಿಸಲು ಪಣ ತೊಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸತ್ತೇಗಾಲ ಕುಡಿಯುವ ನೀರಿನ ಯೋಜನೆಯನ್ನು ಪೂರ್ಣಗೊಳಿಸಲು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಕಾವೇರಿ‌ ಕುಡಿಯುವ ನೀರಿನ 5 ನೇ ಹಂತ, ಎತ್ತಿನಹೊಳೆ ಸೇರಿದಂತೆ ಹಲವಾರು ಅಸಾಧ್ಯಗಳನ್ನು ಸಾಧ್ಯವಾಗಿಸಿದ ಕೀರ್ತಿ ಇವರದ್ದು.

ಇದರ ಭಾಗವಾಗಿ ಮೊದಲಿಗೆ ಸತ್ತೇಗಾಲ ಅಣೆಕಟ್ಟಿನ ಬಳಿ ಯೋಜನೆಗೆ ಗುದ್ದಲಿ ಪೂಜೆ ಸೋಮವಾರ ನೆರವೇರಿಸಿ ಸ್ಥಳ ಪರಿಶೀಲನೆ ಮಾಡಿದರು.

ಏಕೆ ಕೆಲಸ ವಿಳಂಬವಾಗುತ್ತಿದೆ, ಏನಾದರೂ ಅಡೆತಡೆಗಳಿವೆಯೇ ಎಂದು ಅಧಿಕಾರಿಗಳು, ಯೋಜನೆಯ ಕಾಮಗಾರಿ ನಡೆಸುತ್ತಿರುವ ಹೈದರಾಬಾದಿನ ಮೆಘಾ ಇಂಜಿನಿಯರಿಂಗ್ ಸಂಸ್ಥೆಯ ಎಂಜಿನಿಯರ್ ಗಳ ಬಳಿ ಮಾಹಿತಿ ಪಡೆದುಕೊಂಡರು ಹಾಗೂ ಅಧಿಕಾರಿಗಳ ಬಳಿ ಯೋಜನೆಯ ಪ್ರಗತಿಯ ಬಗ್ಗೆ ವಿವರಗಳನ್ನು ಪಡೆದರು.

ಇದಾದ ನಂತರ ಇಗ್ಗಲೂರು ಬ್ಯಾರೇಜ್ ವರೆಗೆ ನೀರು ಹರಿಸಲು ಕೊರೆಯುತ್ತಿರುವ ಸುರಂಗ ಹಾಗೂ ಅದರ ಲೈನಿಂಗ್ ಕಾಮಗಾರಿಯನ್ನು ನಿಕಟಪೂರ್ವ ಸಂಸದರಾದ ಡಿ.ಕೆ.ಸುರೇಶ್, ಶಾಸಕರಾದ ಸಿ.ಪಿ.ಯೋಗೆಶ್ವರ್, ಕದಲೂರು ಉದಯ್, ವಿಧಾನಪರಿಷತ್ ಸದಸ್ಯರಾದ ಎಸ್.ರವಿ, ಸುಧಾಮ್‌ ದಾಸ್ ಜೊತೆ ವೀಕ್ಷಣೆ ಮಾಡಿದರು.

ಹಿರೇನಾಗರದಮ್ಮ ದೇವಾಲಯದ ಆವರಣದಲ್ಲಿ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಅವರು. ರೂ.540 ಕೋಟಿ ವೆಚ್ಚದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ,‌ ಕನಕಪುರ, ಚನ್ನಪಟ್ಟಣ ಹಾಗೂ ಮಾಗಡಿ ತಾಲ್ಲೂಕುಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಸಂಕಲ್ಪ ತೊಟ್ಟಿದ್ದು ವರ್ಷದ ಡಿಸೆಂಬರ್ ವೇಳೆಗೆ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

“ರಾಮನಗರ ಜಿಲ್ಲೆಗೆ ಕುಡಿಯುವ ನೀರನ್ನು ಒದಗಿಸುತ್ತೇವೆ ಎಂದು ಚನ್ನಪಟ್ಟಣ ಉಪಚುನಾವಣೆ ವೇಳೆ ಮಾತುಕೊಟ್ಟಿದ್ದೆವು. ಈ ಮಾತಿಗೆ ನಾವು ಬದ್ಧರಾಗಿದ್ದೇವೆ. ಈ ಹಿಂದೆ ನಾನು ನೀರಾವರಿ ಸಚಿವನಾಗಿದ್ದಾಗ ಈ ಯೋಜನೆಗೆ ಚಾಲನೆ ನೀಡಲಾಯಿತು. ಆದರೂ ಏಕೆ ವಿಳಂಬವಾಗುತ್ತಿದೆ ಎಂದು ಪರಿಶೀಲನೆ ನಡೆಸಲು ಬಂದಿದ್ದೇನೆ. ಅತ್ಯಂತ ಕಡಿಮೆ ಮೊತ್ತದಲ್ಲಿ 3.30 ಟಿಎಂಸಿ ನೀರನ್ನು ಹರಿಸಲಾಗುತ್ತಿದೆ” ಎಂದರು.

ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗುವುದೇ ಎಂದು ಕೇಳಿದಾಗ, “ಅಗತ್ಯಕ್ಕೆ ತಕ್ಕಂತೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಯೋಜನೆಗೆ ಭೂಮಿ ನೀಡಿ ಸಹಕಾರ ನೀಡಿದ ರೈತರಿಗೆ ಉತ್ತಮ ಪರಿಹಾರ ನೀಡಬೇಕು ಎಂದು ಮಂಡ್ಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಂತರ್ಜಲ ಹೆಚ್ಚಳ ಸೇರಿದಂತೆ ಜಿಲ್ಲೆಯ ಜನರ ಕುಡಿಯುವ ನೀರಿನ ಬವಣೆ ತಪ್ಪಲಿದೆ” ಎಂದು ಹೇಳಿದರು.

ಯೋಜನೆಯ ವಿವರ

ಮಳೆಯ ಅಭಾವದ ಕಾರಣಕ್ಕೆ ಹಲವಾರು ವರ್ಷಗಳಿಂದ ತತ್ತರಿಸಿ ಹೋಗಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ಸುಮಾರು 10.82 ಲಕ್ಷ ಜನರಿಗೆ ಹಾಗೂ 9.03 ಲಕ್ಷ ಜಾನುವಾರುಗಳಿಗೆ ಈ ಕುಡಿಯುವ ನೀರಿನ ಯೋಜನೆಯಿಂದ ಲಾಭವಾಗಲಿದೆ.

“ರೂ.540 ಕೋಟಿ ವೆಚ್ಚದಲ್ಲಿ ಈ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ‌. ಮಳವಳ್ಳಿಯ ಬೆಳಕವಾಡಿ ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಸತ್ತೇಗಾಲ ಅಣೆಕಟ್ಟಿನಿಂದ 220 ಕ್ಯೂಸೆಕ್ಸ್ ನೀರನ್ನು 180 ದಿನಗಳ ಕಾಲ ಇಗ್ಗಲೂರು ಬ್ಯಾರೇಜಿಗೆ ಹರಿಸಲಾಗುತ್ತದೆ.

ಸತ್ತೇಗಾಲ ಅಣೆಕಟ್ಟಿನಿಂದ ಇಗ್ಗಲೂರು ಬ್ಯಾರೇಜ್ ತನಕ ಸುಮಾರು ಸುಮಾರು 26 ಕಿ.ಮೀ ಉದ್ದ ಗುರುತ್ವಾಕರ್ಷಣೆಯ ಮೂಲಕ ನೀರನ್ನು ಹರಿಸುತ್ತಿರುವುದು ಈ ಯೋಜನೆಯ ವಿಶೇಷ. 12.5 ಕಿ.ಮೀ ಉದ್ದದ ವರೆಗೆ ಸುರಂಗ ಮಾರ್ಗ ನಂತರ 13.35 ಕಿ.ಮೀ ಉದ್ದ ಪೈಪ್ ಲೈನ್ ಇರಲಿದೆ. ಪ್ರಸ್ತುತ ಸುರಂಗ ಮಾರ್ಗವು 4 ಮೀ ಸುತ್ತಳತೆ ಹೊಂದಿದ್ದು ‘ಡಿ’ ಆಕಾರದಲ್ಲಿ ಇರಲಿದೆ.

ನಂತರ ಏತ ನೀರಾವರಿ ಮೂಲಕ ಇಗ್ಗಲೂರು ಬ್ಯಾರೇಜ್ ನಿಂದ ಮೊಹೇನಹಳ್ಳಿ ಕೆರೆಗೆ, ಈ ಕೆರೆಯಿಂದ ಕಣ್ವ ಜಲಾಶಯ‌ ನಂತರ ಮಂಚನಬೆಲೆ ಹಾಗೂ ವೈ.ಜಿ.ಗುಡ್ಡ ಜಲಾಶಯಕ್ಕೆ ನೀರು ತುಂಬಿಸಲಾಗುವುದು. ಪ್ರಸ್ತುತ ಸುಮಾರು 11.33 ಕಿ.ಮೀ ವರೆಗೆ ಸುರಂಗ ಕೊರೆಯುವ ಕಾಮಗಾರಿ ಪೂರ್ಣಗೊಂಡಿದ್ದು ಪ್ರಸ್ತುತ ಲೈನಿಂಗ್ ಕಾಮಗಾರಿ ನಡೆಯುತ್ತಿದೆ. 670 ಮೀ ನಷ್ಟು ಸುರಂಗ ಕೊರೆಯಿವ ಕಾಮಗಾರಿ ಬಾಕಿಯಿದೆ. ಸುರಂಗ ಮಾರ್ಗದ 4.15 ಮೀ ನಷ್ಟು ಸಿ.ಸಿ ಲೈನಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಯೋಜನೆಯಲ್ಲಿ 13.35 ಕಿ.ಮೀ ಉದ್ದದ ಪೈಪ್ ಲೈನ್ ಇದ್ದು. ಇದರಲ್ಲಿ 5.5 ಕಿ.ಮೀ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

Related Posts

Leave a Reply

Your email address will not be published. Required fields are marked *