Menu

ಸಮ- ಸಮಾಜದ ಕನಸು ಸಾಕಾರಗೊಳ್ಳಲು ಎಲ್ಲರಿಗೂ ಸಮಾನ ಆದ್ಯತೆ ಅಗತ್ಯ; ಸಚಿವ ಶಿವರಾಜ್ ತಂಗಡಗಿ

shivarj tangadagi

ಬೆಂಗಳೂರು: ಬಸವಾದಿ ಶರಣರು, ಬುದ್ಧ ಮತ್ತು ಅಂಬೇಡ್ಕರ್ ಅವರು ಹೇಳಿದ ಸಮ- ಸಮಾಜ ನಿರ್ಮಾಣಬಾಗಬೇಕಾದರೆ ಪ್ರತಿಯೊಂದು ಸಮುದಾಯಗಳಿಗೆ ಆದ್ಯತೆ ನೀಡಬೇಕು. ಆಗ ಮಾತ್ರ ಸಮ- ಸಮಾಜದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಸಾನಿಧ್ಯದಲ್ಲಿ‌ ನಯನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಭಗೀರಥ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಸಮಾನತೆ ಇರಬಾರದು. ಎಲ್ಲ ಸಮುದಾಯವರಿಗೂ ಸಮವಾಗಿ ಸವಲತ್ತುಗಳು ದೊರೆಯುವಂತೆ ಆಗಬೇಕು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ವಿಚಾರದಲ್ಲಿ ಬದ್ಧತೆಯನ್ನು ಇಟ್ಟುಕೊಂಡಿದೆ. ಸಮಾಜದ ಒಳಿತಿಗೆ, ಸಮಾಜದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಉಪ್ಪಾರ ನಿಗಮಕ್ಕೆ‌ ಪ್ರಸ್ತುತ ನಾನೇ ಅಧ್ಯಕ್ಷನಿದ್ದೇನೆ. ಎರಡು ತಿಂಗಳಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರನ್ನು ನೇಮಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ ರೂ.42 ಕೋಟಿ ಅನುದಾನ ನೀಡಲಾಗಿದೆ. ಇಷ್ಟು ಮೊತ್ತದ ಅನುದಾನವನ್ನು ಯಾವ ಸರ್ಕಾರ ನೀಡಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಗಮಗಳಿಗೆ 1600 ಅನುದಾನ ಒದಗಿಸಿದ್ದಾರೆ ಎಂದರು.‌

ಭಗೀರಥನ ಕಥೆ ಮಕ್ಕಳಿಗೆ ತೀರಾ ಅಗತ್ಯ: ಇನ್ನು ನಿರಂತರ ಪ್ರಯತ್ನದ ಫಲವಾಗಿ ಏನನ್ನು ಬೇಕಾದರೂ ಪಡೆಯಬಹುದು, ಪ್ರಯತ್ನಕ್ಕೆ ಅಸಾಧ್ಯವಾದದ್ದು ಯಾವುದು ಇಲ್ಲ ಎಂಬ ಮಾತಿಗೆ ಭಗೀರಥ ಪ್ರತಿರೂಪದಂತಿದ್ದಾರೆ ಎಂದು ತಿಳಿಸಿದರು.

ಇಂದಿನ ಮಕ್ಕಳು ಮತ್ತು ಯುವ ಸಮುದಾಯಕ್ಕೆ ಭಗೀರಥರ ಕಥೆಗಳನ್ನು ತಿಳಿಸುವ ಅಗತ್ಯವಿದೆ. ನಾನು ಇತ್ತೀಚೆಗೆ ಪತ್ರಿಕೆಗಳನ್ನು ಓದುವ ವೇಳೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮನೆ ಬಿಟ್ಟು ಹೋಗುವುದು, ಇನ್ನಿತರೆ ಅನಾಹುತಗಳನ್ನು ಮಾಡಿಕೊಳ್ಳುವ ಸುದ್ದಿ ನಿಜಕ್ಕೂ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ ಸಚಿವರು, ಮಕ್ಕಳಿಗೆ ನಿರಂತರ ಪ್ರಯತ್ನ ಮಾಡುವ ಬಗ್ಗೆ ಭಗೀರಥ ಹಾಗೂ ಇನ್ನಿತರ ಆದರ್ಶವುಳ್ಳ ಮಹನೀಯರ ಕಥೆಗಳನ್ನು ಪೋಷಕರು ತಿಳಿಸಬೇಕಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕರಾದ ಡಾ.ಕೆ.ಎನ್.ರವೀಂದ್ರನಾಥ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷರಾದ ಯು.ವೆಂಕೋಬ, ಉಪ್ಪಾರ ಸಂಘದ ಬೆಂಗಳೂರು ಜಿಲ್ಲಾಧ್ಯಕ್ಷ ಎನ್.ಸುನೀಲ್ ಕುಮಾರ್, ಪ್ರಾಧ್ಯಪಕ ಡಾ.ಸಂಗಮೇಶ್ ಎಸ್.ಗಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *