ಮಂಗಳೂರು: ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಹಲವು ಹಿಂದೂ ಸಂಘಟನೆಯ ಮುಖಂಡರ ಹತ್ಯೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳು ಕಾಣಿಸಿಕೊಂಡಿದ್ದು, ಮಂಗಳೂರು ಈಗ ಬೂದಿ ಮುಚ್ಚಿದ ಕೆಂಡಂದಂತೆ ಆಗಿದೆ.
ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್ ಮತ್ತು ಭರತ್ ಕುಮ್ಡೇಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಮಾಡಲಾಗಿದೆ.
ಎಸ್ಡಿಪಿಐ ಮುಖಂಡ ಅಶ್ರಫ್ ಹತ್ಯೆಯ ಪ್ರಮುಖ ಆರೋಪಿ ಆಗಿರುವ ಹಿಂದೂ ಕಾರ್ಯಕರ್ತ ಭರತ್ ಕುಮ್ದೇಲ್ ಅವರನ್ನು ಮೇ 5ರಂದು ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುವುದಾಗಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಎಸ್ಡಿಪಿಐನಲ್ಲಿ ಮುಂಚೂಣಿಯಲ್ಲಿದ್ದ ಮುಖಂಡ ಅಶ್ರಫ್ ಕಲಾಯಿ ಅನ್ನು 2017ರ ಜೂನ್ 21ರಂದು ಬಂಟ್ವಾಳದ ಬೆಂಜನಪದವು ಎಂಬಲ್ಲಿ ಬರ್ಬರವಾಗಿ ಹತ್ಯೆಗೈದಿದ್ದರು. ಅಶ್ರಫ್ ಕೊಲೆ ಬಳಿಕ ಪ್ರತೀಕಾರವಾಗಿ ಶರತ್ ಮಡಿವಾಳ ಹತ್ಯೆಯಾಗಿತ್ತು. ಅಶ್ರಫ್ ಕೊಂದ ಭರತ್ ನನ್ನ ಮರೆತಿಲ್ಲ. Wait and watch ಎಂದು ಕೇವಲ ಎಂಟು ಗಂಟೆ ಮೊದಲು On fixed leader ಎಂಬ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಮತ್ತೊಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.
ಶರಣ್ ಪಂಪ್ವೆಲ್ಗೂ ಜೀವ ಬೆದರಿಕೆ
ಭರತ್ ಕುಮ್ಡೇಲ್ ಮಾತ್ರವಲ್ಲದೇ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ಗೂ ಜೀವ ಬೆದರಿಕೆ ಹಾಕಲಾಗಿದೆ. ಮುಂದಿನ ಟಾರ್ಗೆಟ್ ಶರಣ್ ಪಂಪ್ವೆಲ್, ಶರಣ್ ಹತ್ಯೆಯಾಗಲು ತಯಾರಾಗಿರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.
ಅದೇ ರೀತಿಯಾಗಿ ಶ್ರೀಜಿತ್ ಅಲಿಯಾಸ್ ಶ್ರೀಜುಗೂ ಜೀವ ಬೆದರಿಕೆ ಹಾಕಲಾಗಿದೆ. ‘Killers_target’ ಎಂಬ ಪೇಜ್ನಿಂದ ಮುಂಚೆ ಪೋಸ್ಟ್ ಹಾಕಲಾಗಿತ್ತು. ಇಂದು ಮತ್ತೆ ವೈಯಕ್ತಿಕವಾಗಿ ‘Abu_Sifiyan678’ ಪೇಜ್ನಿಂದ ಮೆಸೇಜ್ ಕಳುಹಿಸಿರುವ ಕಿಡಿಗೇಡಿಗಳು, ‘ಎಲ್ಲಿದೀಯಾ ನೀನು, ನೆಕ್ಸ್ಟ್ ನೀನೆ’ ಅಂತಾ ಮಲಯಾಳಂ ನಲ್ಲಿ ಮೆಸೇಜ್ ಮಾಡಿದ್ದಾರೆ.
ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರತಿಕಾರಕ್ಕೆ 2018ರ ಜನವರಿಯಲ್ಲಿ ಬಶೀರ್ ಕೊಲೆ ಆಗಿತ್ತು. ಮಂಗಳೂರಿನ ಹೊರವಲಯ ಕೊಟ್ಟಾರ ಚೌಕಿ ಬಳಿ ಹತ್ಯೆ ಮಾಡಲಾಗಿತ್ತು. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಶ್ರೀಜಿತ್ ಅಲಿಯಾಸ್ ಶ್ರೀಜು ಪ್ರಕರಣದ ಆರೋಪಿ. ಹೀಗಾಗಿ ಈತನಿಗೆ ಮತ್ತೆ ಮತ್ತೆ ಕೊಲೆ ಬೆದರಿಕೆ ಹಾಕಲಾಗುತ್ತಿದೆ.