ಜೈಪುರ: ಸರ್ವಾಂಗೀಣ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 100 ರನ್ ಗಳ ಭಾರೀ ಅಂತರದಿಂದ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿ ಸತತ 6ನೇ ಗೆಲುವಿನೊಂದಿಗೆ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಗೆ ಸಮೀಪವಾದರೆ ರಾಜಸ್ಥಾನ್ ರಾಯಲ್ಸ್ ಪ್ಲೇಆಫ್ ರೇಸ್ ನಿಂದ ಹೊರಬಿದ್ದಿತು.
ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 2 ವಿಕೆಟ್ ಕಳೆದುಕೊಂಡು 217 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ರಾಜಸ್ಥಾನ್ ರಾಯಲ್ಸ್ 17 ಓವರ್ ಗಳಲ್ಲಿ 119 ರನ್ ಗೆ ಆಲೌಟಾಯಿತು. ಈ ಮೂಲಕ ರಾಜಸ್ಥಾನ್ ತಂಡವನ್ನು ಅದರದ್ದೇ ನೆಲದಲ್ಲಿ 13 ವರ್ಷಗಳ ನಂತರ ಗೆದ್ದ ಸಾಧನೆಯನ್ನು ಮುಂಬೈ ಇಂಡಿಯನ್ಸ್ ಮಾಡಿತು.
ಮುಂಬೈ ಇಂಡಿಯನ್ಸ್ 11 ಪಂದ್ಯಗಳಿಂದ 7 ಜಯ ಹಾಗೂ 4 ಸೋಲಿನೊಂದಿಗೆ 14 ಅಂಕದೊಂದಿಗೆ ಮೊದಲ ಬಾರಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡಿತು. ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಿಂದ 3 ಜಯ ಹಾಗೂ 8 ಸೋಲಿನೊಂದಿಗೆ 6 ಅಂಕದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ನಂತರ ಟೂರ್ನಿಯಿಂದ ಅಧಿಕೃತವಾಗಿ ಎರಡನೇ ತಂಡವಾಗಿ ಹೊರಬಿದ್ದಿತು. ಮುಂಬೈ ಇಂಡಿಯನ್ಸ್ ಗೆ ರನ್ ಗಳ ಆಧಾರದಲ್ಲಿ ದೊರೆತ ಮೂರನೇ ಅತೀ ದೊಡ್ಡ ಗೆಲುವಾಗಿದೆ.
ರಾಜಸ್ಥಾನ್ ಆರಂಭದಿಂದಲೇ ಸತತವಾಗಿ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಯಾವುದೇ ಹಂತದಲ್ಲೂ ಗೆಲುವಿನ ಸೂಚನೆ ನೀಡಲೇ ಇಲ್ಲ. ಜೋಫ್ರಾ ಆರ್ಚರ್ (30) ಮಾತ್ರ ಹೋರಾಟ ನಡೆಸಿದರು. ಕಳೆದ ಪಂದ್ಯದಲ್ಲಿ 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ವೈಭವ್ ಸೂರ್ಯವಂಶಿ ಖಾತೆ ತೆರೆಯುವ ಮುನ್ನವೇ ನಿರ್ಗಮಿಸಿ ನಿರಾಸೆ ಮೂಡಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮ ಮತ್ತು ರಿಯಾನ್ ರೆಕಲ್ಟನ್ ಮೊದಲ ವಿಕೆಟ್ ಗೆ 116 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು. ರಿಕಲ್ಟನ್ 38 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 61 ರನ್ ಸಿಡಿಸಿದರೆ, ರೋಹಿತ್ ಶರ್ಮ 36 ಎಸೆತಗಳಲ್ಲಿ 9 ಬೌಂಡರಿ ಸಹಾಯದಿಂದ 53 ರನ್ ಗಳಿಸಿದರು.
ನಂತರ ಬಂದ ಸೂರ್ಯಕುಮಾರ್ ಯಾದವ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಮೂರನೇ ವಿಕೆಟ್ ಗೆ 95 ರನ್ ಜೊತೆಯಾಟದಿಂದ ತಂಡವನ್ನು 200ರ ಗಡಿ ದಾಟಿಸಿದರು. ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 48 ರನ್ ಬಾರಿಸಿದರೆ, ಪಾಂಡ್ಯ 23 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 48 ರನ್ ಸಿಡಿಸಿ ಇಬ್ಬರೂ ಔಟಾಗದೇ ಉಳಿದರು.