ಬೆಂಗಳೂರು: ಜನಗಣತಿ ಯೊಂದಿಗೆ ಜಾತಿಗಣತಿ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಕಾವೇರಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿ ಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕು. ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು. ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು ಎಂದರು.
ರಾಹುಲ್ ಗಾಂಧಿಯವರು ಕೂಡಾ ಇದನ್ನೇ ಆಗ್ರಹಿಸಿದ್ದು, ಜಾತಿ ಗಣತಿ ವೇಳೆ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಶೇ 50% ರ ಗರಿಷ್ಠ ಪರಿಮಿತಿ ಹೆಚ್ಚು ಮಾಡಲು ಒತ್ತಾಯ
ರಾಜ್ಯ ಸರ್ಕಾರದ ಸಮೀಕ್ಷೆ ಅವೈಜ್ಞಾನಿಕ ಎಂದು ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಹಾಗು ಧರ್ಮೇಂದ್ರ ಪ್ರಧಾನ್ ಅವರು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅವರದ್ದೇ ಪಕ್ಷದ ಬೆಂಬಲಿಗರು ಬಿಹಾರದಲ್ಲಿ ನಡೆಸಿರುವ ಸಮೀಕ್ಷೆ ಬಗ್ಗೆ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರಗಳಿಗೆ ಜಾತಿ ಅಥವಾ ಜನಗಣತಿ ಮಾಡಲು ಹಕ್ಕಿಲ್ಲ ಎಂದು ಸಂವಿಧಾನದಲ್ಲಿ ಹೇಳಿದೆಯೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದಲ್ಲಿ ದಲಿತರೂ ಸೇರಿ 51% ಮೀಸಲಾತಿ ಇದೆ. ಹಿಂದೆ ಇದ್ದ ಶೇ 50% ರ ಗರಿಷ್ಠ ಪರಿಮಿತಿಯನ್ನು ಹೆಚ್ಚು ಮಾಡಬೇಕೆಂದಿದೆ ಎಂದರು.
ನಮ್ಮದು ಸಾಮಾಜಿಕ , ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಾಗಿದ್ದು ಕೇಂದ್ರವೂ ಅದನ್ನೇ ಮಾಡಲಿ ಎಂದು ಒತ್ತಾಯಿಸುತ್ತೇವೆ ಎಂದರು.
.ಶೇ 93% ಜನಸಂಖ್ಯೆ ಸಮೀಕ್ಷೆ
ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ 5.90 ಕೋಟಿ ಜನರನ್ನು ಒಳಪಡಿಸಲಾಗಿದೆ. ಶೇ 93% ಜನಸಂಖ್ಯೆ ಸಮೀಕ್ಷೆಗೆ ಒಳಪಟ್ಟಿದ್ದು, ಶೆ 100% ಸಮೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದರು.
ಮುಂದಿನ ಸಚಿವ ಸಂಪುಟದಲ್ಲಿ ಅಭಿಪ್ರಾಯ ಪಡೆದು ಚರ್ಚೆ ಮಾಡಿ, ನಮ್ಮ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಜೆಟ್ ರೂಪಿಸುವಾಗ ಇದನ್ನು ಆಧಾರವಾಗಿಟ್ಟುಕೊಂಡು ಮಾಡಲಾಗುವುದು ಎಂದರು.
ಮೇ 9 ರಂದು ಬಹುತೇಕ ಸಚಿವ ಸಂಪುಟ ಸಭೆಯನ್ನು ನಿಗದಿ ಮಾಡಲಾಗುವುದು ಎಂದರು.
ಸಮಾನತೆ ತರಲು ಎಲ್ಲರಿಗೂ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಾಮಾಜಿಕವಾಗಿ ಪಾಲಿರಬೇಕು
ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ಸಮೀಕ್ಷೆಯ ವರದಿನ್ನು ಪಡೆಯಲಿಲ್ಲ ಎಂದರು. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ದೊರಕಿಸಲು, ಸಮಾನತೆ ತರಲು ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಸಾಮಾಜಿಕವಾಗಿ ಪಾಲಿರಬೇಕು ಎಂಬ ಉದ್ದೇಶದಿಂದ ಸಮೀಕ್ಷೆ ನಡೆಸಲಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
1992 ರಲ್ಲಿ ಇಂದಿರಾ ಸಾಹಾನಿ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮಂಡಲ್ ಸಮಿತಿ ವರದಿಗೆ ದತ್ತಾಂಶ ಏನು ಎಂದು ಸ್ಪಷ್ಟವಾಗಿ ಪ್ರಶ್ನಿಸಿತ್ತು. ಈಗ ಕರ್ನಾಟಕ, ಬಿಹಾರ, ತೆಲಂಗಾಣದಲ್ಲಿ ಸಮೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.