ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರದಲ್ಲಿ 17 ರೂ. ಇಳಿಕೆ ಮಾಡಿರುವುದಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದ್ದು, ಸಾಮಾನ್ಯ ಜನರ ಬಳಕೆಯ ಅಡುಗೆ ಅನಿಲ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಮಂಗಳವಾರದಿಂದಲೇ ಜಾರಿಗೆ ಬರುವಂತೆ 19 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ದರದಲ್ಲಿ 17 ರೂ. ಇಳಿಕೆ ಮಾಡಲಾಗಿದೆ. ಆದರೆ 14 ಕೆಜಿ ತೂಕವಿರುವ ಸಾಮಾನ್ಯ ಜನರು ಬಳಸುವ ಗ್ಯಾಸ್ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಕಳೆದ ತಿಂಗಳು ಅಡುಗೆ ಅನಿಲ ದರ 50 ರೂ. ಏರಿಕೆ ಮಾಡಲಾಗಿತ್ತು. ಆದರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಏರಿಸಿದ ದರ ಇಳಿಕೆ ಮಾಡದೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಮಾತ್ರ ಇಳಿಕೆ ಮಾಡಿದೆ.
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಕೋಲ್ಕತಾದಲ್ಲಿ 1868.50 ರೂ.ನಿಂದ 1851.50 ರೂ.ಗೆ ಇಳಿಕೆಯಾಗಿದೆ. ಮುಂಬೈನಲ್ಲಿ 1713.50 ರೂ.ನಿಂದ 1699 ರೂ.ಗೆ, ಚೆನ್ನೈನಲ್ಲಿ 1921.50 ರೂ.ನಿಂದ 1906.50ಗೆ ಹಾಗೂ ದೆಹಲಿಯಲ್ಲಿ 1747.50 ರೂ.ಗೆ ದೊರೆಯುವುದು.


