ನವದೆಹಲಿ: ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ರಚನೆಯಾಗಿರುವ ಲೋಕಪಾಲದ ಕಾರ್ಯವ್ಯಾಪ್ತಿ ಕುರಿತು ಸಲ್ಲಿಕೆಯಾದ ದೂರುಗಳ ಕುರಿತು ಜುಲೈನಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ವಿಶೇಷ ಪೀಠವು ಅರ್ಜಿಗಳ ವಿಚಾರಣೆ ನಡೆಸಿತು. ಪೀಠದಲ್ಲಿ ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಅಭಯ್ ಎಸ್. ಓಕಾ ಇದ್ದರು.
‘ಇದು ಔಚಿತ್ಯದ ವಿಷಯವಾಗಿರುವುದರಿಂದ ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ನಿರ್ಧರಿಸಬೇಕು’ ಎಂದು ನ್ಯಾ. ಓಕಾ ಅಭಿಪ್ರಾಯಪಟ್ಟರು. ‘ಹೈಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ವಿರುದ್ಧ ಸಲ್ಲಿಕೆಯಾದ ದೂರಿಗೆ ಸಂಬಂಧಿಸಿದಂತೆ ಜ. ೨೭ರಂದು ಲೋಕಪಾಲ ಕುರಿತು ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.
ಖಾಸಗಿ ಕಂಪನಿಯೊಂದಕ್ಕೆ ನೆರವಾದ ಪ್ರಕರಣದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಪ್ರಭಾವ ಬೀರಿದ್ದು ಹಾಗೂ ಅದೇ ಹೈಕೋರ್ಟ್ನ ನ್ಯಾಯಮೂರ್ತಿಯೊಬ್ಬರು ಆ ಪ್ರಕರಣವನ್ನು ನಿರ್ವಹಿಸಿದ್ದರ ಕುರಿತು ದೂರು ದಾಖಲಾಗಿತ್ತು. ಸದ್ಯ ನ್ಯಾಯಮೂರ್ತಿಯಾಗಿರುವ ಮತ್ತು ಹಿಂದೆ ವಕೀಲರಾಗಿದ್ದವರು ವಿವಾದಿತ ಕಂಪನಿಯ ವಕೀಲರಾಗಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
‘ನ್ಯಾಯಾಂಗದ ಸ್ವಾತಂತ್ರಕ್ಕೆ ಸಂಬಂಧಿಸಿದ್ದಾಗಿರುವ ಈ ಪ್ರಕರಣ ತೀವ್ರ ಗೊಂದಲದಿಂದ ಕೂಡಿದೆ’ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ಲೋಕಪಾಲದ ಆದೇಶಕ್ಕೆ ಫೆ. ೨೦ರಂದು ತಡೆ ನೀಡಿತ್ತು. ಜತೆಗೆ ಕೇಂದ್ರ ಮತ್ತು ಲೋಕಪಾಲ ರಿಜಿಸ್ಟ್ರಾರ್ಗೆ ಹಾಗೂ ದೂರುದಾರರಿಗೆ ನೋಟಿಸ್ ಜಾರಿ ಮಾಡಿತ್ತು.
ಮಾರ್ಚ್ ೧೮ರಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಲೋಕಪಾಲದ ಕಾರ್ಯವ್ಯಾಪ್ತಿಯ ಕುರಿತು ಪರಿಶೀಲಿಸಲಾಗುವುದು. ಜತೆಗೆ ಪ್ರಸಕ್ತ ನ್ಯಾಯಮೂರ್ತಿಗಳ ವಿರುದ್ಧ ಸಲ್ಲಿಕೆಯಾಗಿರುವ ದೂರುಗಳ ಕುರಿತೂ ಪರಿಶೀಲನೆ ನಡೆಸಲಾಗುವುದು’ ಎಂದಿತ್ತು.