ಕೋಲಾರ: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ವಿರೋಧಿಸುತ್ತಿರುವ ಬಿಜೆಪಿಯ ಡೋಂಗಿತನ ಜಗಜ್ಜಾಹೀರಾಗಿದೆ. ಸಮೀಕ್ಷಾ ವರದಿ ಸಲ್ಲಿಸಿದ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿದ್ದೇ ಬಿಜೆಪಿ ಸರ್ಕಾರ. ಆಯೋಗದ ವರದಿಗೆ ಸಹಿ ಹಾಕಿರುವ ಸದಸ್ಯರನ್ನು ನೇಮಿಸಿದ್ದೂ ಬಿಜೆಪಿ ಸರ್ಕಾರ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ತಾಲ್ಲೂಕಿನ ಕುರ್ಕಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮುಖಂಡರ ದ್ವಂದ್ವ ನಿಲುವಿಗೆ, ರಾಜಕೀಯ ಮೇಲಾಟಕ್ಕೆ ಇದಕ್ಕಿಂತ ಉದಾಹರಣೇ ಬೇಕೇ? ಡೋಂಗಿತನವೇ ಅವರ ನಿಜವಾದ ಬಣ್ಣ. ಬಿಜೆಪಿ ಎಂದರೆ ಭಾರತೀಯ ಜುಮ್ಲಾ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ಸಮೀಕ್ಷಾ ವರದಿಯನ್ನು ಬಿಜೆಪಿ ಈಗ ವಿರೋಧಿಸುತ್ತಿದೆ. ಅವರದ್ದೇ ಸರ್ಕಾರವಿದ್ದಾಗ ಏಕೆ ಯಾವುದೇ ಕ್ರಮ ವಹಿಸಲಿಲ್ಲ? ಅಕಸ್ಮಾತ್ ಏನಾದರೂ ನ್ಯೂನತೆ ಇದ್ದಿದ್ದರೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ವರದಿ ಸ್ವೀಕರಿಸಿ ತಿರಸ್ಕರಿಸಬಹುದಿತ್ತು. ಅವತ್ತು ಇವರು ಏನು ಮಾಡುತ್ತಿದ್ದರು’ ಎಂದು ಪ್ರಶ್ನಿಸಿದರು.
‘ಬಿಜೆಪಿಯವರಿಗೆ ಡೋಂಗಿ ರಾಜಕೀಯ ಮಾಡಬೇಕೆಂಬುದನ್ನು ಬಿಟ್ಟರೆ ಯಾವುದೇ ವಿಚಾರದ ಬಗ್ಗೆ ಅವರಿಗೆ ನಿಜವಾದ ಕಾಳಜಿ ಇಲ್ಲ. ತೀರ್ಮಾನ ಮಾಡಬಹುದಾದ ಸ್ಥಾನದಲ್ಲಿದ್ದಾಗ ಸುಮ್ಮನಿದ್ದು, ಈಗ ವಿರೋಧಿಸುತ್ತಿದ್ದಾರೆ’ ಎಂದು ಟೀಕಿಸಿದರು.
‘ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ಜಾರಿ ಸಂಬಂಧ ನಮ್ಮ ಸರ್ಕಾರ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಮತ್ತಷ್ಟು ಅಭಿಪ್ರಾಯ ಸಂಗ್ರಹಿಸುವ ಕೆಲಸ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುತ್ತಿದೆ. ಎಲ್ಲರ ಅಭಿಪ್ರಾಯ ಪಡೆದುಕೊಂಡೇ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಯಾವುದೇ ಮುಚ್ಚುಮರೆ, ಹಿಂಜರಿಕೆ ಇಲ್ಲ’ ಎಂದರು.
‘ವರದಿಯ ಕೆಲ ಅಂಶಗಳ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ಸ್ವಾಗತಿಸುತ್ತೇವೆ, ಎಲ್ಲಾ ಅಭಿಪ್ರಾಯಗಳನ್ನು ನಾವು ಗೌರವಿಸುತ್ತೇವೆ. ಇದರಲ್ಲಿ ಪರ ಅಥವಾ ವಿರೋಧ ಇರಬಹುದು. ಕೆಲವರ ಅಭಿಪ್ರಾಯಗಳು ವಾಸ್ತವದಿಂದ ಕೂಡಿದ್ದರೆ, ಇನ್ನು ಕೆಲವರ ವಾದದಲ್ಲಿ ವಾಸ್ತವ ಇಲ್ಲ. ಕೆಲವರು ಕಟುವಾಗಿ ಮಾತನಾಡಿದ್ದು, ಅಪಾರ್ಥ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.
ಎಲ್ಲಾ ಸಚಿವರ ಅಭಿಪ್ರಾಯ ಪಡೆದು ಸರ್ಕಾರದ ಮಟ್ಟದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಒಂದು ಸುತ್ತು ಚರ್ಚಿಸಿದ್ದೇವೆ. ಮತ್ತಷ್ಟು ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ’ ಎಂದರು.