ಬೆಂಗಳೂರು: ಎಲ್ಲ ಧರ್ಮದವರೂ ಒಂದೇ ತಾಯಿಯ ಮಕ್ಕಳಂತೆ ಬದುಕುವುದೇ , ಸಮಾಜಕ್ಕೆ ನೀಡುವ ಉತ್ತಮ ಕೊಡುಗೆ. ದೇಶದ ಒಳಿತಿಗೆ ಕನ್ನಡಿಗರ ಪರವಾಗಿ ಪ್ರಾರ್ಥಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹಜ್ ಯಾತ್ರಿಕರಲ್ಲಿ ಮನವಿ ಮಾಡಿದರು.
ಅವರು ಇಂದು ಕರ್ನಾಟ ರಾಜ್ಯ ಹಜ್ ಸಮಿತಿ ಆಯೋಜಿಸಿರುವ 2025 ನೇ ಸಾಲಿನಹಜ್ ಯಾತ್ರಿಕರ ವಿಮಾನಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಈ ವರ್ಷ ಸುಮಾರು 8635 ಜನ ಯಾತ್ರಿಕರು ಹಜ್ ಯಾತ್ರೆಗೆ ಹೊರಟಿದ್ದು, ಮುಂದಿನ ತಿಂಗಳ 15ರವರೆಗೆ ಸುಮಾರು 27 ವಿಮಾನಗಳಲ್ಲಿ ಪ್ರಯಾಣ ಕೈಗೊಳ್ಳಲಿದ್ದಾರೆ. ಪ್ರತಿಯೊಬ್ಬ ಮುಸಲ್ಮಾನ ತಮ್ಮ ಜೀವತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕೆಂಬುದು ಅವರ ಪವಿತ್ರ ಆಚರಣೆಗಳಲ್ಲಿ ಒಂದಾಗಿದೆ. ಹಜ್ ಯಾತ್ರಿಕರೆಲ್ಲರಿಗೂ ಅವರ ಪ್ರಯಾಣ ಸುಖಕರವಾಗಿಲಿ ಎಂದು ಹಾರೈಸಿದರು. ಪವಿತ್ರ ಮೆಕ್ಕಾದಲ್ಲಿ ದೇಶದ ಒಳಿತಿಗೆ ಭಾರತೀಯರ ಅದರಲ್ಲಿಯೂ ಕನ್ನಡಿಗರ ಪರವಾಗಿ ಪ್ರಾರ್ಥನೆ ಮಾಡಲೆಂದು ಮುಖ್ಯಮಂತ್ರಿಗಳು ಕೋರಿದರು.
ಸರ್ಕಾರ ಒಂದು ಧರ್ಮದ ಓಲೈಕೆ ಮಾಡುವುದಿಲ್ಲ
ನಮ್ಮ ಸರ್ಕಾರ ಎಂದಿಗೂ ಒಂದು ವರ್ಗ, ಧರ್ಮದ ಜನರನ್ನು ಓಲೈಸಲು ಯಾವುದೇ ಕಾರ್ಯಕ್ರಮ ಕೈಗೊಳ್ಳುವುದಿಲ್ಲ. ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂಬುದು ನಮ್ಮ ಆಶಯ. ದೇಶದಲ್ಲಿ ವಿವಿಧ ಜಾತಿ ಧರ್ಮಗಳಿಗೆ ಸೇರಿದವರಾದರೂ, ನಾವೆಲ್ಲರೂ ಮೊದಲು ಮಾನವರಾಗಬೇಕು. ಯಾವ ಧರ್ಮವೂ ಮನುಷ್ಯತ್ವವನ್ನು ಹೊರತು ಮೃಗೀಯ ತತ್ವವನ್ನು ಬೋಧಿಸುವುದಿಲ್ಲ. ಮಾನವತಾ ಸಮಾಜವನ್ನು ನಿರ್ಮಿಸಬೇಕು. ದ್ವೇಷ, ಆಸೂಯೆಗಳಿಂದ ಯಾವ ಸಾಧನೆಯೂ ಸಾಧ್ಯವಿಲ್ಲ. ಸಮಸಮಾಜ , ಸೌಹಾರ್ದಯುತ ಸಮಾಜ ನಿರ್ಮಾಣವಾಗಬೇಕಾದರೆ ಪರಸ್ಪರ ಗೌರವಾದರಗಳು ಇರಬೇಕು ಎಂದರು.
ಎಲ್ಲಾ ಧರ್ಮದ ಬಡವರಿಗೂ ಸಮಾನತೆಯ ಬದುಕು
ನಮ್ಮ ಸಂವಿಧಾನ ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ಸ್ಪಷ್ಟವಾಗಿ ತಿಳಿಸಿದ್ದು, ಬೇರೆ ಧರ್ಮವನ್ನು ಸಹಿಸಿಕೊಳ್ಳುವ ಗುಣವನ್ನು ತಿಳಿಸುತ್ತದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವವೆಂಬ ಮೂರು ಅಂಶಗಳನ್ನು ಸಂವಿಧಾನ ಬೋಧಿಸುವಂತೆ, ಬಾಳಬೇಕಿದೆ. ಯಾರನ್ನೂ ದ್ವೇಷದಿಂದ, ವೈರತ್ವದಿಂದ ಗೆಲ್ಲಲು ಸಾಧ್ಯವಿಲ್ಲ ವೆಂಬುದನ್ನು ಎಲ್ಲ ಧರ್ಮದವರೂ ಮೂಲಭೂತವಾಗಿ ಅರ್ಥೈಸಿಕೊಳ್ಳಬೇಕು. ನಮ್ಮ ಸರ್ಕಾರ ಕೇವಲ ಒಂದು ಧರ್ಮವನ್ನು ಓಲೈಸಲು ಅಥವಾ ಒಂದು ಧರ್ಮದ ಅಭಿವೃದ್ಧಿಗೆ ಕೆಲಸ ಮಾಡುವುದಿಲ್ಲ. ಸಮಾಜದ ಎಲ್ಲಾ ಧರ್ಮದ ಬಡವರೂ, ಸಮಾನತೆಯ ಬದುಕನ್ನು ತಮ್ಮದಾಗಿಸಿಕೊಳ್ಳಬೇಕೆಂಬುದು ನಮ್ಮ ಆಶಯ ಎಂದರು.
ಸಮಾನತೆ, ಪ್ರೀತಿ, ವಿಶ್ವಾಸವಿರುವ ಮಾನವೀಯತೆ ಇರುವ ಸಮಾಜ ಅಗತ್ಯ
ಸಮಾನ ಅವಕಾಶಗಳನ್ನು ಪಡೆದು ಬದುಕಬೇಕು. ಸ್ವಾತಂತ್ರ್ಯ ಬಂದ ನಂತರ ದೇಶ ವಿಭಜನೆಯಾದಾಗ ಭಾರತದಲ್ಲಿ ಉಳಿದುಕೊಂಡ ಮುಸಲ್ಮಾನರು ಭಾರತೀಯರು. ಭಾರತೀಯರಾಗಿ ಇರಬೇಕೆ ಹೊರತು ಬೇರೊಂದು ಕೆಲಸ ಮಾಡುವ ಯೋಚನೆಯನ್ನು ಮಾಡಬಾರದು. ಮುಸಲ್ಮಾನರು ಮತ್ತು ಹಿಂದೂಗಳು ಪರಸ್ಪರರನ್ನು ನಮ್ಮ ಅಣ್ಣ ತಮ್ಮಂದಿರು ಎಂಬ ಭಾವನೆ ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ. ಕ್ರೈಸ್ತರೂ ನಮ್ಮವರೇ ಎಂಬ ಭಾವನೆ ಬೆಳೆಸಿಕೊಂಡಾಗ ಮಾತ್ರ ಸೌಹಾರ್ದತೆಯಿಂದ , ಸಮಾನತೆಯಿಂದ ಬಾಳಲು ಸಾಧ್ಯವಾಗುತ್ತದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ದೇವರು ಸಮಾನತೆಯನ್ನು ಬಯಸುತ್ತಾರೆಯೇ ಹೊರತು ದ್ವೇಷದ ಸಮಾಜವನ್ನು ಬಯಸಲು ಸಾಧ್ಯವಿಲ್ಲ. ಸಮಾನತೆ, ಪ್ರೀತಿ, ವಿಶ್ವಾಸವಿರುವ ಮಾನವೀಯತೆ ಇರುವ ಸಮಾಜವನ್ನು ಬಯಸಬಹುದೇ ಹೊರತು, ದ್ವೇಷದ ಅಸಮಾನ ಸಮಾಜವನ್ನು ಬಯಸುವುದು ಸಾಧ್ಯವಿಲ್ಲ ಎಂದರು.
ಯಾರನ್ನೂ ಓಲೈಸುವ ಕೆಲಸ ಮಾಡೋಲ್ಲ.
ನಮ್ಮ ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ರಾಜ್ಯದ ಬಜೆಟ್ 4 ಲಕ್ಷದ 9 ಸಾವಿರ ಕೋಟಿಯಿದ್ದರೆ, ಅದರಲ್ಲಿ ಮುಸಲ್ಮಾನರಿಗೆ ನೀಡಿರುವುದು 4500 ಕೋಟಿಗಳು. ಅದು ದೊಡ್ಡದಲ್ಲ. ಅವರರವ ಪಾಲನ್ನು ಅವರಿಗೆ ಕೊಡಬೇಕು. ಈ ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆಯಾಗಬೇಕು. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಜಾತಿ ಹೋಗಲು ಸಾಧ್ಯವಾಗುತ್ತದೆ. ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣವಾಗುತ್ತದೆ. ರಾಜಕೀಯವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ಸಮಾನತೆಯಿಡಬೇಕು ಎಂದರು. ಇದನ್ನೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಒತ್ತಿ ಹೇಳಿದ್ದರು.
ಅದರಲ್ಲಿ ನಮಗೆ ನಂಬಿಕೆ ಇದೆ. ನಮ್ಮ ಸಂವಿಧಾನ ಹೇಳಿರುವುದೇ ಅದು. ಸಂವಿಧಾನದ ಧ್ಯೇಯೋದ್ದೇಶಗಳನ್ನು, ಆಶಯಗಳನ್ನು ಜಾರಿ ಮಾಡುತ್ತೇವೆಯೇ ಹೊರತು ಯಾರನ್ನೂ ಓಲೈಸುವ ಕೆಲಸ ಮಾಡೋಲ್ಲ. ನಮಗೆ ಎಲ್ಲರೂ ಒಂದೇ ಎಂದರು. ನ್ಯಾಯಯುತವಾಗಿ ಸಿಗಬೇಕಾದ. ಹಕ್ಕುಗಳನ್ನು ದೊರಕಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಯಾರೂ ಏನೇ ಹೇಳಿದರೂ ಅದಕ್ಕೆ ನಾವು ಸೊಪ್ಪು ಹಾಕುವವರಲ್ಲ. ನಮಗೆ ಸಂವಿಧಾನ ಮುಖ್ಯ. ಅದರ ಆಶಯಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ ಎಂದರು.
ಮಂಗಳೂರು, ಕಲಬುರ್ಗಿಯಲ್ಲಿ ಹಜ್ ಭವನ
ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಮೇ 16 ರಂದು ಶಂಕುಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಘೋಷಿಸಿದರು. ಜಮೀರ್ ಅಹಮ್ಮದ್ ಖಾನ್ ಅವರು ಕಲಬುರಗಿಯಲ್ಲಿ ಹಾಜ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದರು. ಬೆಂಗಳೂರಿನಲ್ಲಿ ಹಜ್ ಭವನಕ್ಕೆ ಬರುವ ಪ್ರವಾಸಿಗರು ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಈ ಬಾರಿ 10 ಕೋಟಿ ಅನುದಾನ ನೀಡಲಾಗಿದೆ ಎಂದರು.
ಮುಸಲ್ಮಾನರಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗಬೇಕು. ಸಾಚಾರ್ ಸಮಿತಿ ವರದಿಯಲ್ಲಿ ಶಿಕ್ಷಣದ ಪ್ರಮಾಣ ಬಹಳ ಕಡಿಮೆ ಇದೆ ಎಂದು ತಿಳಿಸಲಾಗಿದೆ. ಶಿಕ್ಷಣ ಇಲ್ಲದಿದ್ದರೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಸಿಎಂ ಆಗ್ರಹಿಸಿದರು.
ನಾವು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಎಲ್ಲರಿಗೂ ರಕ್ಷಣೆ ಕೊಡುವುದು ನಮ ಕರ್ತವ್ಯ. ಕರ್ನಾಟಕದಲ್ಲಿ ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿಗಳು ಭರವಸೆಯಿತ್ತರು. ಕಾನೂನಿನ ಮುಂದೆ ಎಲ್ಲರೂ ಸಮಾನರು.
ಎಲ್ಲರೂ ಒಂದು ತಾಯಿಯ ಮಕ್ಕಳಂತೆ ಬದುಕೋಣ ಎಂದು ಹಜ್ ಗೆ ತೆರಳುವವರು ಪ್ರಾರ್ಥನೆ ಮಾಡಿ, ಅಂತಹ ವಾತಾವರಣ ನಿರ್ಮಿಸೋಣ ಎಂದರು.