ಪಾಕಿಸ್ತಾನದ ವಿರುದ್ಧ ಇಂದಿರಾ ಗಾಂಧಿ ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು, ಪ್ರಧಾನಿ ಮೋದಿ ಜೊತೆಗೆ ನಾವಿದ್ದೇವೆ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ವಿಜಯಪುರನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ಅನಿವಾರ್ಯತೆ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿಗಳು ಯುದ್ಧ ಬೇಡವೇ ಬೇಡ ಎಂದು ಹೇಳಿಲ್ಲ. ಯುದ್ಧವೇ ಪರಿಹಾರವಲ್ಲ ಅನ್ನುವ ಅರ್ಥದಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಬಳಿಯೂ ನ್ಯೂಕ್ಲಿಯರ್ ಇದೆ, ಅಣುಬಾಂಬ್ ದಾಳಿಯ ಬೆದರಿಕೆ ಒಡ್ಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಯುದ್ಧ ಮಾಡಲಿ ಎಂದು ಹೇಳಿದ್ದಾಗಿ ವಿವರಿಸಿದರು. ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕು. ಇಂದಿರಾ ಗಾಂಧಿ ಕ್ರಮ ಕೈಗೊಂಡ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು, ಮೋದಿ ಜೊತೆಗೆ ಎಲ್ಲ ರಾಜಕೀಯ ಪಕ್ಷಗಳೂ ಇವೆ ಎಂದರು.
ಕಾಂಗ್ರೆಸ್ ಪ್ರತಿಭಟನಾ ಸಮಾವೇಶದಲ್ಲಿ ಎಎಸ್ಪಿ ಮೇಲೆ ಕೈಎತ್ತಿದ ಸಿಎಂ ನಡೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹೊಡೆಯಲು ಹೋಗಿಲ್ಲ. ಯಾರು ಎಸ್ಪಿ ಅಂತ ಆ ಕಡೆ ಕೈ ತೋರಿಸಿದ್ದಾರೆ. ಬಿಜೆಪಿಯವರು ಬೇಕಾದದ್ದು ಮಾಡಬಹುದು ಅಂದುಕೊಂಡಿದ್ದಾರೆ. ನಾಳೆ ಮೋದಿ ಕಾರ್ಯಕ್ರಮದಲ್ಲಿ ನಾವು 50 ಜನ ಹೋಗಿ ಗಲಾಟೆ ಮಾಡಿದರೆ ಅಥವಾ ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಗಲಾಟೆ ಮಾಡಿಸಿದರೆ ಹೇಗಿರುತ್ತದೆ ಎಂದು ಪ್ರಶ್ನಿಸಿದರು.