ಬೆಂಗಳೂರಿನಲ್ಲಿ ನಕಲಿ ನಾಗಸಾಧುವೊಬ್ಬರು ಕಾರು ಚಾಲಕನಿಗೆ ಮಂಕುಬೂದಿ ಎರಚಿ ರುದ್ರಾಕ್ಷಿ ಕೊಟ್ಟು ಕೈಯಲ್ಲಿದ್ದ 10 ಗ್ರಾಂ ಚಿನ್ನದ ಉಂಗುರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಬಹಿರಂಗಗೊಂಡಿದೆ.
ವೈಯಾಲಿಕಾವಲ್ ನಿವಾಸಿ ವೆಂಕಟಕೃಷ್ಣಯ್ಯ ಎಂಬವರು ಇತ್ತೀಚೆಗೆ ಖಾಸಗಿ ಹೋಟೆಲ್ ಬಳಿ ಮಾಲೀಕರನ್ನು ಡ್ರಾಪ್ ಮಾಡಿ ರಸ್ತೆ ಬದಿ ಕಾರು ನಿಲ್ಲಿಸಿ ಕೊಂಡಿದ್ದರು. ಆಗ ಅಲ್ಲಿಗೆ ಬಂದ ನಕಲಿ ನಾಗಸಾಧು ಚಾಲಕನನ್ನು ಕಂಡು 5 ನಿಮಿಷ ವಿಶ್ರಾಂತಿ ಪಡೆದುಕೊಳ್ಳಬೇಕು ಅಂತ ಹೇಳಿ ಮಾತು ಶುರು ಮಾಡಿದ್ದ.
ಚಾಲಕನಿಗೆ 5 ರುದ್ರಾಕ್ಷಿ ಕೊಟ್ಟು ಒಂದು ವಾಪಸ್ ಕೂಡುವಂತೆ ಹೇಳಿದ್ದ. ವಾಪಸ್ ಕೊಟ್ಟ ರುದ್ರಾಕ್ಷಿಯನ್ನು ಪೇಪರ್‌ನಲ್ಲಿ ಮಡಚಿ ಮತ್ತೆ ತೆರೆದು ರುದ್ರಾಕ್ಷಿ ಬದಲು ಹೂ ತೋರಿಸಿ, ನೋಡು ಇದು ಶುಭ ಸೂಚಕ, ನಿನಗೆ ಒಳ್ಳೆಯದಾಗುತ್ತದೆ, ಲಕ್ಷ್ಮೀ ಕೃಪಾಕಟಾಕ್ಷವಾಗುತ್ತದೆ ಎಂದು ನಂಬಿಸಿದ್ದಾನೆ.
ಬಳಿಕ ಚಾಲಕನಿಗೆ ನಿನ್ನ ಕೈಯಲ್ಲಿರುವ ಚಿನ್ನದ ಉಂಗುರ ಕೊಡು ಅಂತ ಕೇಳಿ, ಚಿನ್ನದ ಉಂಗುರ ಬಿಚ್ಚಿ ಕೊಡುತ್ತಿರುವಾಗ ಹಣೆಗೆ ಬೂದಿ ರೀತಿಯ ಪೌಡರ್ ಹಚ್ಚಿದ್ದಾನೆ. ಹಿಂದೆ ತಿರುಗಿ ನೋಡದೆ ಸ್ವಲ್ಪ ಮುಂದೆ ಹೋಗು, ಇಲ್ಲದಿದ್ರೆ ಕೆಡುಕಾಗುತ್ತದೆ ಅಂತ ಹೇಳಿದ್ದಾನೆ. ಕಪಟ ನಾಗಾಸಾಧುವಿನ ಮಾತು ಕೇಳಿ ಮಂಕು ಬಡಿದಂತಾದ ವೆಂಕಟಕೃಷ್ಣಯ್ಯ ಮುಂದೆ ಬಂದಿದ್ದು, ನಕಲಿ ನಾಗಸಾಧು ಅಲ್ಲಿಂದ ಕಾಲ್ಕಿತ್ತಿದ್ದಾನೆ.