ವಾಸ್ತವವಾಗಿ ಜಾತಿ ಗಣತಿಯು ಸಾಮಾಜಿಕ-ರಾಜಕೀಯ ಸಾಧನವಾಗಿದ್ದು ಅದು ಅಧಿಕಾರ ರಚನೆಗಳನ್ನು ಮರುರೂಪಿಸಬಹುದು. ಕಲ್ಯಾಣ ನೀತಿಗಳನ್ನು ಹೊಸದಾಗಿ ನಿರೂಪಿಸಬೇಕಾಗಬಹುದು ಮತ್ತು ಸಮಾಜದೊಳಗಿನ ಅಸಮಾನತೆಗಳನ್ನು ಎತ್ತಿ ತೋರಿಸಬಹುದು. ಭಾರತದಲ್ಲಿ, ಸಂಪನ್ಮೂಲಗಳು, ಅವಕಾಶಗಳು ಮತ್ತು ಆರ್ಥಿಕ ಪ್ರವೇಶವನ್ನು ನಿರ್ಧರಿಸುವಲ್ಲಿ ಜಾತಿಯು ನಿರ್ಣಾಯಕ ಅಂಶವಾಗಿ ಉಳಿದಿದೆ.
ಯಾರು ಏನೇ ಹೇಳಿದರೂ ೨೦೧೫ರ ಕರ್ನಾಟಕ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಾಮಾನ್ಯವಾಗಿ ಜಾತಿ ಗಣತಿ ಎಂದೇ ಕರೆಯಲಾಗು ತ್ತದೆ. ಇದು ರಾಜ್ಯದಾದ್ಯಂತ ಸುಮಾರು ೫.೯೮ ಕೋಟಿ ವ್ಯಕ್ತಿಗಳನ್ನು ಒಳಗೊಂಡಿದೆ ಎಂದು ಹಿಂದುಳಿದ ವರ್ಗ ಎಷ್ಟೇ ಹೇಳಿದರೂ ಇದನ್ನು ನಂಬುವ ಸ್ಥಿತಿ ಯಲ್ಲಂತೂ ಇಂದು ಯಾರು ಇಲ್ಲ. ಅಷ್ಟರಮಟ್ಟಿಗೆ ಇದು ವಿವಾದಕ್ಕೆ ಒಳಗಾಗಿದೆ. ಈ ಗಣತಿ ಒಂದು ದಶಕದ ಹಿಂದೆಯೇ ಪೂರ್ಣಗೊಂಡಿದ್ದರೂ, ವರದಿಯ ಅಧಿಕೃತ ಬಿಡುಗಡೆ ವಿಳಂಬವಾಗಿದೆ. ಆದಾಗ್ಯೂ, ದತ್ತಾಂಶದ ಸೋರಿಕೆಯಾಗಿ ಎಲ್ಲ ಸಮುದಾಯದಲ್ಲೂ ಆಶ್ಚರ್ಯ, ಆಕ್ರೋಶ ಮತ್ತು ಆವೇಶ ಉಂಟಾಗುತ್ತಿದೆ.
ಈ ಮಧ್ಯೆ ಸಿಇಟಿ ಪರೀಕ್ಷೆಯ ಜನಿವಾರದ ವಿವಾದ ಇನ್ನೊಂದು ಮಜಲನ್ನು ತಲುಪಿದೆ. ಇದು ಸಹ ಗಮನಾರ್ಹ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳನ್ನು ಹುಟ್ಟುಹಾಕಿದೆ. ಅಧಿಕಾರಿಗಳಿಗೆ ಬುರ್ಖಾ ತೆಗೆಸುವ ಧ್ಯೆರ್ಯ ಇದೆಯೇ ಎಂದು ಕೆಲ ನೆಟ್ಟಿಗರು ಕೇಳುತ್ತಿದ್ದಾರೆ. ವಾಸ್ತವವಾಗಿ ಜಾತಿ ಗಣತಿಯು ವಿವಿಧ ಜಾತಿ ಸಮುದಾಯಗಳ ವ್ಯವಸ್ಥಿತವಾದ ದತ್ತಾಂಶ ಸಂಗ್ರಹವನ್ನು ಒಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಶಿಕ್ಷಣ, ಉದ್ಯೋಗ ಮತ್ತು ಆದಾಯದಂತಹ ಸಾಮಾಜಿಕ-ಆರ್ಥಿಕ ಸೂಚಕಗಳನ್ನು ಒಳಗೊಂಡಿರುತ್ತವೆ. ಭಾರತವು ೧೯೩೧ರವರೆಗೆ ದಶವಾರ್ಷಿಕ ಜನಗಣತಿಯಲ್ಲಿ ಕೊನೆಯ ಬಾರಿಗೆ ಜಾತಿ ಡೇಟಾವನ್ನು ಯಾವುದೇ ವಿವಾದ ಇಲ್ಲದೇ ಸಂಗ್ರಹಿಸಿದೆ. ಸ್ವಾತಂತ್ರ್ಯದ ನಂತರದ ಎಸ್‌ಸಿ ಮತ್ತು ಎಸ್‌ಟಿಗಳನ್ನು ಸಂಖ್ಯೆಯನ್ನು ಮಾತ್ರ ಪಡೆಯಲಾಗಿದೆ. ಇತ್ತೀಚಿನ ಕೋರ್ಟ್‌ಗಳ ಆದೇಶದಂತೆ ಸಾಕ್ಷ್ಯಾಧಾರಿತ ನೀತಿ ನಿರೂಪಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಅಂಕಿಅಂಶಗಳಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಇತರ ಎಣಿಸದ ಜಾತಿಗಳನ್ನು ಕೇಂದ್ರೀಕರಿಸಿ ದೇಶದಲ್ಲಿ ಗಣತಿ ನಡೆದಿದೆ. ನೆನಪಿರಲಿ, ೨೦೨೧ರ ಸಾಮಾನ್ಯ ಜನಗಣತಿ ಇನ್ನೂ ನಡೆದಿಲ್ಲ.
ಜಾತಿ ಗಣತಿಯ ಸೋರಿಕೆಯಾದ ಡೇಟಾದಿಂದ ಪ್ರಮುಖ ಅಂಶವೆಂದರೆ, ಕರ್ನಾಟಕದಲ್ಲಿ ಪರಿಶಿಷ ಜಾತಿಗಳು (ಎಸ್‌ಸಿ) ಸರಿಸುಮಾರು ೧.೦೯ ಕೋಟಿ ವ್ಯಕ್ತಿಗಳು, ಸಮೀಕ್ಷೆ ಮಾಡಿದ ಜನಸಂಖ್ಯೆಯ ೧೮.೨೭% ರಷ್ಟಿದ್ದು, ಅವರು ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯವಾಗಿ ಹೊರಹೊಮ್ಮಿದ್ದಾರೆ. ಮುಸ್ಲಿಮರು ಸುಮಾರು ೭೬.೯೯ ಲಕ್ಷ ವ್ಯಕ್ತಿಗಳು ಅಂದರೆ ಜನಸಂಖ್ಯೆಯ ೧೨.೮೭% ರಷ್ಟಿದ್ದಾರೆ. ವೀರಶೈವ-ಲಿಂಗಾಯತರು ಸರಿಸುಮಾರು ೬೬.೩೫ ಲಕ್ಷ ವ್ಯಕ್ತಿಗಳು (೧೧.೦೯%), ಪರಿಶಿಷ ಪಂಗಡಗಳು (ಎಸ್‌ಟಿ) ಸರಿಸುಮಾರು ೪೨.೮೧ ಲಕ್ಷ ವ್ಯಕ್ತಿಗಳು (೭.೧%), ಬ್ರಾಹ್ಮಣರು ಸುಮಾರು ೧೫.೬೪ ಲಕ್ಷ ವ್ಯಕ್ತಿಗಳು (೨.೬೧%) ಇದ್ದಾರೆ ಎಂದು ಈ ಸಮಿತಿ ಹೇಳಿದೆ. ಇತರೆ ಹಿಂದುಳಿದ ವರ್ಗಗಳು ರಾಜ್ಯದ ಜನಸಂಖ್ಯೆಯ ಸುಮಾರು ೭೦%ರಷ್ಟಿದ್ದಾರೆ. ಸೋರಿಕೆಯಾದ ವರದಿ ಆಧಾರದಲ್ಲಿ ಕರ್ನಾಟಕದಲ್ಲಿ ಜನಸಂಖ್ಯೆಯ ಚೌಕಟ್ಟಿಗೆ ಹೊಂದಾಣಿಕೆಗಳನ್ನು ಗಮನಿಸಿ ಆಯೋಗ ಹೇಳಿರುವ ಮೀಸಲಾತಿ ಪ್ರಮಾಣವನ್ನು ನೋಡುವುದಾದರೆ, ಒಬಿಸಿಗಳ ಮೀಸಲಾತಿಯನ್ನು ಪ್ರಸ್ತುತ ೩೨% ರಿಂದ ೫೧% ಕ್ಕೆ ಹೆಚ್ಚಳ, ಮುಸ್ಲಿಮರ ಮೀಸಲಾತಿಯನ್ನು ೪% ರಿಂದ ೮% ಕ್ಕೆ ಹೆಚ್ಚಳ, ಒಕ್ಕಲಿಗರಿಗೆ ೭% ಮೀಸಲಾತಿ, ವೀರಶೈವ-ಲಿಂಗಾಯತರಿಗೆ ೮% ಮೀಸಲಾತಿಯನ್ನು ನಿಗದಿಪಡಿಸಿ ಆಯೋಗ ಶಿಫಾರಸ್ಸು ಮಾಡಿದೆ. ಈ ಬದಲಾವಣೆಗಳು ರಾಜ್ಯದಲ್ಲಿ ಒಟ್ಟು ಮೀಸಲಾತಿಯನ್ನು ೭೩.೫% ಕ್ಕೆ ಏರಿಸುತ್ತವೆ. ಆದರೆ ಇದು ಸುಪ್ರೀಂಕೋರ್ಟ್‌ನ ಶಿಫಾರಸು ಮಿತಿ ೫೦% ಅನ್ನು ಮೀರಿಸುತ್ತದೆ. ಅಲ್ಲಿಗೆ ಈ ನಾಟಕ ಮುಕ್ತಾಯ ವಾಗುತ್ತದೆ.
ಈ ಜಾತಿ ಗಣತಿ ವಿವಾದಗಳು ರಾಜಕೀಯ ಚರ್ಚೆಗೆ ಕಾರಣವಾಗಿವೆ. ಆಳುವ ಪಕ್ಷದಲ್ಲಿ ಇದು ಆಂತರಿಕ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಕೆಲ ಕಾಂಗ್ರೆಸ್ ನಾಯಕರು ವರದಿಗೆ ಅವೈಜ್ಞಾನಿಕ ಎಂಬ ಹಣೆಪಟ್ಟಿ ಹಚ್ಚಿ ವರದಿ ತಿರಸ್ಕರಿಸುವಂತೆ ಒತ್ತಾಯಿಸಿದ್ದಾರೆ. ಒಳ ಮೀಸಲಾತಿ ಕುರಿತಾದ ಹೋರಾಟ ಇಲ್ಲದ ಸಮಯ ದಲ್ಲಿ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿದ್ದ ಸಮಯದಲ್ಲಿ ಈ ಜಾತಿಗಣತಿ ನಡೆದಿದೆ. ಶಾಲಾ ಮಕ್ಕಳು ಅರ್ಜಿಯನ್ನು ತುಂಬಿದ್ದಾರೆ ಎನ್ನುವ ಆರೋಪವಿದೆ. ಲಿಂಗಾಯತ ಮತ್ತು ಒಕ್ಕಲಿಗ ಮುಂತಾದ ಪ್ರಬಲ ಸಮುದಾಯಗಳ ನಾಯಕರು ಮಾಹಿತಿಯ ನಿಖರತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.
ಇದು ಉಪ-ಜಾತಿ ವರ್ಗೀಕರಣಗಳು ಕಡಿಮೆ ಪ್ರಾತಿನಿಧ್ಯಕ್ಕೆ ಕಾರಣವಾಗಿರಬಹುದು ಎಂದು ಸಂದೇಹಿಸಿದ್ದಾರೆ. ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿದೆ ಎಂದು ಭಾರತೀಯ ಜನತಾ ಪಕ್ಷ ಆರೋಪಿಸಿದೆ. ಒಟ್ಟಿನಲ್ಲಿ ಈ ಸಂಪೂರ್ಣ ಜಾತಿ ಗಣತಿ ತಾಂತ್ರಿಕ ಸಮಸ್ಯೆಗಳು ಇರುವುದಂತೂ ಮೇಲ್ನೋಟಕ್ಕೆ ಸತ್ಯ. ವಾಸ್ತವವಾಗಿ ಜಾತಿ ಗಣತಿಯು ಜನ ಸಾಮಾನ್ಯರ ಸಂಖ್ಯಾಶಾಸ್ತ್ರದ ಆಲೋಚನೆಗಿಂತ ಹೆಚ್ಚಾಗಿರುತ್ತದೆ. ಇದು ಸಾಮಾಜಿಕ-ರಾಜಕೀಯ ಸಾಧನವಾಗಿದ್ದು ಅದು ಅಧಿಕಾರ ರಚನೆಗಳನ್ನು ಮರುರೂಪಿಸಬಹುದು. ಕಲ್ಯಾಣ ನೀತಿಗಳನ್ನು ಹೊಸದಾಗಿ ನಿರೂಪಿಸಬೇಕಾಗಬಹುದು ಮತ್ತು ಸಮಾಜ ದೊಳಗಿನ ಅಸಮಾನತೆಗಳನ್ನು ಎತ್ತಿ ತೋರಿಸಬಹುದು. ಭಾರತದಲ್ಲಿ, ಸಂಪನ್ಮೂಲಗಳು, ಅವಕಾಶಗಳು ಮತ್ತು ಆರ್ಥಿಕ ಪ್ರವೇಶವನ್ನು ನಿರ್ಧರಿಸುವಲ್ಲಿ ಜಾತಿಯು ನಿರ್ಣಾಯಕ ಅಂಶವಾಗಿ ಉಳಿದಿದೆ. ಕೆಲವರ ಪ್ರಕಾರ ಹಿಂದುಗಳಲ್ಲಿ ೧೦೯೫ ಕ್ಕೂ ಅಧಿಕ ಜಾತಿಗಳಿವೆ. ಅದರಲ್ಲಿ ಸಾವಿರಾರು ಉಪಜಾತಿಗಳಿವೆ. ಬೇರೆ ಧರ್ಮದವರಲ್ಲೂ ಜಾತಿಗಳಿವೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಈ ಜಾತಿ ಗಣತಿಯು ಪ್ರಮುಖ (ಪ್ರಬಲ) ಮತ್ತು ಸಣ್ಣ (ಅಂಚಿಗೆ ಒಳಗಾದ) ಎರಡೂ ಜಾತಿಗಳ ಮೇಲೆ ಆಳವಾದ ಪರಿಣಾಮಗಳನ್ನು ಹೊಂದಿದೆ.
ಕರ್ನಾಟಕದಲ್ಲಿ ಪ್ರಮುಖ ಅಥವಾ ಪ್ರಬಲ ಜಾತಿಗಳು-ಉದಾಹರಣೆಗೆ ಒಕ್ಕಲಿಗರು, ವೀರಶೈವ-ಲಿಂಗಾಯತರು, ಬ್ರಾಹ್ಮಣ, ವಿಶ್ವಕರ್ಮ, ಈಡಿಗ ಮುಂತಾದ ಸಮುದಾಯಗಳು ಐತಿಹಾಸಿಕವಾಗಿ ಸಾಮಾಜಿಕ-ರಾಜಕೀಯ ಮತ್ತು ಆರ್ಥಿಕ ಅಧಿಕಾರವನ್ನು ಹೊಂದಿದ್ದಾರೆ. ಆದರೆ ಕರ್ನಾಟಕ ಜಾತಿ ಗಣತಿಯು ಲಿಂಗಾಯತ ಮತ್ತು ಒಕ್ಕಲಿಗ ಜನಸಂಖ್ಯೆಯು ಹಿಂದೆ ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಎಂದು ಹೇಳುತ್ತಿದೆ. ಇದು ರಾಜಕೀಯ ಪ್ರಾತಿನಿಧ್ಯ ಮತ್ತು ಮೀಸಲಾತಿ ಕೋಟಾಗಳ ಬಗ್ಗೆ ಪ್ರಬಲ ಸಮುದಾಯದಲ್ಲಿ ಆತಂಕವನ್ನು ಉಂಟುಮಾಡಿದೆ. ಪ್ರಸ್ತುತ ಜಾತಿ ಗಣತಿಯು ಈ ಅಧಿಕಾರ ಕೇಂದ್ರೀಕೃತ ಗುಂಪುಗಳ ಮೇಲೆ ಬಹು ಪರಿಣಾಮ ಗಳನ್ನು ಬೀರಬಹುದು ಎನ್ನಲಾಗಿದೆ. ಇದು ವಿವಿಧ ಸಮುದಾಯಗಳ ಸಾಮಾಜಿಕ ಸ್ಥಿತಿಯ ಮರುಮೌಲ್ಯಮಾಪನಕ್ಕೆ ಹೊಸದಾಗಿ ದಾರಿ ಮಾಡಿಕೊಡಬಹುದು ಎನ್ನುವ ಭಯ ಉಂಟಾಗಿದೆ. ಜಾತಿ ಗಣತಿಯು ಕೆಲವು ಸಮುದಾಯಗಳ ಗ್ರಹಿಸಿದ ಸಂಖ್ಯಾತ್ಮಕ ಪ್ರಾಬಲ್ಯವನ್ನು ಪ್ರಶ್ನಿಸುತ್ತಿರುವುದರಿಂದ ಆ ಸಮುದಾಯಗಳ ಅಸ್ಮಿತೆ ಸಹ ದೊಡ್ಡ ಪ್ರಶ್ನೆಯಾಗಿ ಹೊರಹೊಮ್ಮುವ ಆತಂಕವಿದೆ.
ಈ ವರದಿಯನ್ನು ಆಧರಿಸಿ ಕೆಲವು ಪ್ರಬಲ/ದುರ್ಬಲ ಜಾತಿಗಳು ತಮ್ಮ ಸಾಮಾಜಿಕ-ಆರ್ಥಿಕ ಅನುಕೂಲಗಳ ಹೊರತಾಗಿಯೂ, ಮೀಸಲಾತಿ ಪ್ರಯೋಜನ ಗಳನ್ನು ಪಡೆಯಲು ತಮಗೆ ಬೇಕಾದ ವರ್ಗದಲ್ಲಿ ಸೇರ್ಪಡೆಗಾಗಿ ದೊಡ್ಡ ಮಟ್ಟದ ಲಾಬಿ ಮಾಡಲು ಜನಗಣತಿ ಡೇಟಾವನ್ನು ಬಳಸಬಹುದು ಎನ್ನುವ ಚರ್ಚೆ ಇದೀಗ ಉಂಟಾಗಿದೆ. ಹಾಗಾದರೆ ಇದು ನಿಜವಾಗಿಯೂ ಅಂಚಿನಲ್ಲಿರುವ ಗುಂಪುಗಳು ಮತ್ತು ತುಲನಾತ್ಮಕವಾಗಿ ಸವಲತ್ತು ಹೊಂದಿರುವವರ ಸಮುದಾಯಗಳ ನಡುವೆ ಉದ್ವಿಗ್ನತೆಗೆ ಭವಿಷ್ಯದಲ್ಲಿ ಕಾರಣವಾಗುತ್ತದೆ. ಅಲ್ಲದೇ ಈ ವರದಿ ರಾಜಕೀಯ ಅಧಿಕಾರದಲ್ಲಿ ಬದಲಾವಣೆಗೆ ದಿಕ್ಸೂಚಿಯಾಗಬಹುದು. ಎಲ್ಲರಿಗೂ ತಿಳಿದಿರುವಂತೆ ಚುನಾವಣಾ ತಂತ್ರಗಳು ಹೆಚ್ಚಾಗಿ ಜಾತಿ ಅಂಕಗಣಿತವನ್ನು ಅವಲಂಬಿಸಿವೆ. ಪ್ರಮುಖ ಜಾತಿಗಳು ಈ ಹಿಂದೆ ನಂಬಿದ್ದಕ್ಕಿಂತ ಕಡಿಮೆ ಸಂಖ್ಯೆಯಲ್ಲಿವೆ ಎಂದು ದತ್ತಾಂಶವನ್ನು ಒಪ್ಪಿಕೊಂಡರೆ ರಾಜಕೀಯ ಅಧಿಕಾರಕ್ಕೆ ಆ ಸಮುದಾಯಗಳ ಚೌಕಾಶಿ ಶಕ್ತಿಯು ಕ್ಷೀಣಿಸಬಹುದು ಮತ್ತು ಸಮ್ಮಿಶ್ರ ರಾಜಕೀಯ ಮತ್ತು ನಾಯಕ ತ್ವದ ಮಾದರಿಗಳನ್ನು ಮರುರೂಪಿಸಬಹುದು ಎನ್ನುವ ವಾದವು ಸಹ ಇದೆ. ದಲಿತರು, ಪರಿಶಿಷ ಪಂಗಡಗಳು, ಅಲೆಮಾರಿ ಸಮುದಾಯಗಳು ಮತ್ತು ಓಬಿಸಿ ವರ್ಗದೊಳಗಿನ ಅನೇಕ ಉಪ-ಜಾತಿಗಳನ್ನು ಒಳಗೊಂಡಂತೆ ಸಣ್ಣ ಅಥವಾ ಅಂಚಿನಲ್ಲಿರುವ ಜಾತಿಗಳಿಗೆ ಜಾತಿ ಜನಗಣತಿಯು ಪರಿವರ್ತನಾಶೀಲ ಸಾಮರ್ಥ್ಯವನ್ನು ತರುವ ಸಾಧ್ಯತೆ ಸಹ ಇದೆ ಎನ್ನಲಾಗಿದೆ.
ಈ ವರದಿಯ ಇನ್ನೊಂದು ಅಂಶವೆಂದರೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಾತಿಗಳ ಗೋಚರತೆ ಮತ್ತು ಗುರುತಿಸುವಿಕೆ. ಅನೇಕ ಸಣ್ಣ ಜಾತಿಗಳು ಸಂಖ್ಯಾಶಾಸ್ತ್ರೀಯ ವಾಗಿ ಅಗೋಚರವಾಗಿ ಇಂದಿಗೂ ಉಳಿದಿವೆ ಮತ್ತು ನಿರ್ಲಕ್ಷಿಸಲ್ಪಟ್ಟಿವೆ. ಈ ಜಾತಿ ಜನಗಣತಿಯು ಅವರ ಅಸ್ತಿತ್ವವನ್ನು ಅಂಗೀಕರಿಸಲಾಗಿದೆ ಮತ್ತು ಅವರ ಅಗತ್ಯ ಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರೆ ಇದು ಹೆಚ್ಚು ಅಂತರ್ಗತ ಅಭಿವೃದ್ಧಿ ನೀತಿಗಳಿಗೆ ಕಾರಣವಾಗುತ್ತದೆ. ಆದರೆ ಒಂದು ಒತ್ತಕ್ಷರದ ತಪ್ಪು ಹೊಸ ಹೊಸ ಜಾತಿಗಳನ್ನು ಸಮಾಜದಲ್ಲಿ ಹುಟ್ಟುಹಾಕಬಹುದು!
ಮೀಸಲಾತಿ ನೀತಿಗಳ ಪರಿಷರಣೆಗೆ ಈ ವರದಿ ದಾರಿ ಮಾಡಿಕೊಡಬಹುದು. ಹಿಂದುಳಿದವರು ಹೆಚ್ಚು ಅನನುಕೂಲತೆಯನ್ನು ಪಡೆಯಲು ಮೀಸಲಾತಿ ನೀತಿ ಗಳನ್ನು ಪುನರ್ರಚಿಸಬಹುದು. ಇದು ಮುಂದೆ ಮೀಸಲಾತಿಯೊಳಗೆ ಉಪ-ವರ್ಗೀಕರಣಕ್ಕೆ ಕಾರಣವಾಗಬಹುದು. ಕ್ರಮೇಣ ತುಲನಾತ್ಮಕವಾಗಿ ಉತ್ತಮವಾದ ಜಾತಿಗಳಿಗೆ ಮೀಸಲಾತಿ ಮತ್ತು ಇತರೆ ಸರ್ಕಾರಿ ಪ್ರಯೋಜನಗಳು ಮರೀಚಿಕೆಯಾಗಬಹುದು. ಈ ವರದಿ ಅಂಚಿನಲ್ಲಿರುವ ಸಮುದಾಯಗಳನ್ನು ಅವರ ಜನ ಸಂಖ್ಯಾ ಸಾಮರ್ಥ್ಯ ಮತ್ತು ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳ ನಿಖರವಾದ ದತ್ತಾಂಶದೊಂದಿಗೆ ಸಬಲೀಕರಣಗೊಳಿಸುವುದು ಸಾಮಾಜಿಕ ಚಳುವಳಿಗಳಿಗೆ ಉತ್ತೇಜನ ನೀಡಬಹುದಾದರೂ ಮುಂದುವರೆದ ಜಾತಿಗಳ ಕಡುಬಡವರ ಅಭಿವೃದ್ಧಿಯ ಜವಾಬ್ದಾರಿ ಕುರಿತಾಗಿ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡು ವವರು ಯಾರು ಎನ್ನುವುದು ಇನ್ನೊಂದು ಪ್ರಶ್ನೆ. ಈ ವರದಿ ನಿಜವಾಗಿದ್ದರೆ ವಿಭಿನ್ನ ಜಾತಿಗಳ ನಿಖರವಾದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಅರ್ಥ ಮಾಡಿ ಕೊಳ್ಳುವ ಮೂಲಕ, ಸರ್ಕಾರಗಳು ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೊಂದಿಸಬಹುದು. ಆದರೆ ಕೇವಲ ಅಧಿಕಾರಕ್ಕಾಗಿ ಒಂದೊಮ್ಮೆ ಈ ವರದಿಯನ್ನು ಜಾರಿಗೆ ತಂದರೆ ಮುಂದೆ ಆಗುವ ಪರಿಣಾಮಗಳಿಗೆ ಹೊಣೆ ಯಾರು?
ಜಾತಿ ಗಣತಿಯು ಸಮಾನತೆ ಮತ್ತು ಪಾರದರ್ಶಕತೆಯನ್ನು ಭರವಸೆ ನೀಡಿದರೆ, ಇದು ಸವಾಲುಗಳನ್ನು ಸಹ ತರುತ್ತದೆ. ಡೇಟಾ ಸೂಕ್ಷ್ಮತೆ ಒಂದು ದೊಡ್ಡ ಸಮಸ್ಯೆ. ಜಾತಿಯ ದತ್ತಾಂಶವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವುದರಿಂದ ಅಂತರಜಾತಿಯ ಪೈಪೋಟಿ ಮತ್ತು ಸಾಮಾಜಿಕ ಉದ್ವಿಗ್ನತೆಗಳನ್ನು ಪ್ರಚೋದಿಸಬಹುದು. ನಿಜವಾದ ಅಭಿವೃದ್ಧಿಗಿಂತ ಮತಬ್ಯಾಂಕ್ ರಾಜಕಾರಣಕ್ಕಾಗಿ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಬಹುದು. ಸ್ವಯಂ-ಗುರುತಿಸುವಿಕೆ ಅಥವಾ ಆಡಳಿತಾತ್ಮಕ ರೆಕಾರ್ಡಿಂಗ್‌ನಲ್ಲಿನ ಅಸಮಂಜಸತೆಯಿಂದಾಗಿ ಅನೇಕ ಉಪ-ಜಾತಿಗಳನ್ನು ತಪ್ಪಾಗಿ ಪ್ರತಿನಿಧಿಸಬಹುದು ಎನ್ನುವ ವಾದಗಳು ಇವೆ. ಜಾತಿ ಗಣತಿಯು ಕೇವಲ ಅಂಕಿಅಂಶಗಳ ಚಟುವಟಿಕೆಯಲ್ಲ. ಇದು ಭಾರತದ ಸಾಮಾಜಿಕ ಅಸಮಾನತೆಯ ನೈಜತೆಗೆ ಕನ್ನಡಿಯಾಗಿದೆ. ಜಾತಿ ನ್ಯಾಯವಿಲ್ಲದೇ ಪ್ರಜಾಪ್ರಭುತ್ವ ಸಾಧ್ಯವಿಲ್ಲ. ದೊಡ್ಡ ಮತ್ತು ಸಣ್ಣ ಜಾತಿಗಳ ಮೇಲೆ ಈ ವರದಿಯ ಪ್ರಭಾವ ಗಮನಾರ್ಹ ಮತ್ತು ಸಂಕೀರ್ಣವಾಗಿದೆ. ಭಾರತವು ಮುಂದುವರಿ ಯುತ್ತಿರುವಂತೆ, ಜಾತಿ ಪದ್ಧತಿಯಂತಹ ಕೆಟ್ಟ ವ್ಯವಸ್ಥೆಯನ್ನು ಹಿಂದಕ್ಕೆ ಹಾಕಿ ಸಾಮಾಜಿಕ ನ್ಯಾಯದ ಕಡೆಗೆ ದೊಡ್ಡ ಹೆಜ್ಜೆಯಾಗಿ ಇಡಬೇಕು. ಪ್ರಾಮಾಣಿಕ ನೀತಿ ಸುಧಾರಣೆಗಳನ್ನು ಅನುಸರಿಸಿದರೆ ಅದು ಕಷ್ಟವೇನಲ್ಲ. ಜಾತಿ ಇರುವುದು ಜನರ ಮನಸ್ಸಿನಲ್ಲಿ ಮಾತ್ರ.
–ಡಾ.ಡಿ.ಸಿ.ನಂಜುಂಡ
ಲೇಖಕರು
ಮೊ: ೯೦೦೮೧೬೪೫೧೪