ಪಹಲ್ಗಾಮ್ ದಾಳಿ ಬಳಿಕ ಅಲ್ಪಾವಧಿ ವೀಸಾ ಹೊಂದಿದ್ದ ನಾಲ್ವರು ಪಾಕ್ ಪ್ರಜೆಗಳನ್ನು ರಾಜ್ಯದಿಂದ ಗಡಿಪಾರು ಮಾಡಲಾಗಿದೆ. ದೀರ್ಘಾವಧಿ ವೀಸಾ ಹೊಂದಿ ರುವ 91 ಮಂದಿ ಪಾಕ್ ಪ್ರಜೆಗಳು ಇನ್ನೂ ಕರ್ನಾಟಕದಲ್ಲೇ ಇದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ 91 ಮಂದಿ ವಾಸವಾಗಿದ್ದಾರೆ ಎಂದು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಾರ್ಯಾಚರಣೆ ವೇಳೆ ದೃಢಪಟ್ಟಿದೆ.
ಐವರು ಪಾಕಿಸ್ತಾನಿ ಪ್ರಜೆಗಳು ವೈದ್ಯಕೀಯ ವೀಸಾದಡಿ ರಾಜ್ಯದಲ್ಲಿದ್ದಾರೆ. ಇವರಿಗೆ ಏ.29ರವರೆಗೆ ಮಾತ್ರ ದೇಶದಲ್ಲಿರಲು ಕೇಂದ್ರವು ಗಡುವು ವಿಧಿಸಿದೆ. ರಾಜ್ಯದಲ್ಲೇ ಅತಿ ಹೆಚ್ಚು ಪಾಕಿಸ್ತಾನಿ ಪ್ರಜೆಗಳು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಭಟ್ಕಳದಲ್ಲಿ 14 ಹಾಗೂ ಕಾರವಾರದಲ್ಲಿ ಒಬ್ಬರು ಸೇರಿ 15 ಮಂದಿ ವಾಸವಿದ್ದಾರೆ.
ಭಟ್ಕಳದ ನವಾಯತ್ ಸಮುದಾಯದವರು ಪಾಕಿಸ್ತಾನಿಯರನ್ನು ಮದುವೆಯಾದ ಬಳಿಕ ಕೇಂದ್ರ ಸರ್ಕಾರ ದೀರ್ಘಾವಧಿ ವೀಸಾವನ್ನು ನೀಡುತ್ತಿದೆ.
ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆ ಪಾಕ್ ಪ್ರಜೆಗಳು ನೆಲೆಸಿದ್ದಾರೆ. ದಾವಣಗೆರೆಯಲ್ಲಿ ಒಬ್ಬ ಪಾಕಿಸ್ತಾನ ವಿದ್ಯಾರ್ಥಿ ಶಿಕ್ಷಣದ ವೀಸಾ ಮೇಲೆ ಭಾರತಕ್ಕೆ ಬಂದಿದ್ದಾರೆ. ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಬಿಬಿಎಸ್ ಓದುತ್ತಿದ್ದು, ವೀಸಾ ಅವಧಿ ಇನ್ನೂ ಮುಗಿದಿಲ್ಲ.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿದ್ದ 25 ಮಂದಿ ಪಾಕಿಸ್ತಾನಿ ಪ್ರಜೆಗಳನ್ನು ಅಧಿಕೃತವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಂಡಿರುವುದಾಗಿ ಮಾರ್ಚ್ನಲ್ಲಿ ನಡೆದಿದ್ದ ಅಧಿವೇಶನದಲ್ಲಿ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದರು.