ಅಮೆರಿಕ ಸರ್ಕಾರ ಭಾರತಕ್ಕೆ ನೀಡುತ್ತಿದ್ದ ವೀಸಾ ಗಣನೀಯವಾಗಿ ಕಡಿತಗೊಳಿಸಿದ್ದು, ಈಗ ಆಸ್ಟ್ರೇಲಿಯಾದ ಕೆಲವು ವಿಶ್ವವಿದ್ಯಾಲಯಗಳು ಭಾರತೀಯ ವಿದ್ಯಾರ್ಥಿಗಳ ವೀಸಾ ಕಡಿತಗೊಳಿಸಲು ಮುಂದಾಗಿವೆ.
ಆಸ್ಟ್ರೇಲಿಯಾದ ಕೆಲವು ಪ್ರಮುಖ ವಿಶ್ವವಿದ್ಯಾಲಯಗಳು ಭಾರತದ ಆರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿದ್ಯಾರ್ಥಿಗಳ ವೀಸಾ ಅರ್ಜಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಹೆಚ್ಚುತ್ತಿರುವ ವಂಚನೆಯ ಪ್ರಕರಣಗಳು ಹಾಗೂ ಉದ್ದೇಶರಹಿತ ಅರ್ಜಿದಾರರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು ಈ ನಿರ್ಧಾರವನ್ನು ಕೈಗೊಂಡಿದೆ.
ಪಂಜಾಬ್ , ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರದ ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿಗಳನ್ನು ಆಸ್ಟ್ರೇಲಿಯಾದ ವಿಕ್ಟೋರಿಯಾದ ಫೆಡರೇಶನ್ ವಿಶ್ವವಿದ್ಯಾಲಯ, ನ್ಯೂ ಸೌತ್ ವೆಲ್ಸ್ ನ ವೆಸ್ಟರ್ನ್ ಸಿಗ್ನಿ ವಿಶ್ವವಿದ್ಯಾಲಯ, ವಿಕ್ಟೋರಿಯಾ ವಿಶ್ವವಿದ್ಯಾಲಯ, ಎಡಿತ್ ಕೋವನ್ ವಿಶ್ವವಿದ್ಯಾಲಯ, ಟಾರೆನ್ಸ್ ವಿಶ್ವವಿದ್ಯಾಲಯ ಮತ್ತು ಸೌದರ್ನ್ ಕ್ರಾಸ್ ವಿಶ್ವವಿದ್ಯಾಲಯ ಸೇರಿ ಇನ್ನಿತರ ವಿಶ್ವವಿದ್ಯಾಲಯಗಳು ನಿರಾಕರಿಸಲು ಮುಂದಾಗಿವೆ.
ವಿದ್ಯಾರ್ಥಿ ವೀಸಾಗಳ ದುರುಪಯೋಗ ಮತ್ತು ಆಸ್ಟ್ರೇಲಿಯಾ ಅಂತರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ದುರುಪಯೋಗ ಸೇರಿ ಗಂಭೀರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದೆ. ಆಸ್ಟ್ರೇಲಿಯಾದಲ್ಲಿ 1,25, 000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಭಾರತದಿಂದ ಬರುವ ವಿದ್ಯಾರ್ಥಿಗಳ ವೀಸಾ ಅರ್ಜಿಗಳಲ್ಲಿ ಸರಿಸುಮಾರು ಶೇ 24.3ರಷ್ಟು ವಂಚನೆಯ ಅರ್ಜಿಗಳಾಗಿದೆ ಎಂದು ಆಸ್ಟ್ರೇಲಿಯಾ ತಿಳಿಸಿದೆ.
ಕೆಲವು ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯಗಳಿಗಿಂತ ಹೆಚ್ಚಾಗಿ ಇನ್ನಿತರ ಹೊರಗಿನ ವ್ಯವಹಾರಗಳಿಗೆ ಆದ್ಯತೆ ನೀಡುತ್ತಾರೆ. ಭಾರತದ ನಿರ್ದಿಷ್ಟ ರಾಜ್ಯಗಳ ವಿದ್ಯಾರ್ಥಿ ವೀಸಾ ಅರ್ಜಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ವೀಸಾ ಪರಿಶೀಲನೆಯ ಕ್ರಮಗಳನ್ನು ಬಿಗಿಗೊಳಿಸಿದೆ.