Menu

ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಡಾ.ರಾಜ್

ಡಾ.ರಾಜ್ ಕುಮಾರ್ ಎಂಬ ಹೆಸರು ಕೇಳಿದರೆ ಸಾಕು ಮೈಮನ ರೋಮಾಂಚನಗೊಳ್ಳುತ್ತವೆ! ಸಾಧನೆಯ ಶಿಖರವೇರಿ, ಬದುಕಿದ್ದಾಗಲೇ ದಂತಕತೆಯಾಗಿದ್ದ ರಾಜ್‌ರವರ ಬಹುಮುಖ ಪ್ರತಿಭೆಗೆ ಸಾಟಿ ಇಲ್ಲ.

ಕನ್ನಡ ಚಿತ್ರರಂಗ ಎಂದರೆ ರಾಜ್, ರಾಜ್ ಎಂದರೆ ಕನ್ನಡ ಚಿತ್ರರಂಗ ಎನ್ನುವಂತಾಗಿದೆ. ಅವರು ಕನ್ನಡದ ಚಿತ್ರಗಳನ್ನು ಬಿಟ್ಟು ಬೇರೆ ಯಾವ ಭಾಷೆಯಲ್ಲೂ ಕೂಡ ನಟಿಸದೆ, ತಮ್ಮ ಕನ್ನಡಾಭಿಮಾನವನ್ನು ಅಂತರಂಗದಲ್ಲಿ ಪ್ರತಿಷ್ಠಾಪಿಸಿಕೊಂಡು ಬಿಟ್ಟಿದ್ದರು. ಇದರಿಂದಾಗಿ ಎಲ್ಲರಿಗೂ ಮಾದರಿಯಾದರು. ತನು ಕನ್ನಡ, ಮನ ಕನ್ನಡ- ಎನ್ನುವಂತೆ ಅವರ ಬದುಕಿನುದ್ದಕ್ಕೂ ಕೂಡ ಕನ್ನಡದ ಬಗ್ಗೆ, ಕನ್ನಡದ ಹೋರಾಟದ ಬಗ್ಗೆ, ನಾಡು- ನುಡಿ, ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಇಟ್ಟು ಕೊಂಡಿದ್ದವರು.

ಅವರು ನಟಿಸಿರುವ ಎಲ್ಲಾ ಚಿತ್ರಗಳನ್ನು ನೋಡಿದರೆ, ಗೀತೆಗಳನ್ನು ಕೇಳಿದರೆ ರಾಜ್ ಕನ್ನಡ ಎನ್ನುವುದು ಇz ಇದೆ! ಅವರ ಮಾತಿನ ಸೊಗಸು, ಹಾಡಿನ ಇಂಪು, ನಟನೆಯ ಮೇರು, ಸಹನೆಯ ವ್ಯಕ್ತಿತ್ವ, ಎಲ್ಲರೊಂದಿಗೆ ಒಟ್ಟಿಗೆ ಬೆರೆಯುವ ಮನಸ್ಸು, ಎಲ್ಲವೂ ಇದ್ದುದ್ದರಿಂದಲೇ ಅವರು ಕನ್ನಡ ಚಿತ್ರರಂಗದಲ್ಲಿ ವಿಶಾಲವಾದ ಆಲದ ಮರದಂತೆ ನಮ್ಮ ಮುಂದೆ ನಿಲ್ಲುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ ಅಣ್ಣಾವ್ರು ಎಂದೇ ಪ್ರಖ್ಯಾತರಾದವರು. ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದಲ್ಲಿ ತಮ್ಮ ನಟನೆ, ಗಾಯನ, ಚಿತ್ರ ನಿರ್ಮಾಣದ ಮೂಲಕ ವರನಟರಾಗಿ, ನಟಸಾರ್ವಭೌಮನಾಗಿ, ಜನರಿಂದ, ವಿವಿಧ ಸಂಘ-ಸಂಸ್ಥೆಗಳಿಂದ, ಸರ್ಕಾರದಿಂದ, ಹಿರಿಯರಿಂದ, ಅನೇಕ ಪ್ರಶಸ್ತಿಗಳನ್ನು ತಮ್ಮ ಕೊರಳಿಗೆ ಹಾಕಿಕೊಂಡು ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದುಕೊಂಡು, ಹಂಪಿ ವಿಶ್ವವಿದ್ಯಾಲಯದಲ್ಲಿ ನಾಡೋಜ ಪದವಿಯನ್ನು ಪಡೆದುಕೊಂಡು, ತಾವು ನಟಿಸಿದ ಪ್ರತಿಯೊಂದು ಚಿತ್ರದಲ್ಲೂ ಕೂಡ ಒಂದಲ್ಲ ಒಂದು ರೀತಿಯ ಸಂದೇಶ ಸಾರಿ, ಲಕ್ಷಾಂತರ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಯೂರಿ ನಿಂತಿರುವ ಡಾ ರಾಜ್ ಎಂದರೆ ವಿಸ್ಮಯ ಪ್ರಪಂಚ. ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಯ ಮಗನಾಗಿ ಚಾಮರಾಜನಗರ ಜಿಲ್ಲೆಯ ಗಡಿ ಭಾಗದಲ್ಲಿರುವ ದೊಡ್ಡ ಗಾಜನೂರು ಗ್ರಾಮದಲ್ಲಿ ಮುತ್ತುರಾಜನಾಗಿ ಜನಿಸಿದರು.

ನಿರ್ದೇಶಕ ಎಚ್‌ಎಲ್‌ಎನ್ ಸಿಂಹ ಅವರಿಂದ ರಾಜ್‌ಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು. ಇವರ ಪ್ರತಿಯೊಂದು ಚಿತ್ರಗಳ ಬಗ್ಗೆಯೂ ಕೂಡ ವಿಮರ್ಶೆ ಮಾಡುತ್ತಾ ಹೋದರೆ ಪುಟಗಳು ಸಾಲದು. ಡಾ ರಾಜಕುಮಾರ್ ಅವರು ನಟಿಸಿರುವ ಪ್ರತಿಯೊಂದು ಚಿತ್ರಗಳು ಕೂಡ ಒಂದೊಂದು ಮುತ್ತು. ಒಂದು ರೀತಿಯಲ್ಲಿ ವಿಶ್ವವಿದ್ಯಾಲಯವಿದ್ದಂತೆ! ತಮ್ಮ ಚಿತ್ರಗಳಿಗೆ ತಾವೇ ಹಾಡುವುದರ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಪ್ರಸಿದ್ಧಿಯಾದರು. ಕನ್ನಡ ಚಿತ್ರರಂಗದಲ್ಲಿ ಅವರು ಬಿಟ್ಟು ಹೋದ ಹೆಜ್ಜೆ ಗುರುತುಗಳು ಎಂದೆಂದಿಗೂ ಅಮರ.

ಡಾ ರಾಜ್‌ರವರಂತಹ ಅಪರೂಪದ ನಟರು ಕನ್ನಡ ನಾಡಿನಲ್ಲಿ ಮತ್ತೆ ಹುಟ್ಟಿ ಬರಬೇಕು. ಕನ್ನಡ ಇರುವವರೆಗೆ ಡಾ.ರಾಜ್ ನಮ್ಮ ಮನೆ- ಮನದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ.

-ಕಾಳಿಹುಂಡಿ ಶಿವಕುಮಾರ್, ಮೈಸೂರು
೯೮೪೪೮೮೩೫೮೧

Related Posts

Leave a Reply

Your email address will not be published. Required fields are marked *