Menu

ರಾಜ್ಯದಲ್ಲಿ ಅಕ್ರಮ ಶಾಲೆಗಳಿಗೆ ಸಕ್ರಮ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಖಾಸಗಿ ಶಾಲೆಗಳನ್ನು ಸಕ್ರಮಗೊಳಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ. 2023-24 ಮತ್ತು ಅದಕ್ಕೂ ಹಿಂದಿನ ವರ್ಷಗಳಲ್ಲಿ ಮಾನ್ಯತೆಯೇ ಇಲ್ಲದೆ ಅಥವಾ ಮಾನ್ಯತೆ ನವೀಕರಣ ಮಾಡಿಕೊಳ್ಳದೆ ನಡೆಯುತ್ತಿರುವ ಖಾಸಗಿ ಶಾಲೆಗಳು ಬಾಕಿ ಇರುವ ಹಿಂದಿನ ಎಲ್ಲ ವರ್ಷಗಳಿಗೆ ಮತ್ತೆ ಅರ್ಜಿ ಸಲ್ಲಿಸಿ ಮಾನ್ಯತೆ/ನವೀಕರಣ ಪಡೆಯಲು ಅವಕಾಶ ನೀಡಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಾಲಮಿತಿಯಲ್ಲಿ ಹೊಸ ಮಾನ್ಯತೆ, ಮಾನ್ಯತೆ ನವೀಕರಣಕ್ಕೆ ಆನ್‌ಲೈನ್‌ ತಂತ್ರಾಂಶದ ಮೂಲಕ ಅಕ್ರಮ ಶಾಲೆಗಳಿಗೆ ಅವಕಾಶ ನೀಡಿದೆ. ಉದಾಹರಣೆಗೆ 2021-22ನೇ ಸಾಲಿನಿಂದ ಮಾನ್ಯತೆಯನ್ನೇ ಪಡೆಯದಿರುವ ಖಾಸಗಿ ಶಾಲೆಯು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಆ ವರ್ಷಕ್ಕೆ ಮಾನ್ಯತೆ ದೊರೆಯುತ್ತದೆ. ತಕ್ಷಣ ಮುಂದಿನ ಐದೇ ದಿನದಲ್ಲಿ 2022-23ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಅದೇ ಶಾಲೆ ಅರ್ಜಿ ಸಲ್ಲಿಸಬಹುದು. ಹೀಗೆ ಬಾಕಿ ಇರುವ ವರ್ಷಗಳಿಗೆಲ್ಲ ಅಕ್ರಮವಾಗಿ ನಡೆಯುತ್ತಿರುವ ಶಾಲೆಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸಕ್ರಮಗೊಳಿಸಬಹುದು.

2024-25ನೇ ಸಾಲಿಗೆ ಹಿಂದಿನ ಸಾಲುಗಳಿಗೆ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣ ಇಲ್ಲದೆ ನಡೆಯುತ್ತಿರುವ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಅಂತಿಮ ಎಚ್ಚರಿಕೆಯೊಂದಿಗೆ ಈ ಅವಕಾಶ ಕಲ್ಪಿಸಲಾಗಿದೆ. ಆದರೂ ಮಾನ್ಯತೆ ಪಡೆಯಲು ವಿಫಲವಾಗುವ ಶಾಲೆಗಳ ನೋಂದಣಿ ರದ್ದುಪಡಿಸಲು ಡಿಡಿಪಿಐಗಳಿಗೆ ಸೂಚಿಸಿದೆ.

ಏ.28ರಿಂದ ಮೇ 13ರವರೆಗೆ ಖಾಸಗಿ ಶಾಲೆಗಳು ಬಾಕಿ ಇರುವ ಶೈಕ್ಷಣಿಕ ಸಾಲುಗಳಿಗೆ ಹೊಸ ಮಾನ್ಯತೆ ಪಡೆಯಲು ಅಥವಾ ಮಾನ್ಯತೆ ನವೀಕರಣಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆಯಾ ಜಿಲ್ಲಾ ಉಪನಿರ್ದೇಶರ ಕಚೇರಿಯಲ್ಲಿ ಅರ್ಜಿ ಬಂದ ದಿನದಿಂದ 5 ದಿನಗಳಲ್ಲಿ ಪರಿಶೀಲಿಸಿ ಅಗತ್ಯವಿದ್ದರೆ ಆಕ್ಷೇಪಣೆ ಸಹಿತ ಶಾಲಾ ಆಡಳಿತ ಮಂಡಳಿಗೆ ಅರ್ಜಿ ಹಿಂದಿರುಗಿಸಬಹುದು. ಈ ಪ್ರಕ್ರಿಯೆಗೆ ಮೇ 3ರಿಂದ 31ರವರೆಗೆ ಕಾಲಾವಕಾಶವಿರುತ್ತದೆ. ನಂತರ ಏಳು ದಿನಗಳಲ್ಲಿ ಆಡಳಿತ ಮಂಡಳಿಗಳು ಡಿಡಿಪಿಐ ಕಚೇರಿಯ ಆಕ್ಷೇಪಣೆಗಳಿಗೆ ಅಗತ್ಯ ಮಾಹಿತಿ/ದಾಖಲೆ ಒದಗಿಸಿ ಮತ್ತೆ ಅರ್ಜಿ ಕಳುಹಿಸಬಹುದು.

ಈ ಪ್ರಕ್ರಿಯೆಗೆ ಮೇ 5ರಿಂದ ಜೂನ್‌ 6ರವರೆಗೆ ಅವಕಾಶ ಇರುತ್ತದೆ. ಆಕ್ಷೇಪಣೆ ಅರ್ಜಿಗಳನ್ನು ಇತ್ಯರ್ಥಪಡಿಸಿ ಅರ್ಹ ಶಾಲೆಗಳಿಗೆ ಮಾನ್ಯತೆ ನೀಡುವ, ಮಾನ್ಯತೆ ನವೀಕರಣ ಪ್ರಮಾಣ ಪತ್ರ ನೀಡುವ ಹಾಗೂ ಅರ್ಜಿ ತಿರಸ್ಕೃತವಾಗಿದ್ದಲ್ಲಿ ತಿರಸ್ಕೃತ ಆದೇಶ ನೀಡುವ ಪ್ರಕ್ರಿಯೆ ಐದು ದಿನಗಳಲ್ಲಿ ನಡೆಯಬೇಕು. ಈ ಪ್ರಕ್ರಿಯೆ ಮೇ 6ರಿಂದ 17ರೊಳಗೆ ಪೂರ್ಣಗೊಳ್ಳಬೇಕೆಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಲ್ಲಾ ಜಿಲ್ಲಾ ಡಿಡಿಪಿಐಗಳಿಗೆ ಸೂಚನೆ ನೀಡಿದ್ದಾರೆ. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ giaprimarycpi@gmail.com ಗೆ ಮಾಹಿತಿ ಸಹಿತ ವಿವರ ಸಲ್ಲಿಸಬಹುದಾಗಿದೆ.

Related Posts

Leave a Reply

Your email address will not be published. Required fields are marked *