ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂ.1 ತಂಡ, ರನ್ ಗಳಿಕೆಯಲ್ಲಿ ಕೊಹ್ಲಿ ನಂ.1 ಮತ್ತು ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜೋಸ್ ಹಾಜ್ಲೆವುಡ್ ನಂ.1 ಸ್ಥಾನಕ್ಕೇರಿದ್ದಾರೆ. ಈ ಮೂಲಕ ಎಲ್ಲಾ ವಿಭಾಗಗಳಲ್ಲೂ ಆಧಿಪತ್ಯ ಸ್ಥಾಪಿಸಿ ಪ್ರಶಸ್ತಿಯ ಭರವಸೆ ಮೂಡಿಸಿದೆ.
ಭಾನುವಾರ ಡೆಲ್ಲಿಯಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅದರದ್ದೇ ನೆಲದಲ್ಲಿ 6 ವಿಕೆಟ್ ಗಳಿಂದ ಸೋಲಿಸಿದ ಆರ್ ಸಿಬಿ 14 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಲ್ಲದೇ ಪ್ಲೇಆಫ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲು ಕೇವಲ ಒಂದು ಗೆಲುವು ಮಾತ್ರ ಬೇಕಾಗಿದೆ.
ಆರ್ ಸಿಬಿ ತಂಡದ ಆಧಾರಸ್ತಂಭವಾಗಿರುವ ವಿರಾಟ್ ಕೊಹ್ಲಿ 6 ಅರ್ಧಶತಕ ಸಿಡಿಸಿ 443 ರನ್ ಗಳಿಸಿ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೇ 3 ಬಾರಿ ನಾಟೌಟ್ ಆಗಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್ 427 ರನ್ ಗಳಿಸಿದ್ದು, ಕೇವಲ 6 ರನ್ ನಿಂದ ಹಿಂದೆ ಉಳಿಯುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ 417 ರನ್ ನೊಂದಿಗೆ ಮೂರನೇ ಸ್ಥಾನ ಹಾಗೂ ಎಲ್ ಎಸ್ ಜಿಯ ನಿಕೊಲಸ್ ಪೂರನ್ 404 ರನ್ ನೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ 364 ರನ್ ನೊಂದಿಗೆ 6ನೇ ಸ್ಥಾನ ಗಳಿಸಿದ್ದಾರೆ.
ಮಧ್ಯಮ ವೇಗಿ ಜೋಸ್ ಹಾಜ್ಲೆವುಡ್ 18 ವಿಕೆಟ್ ಸಂಪಾದಿಸುವ ಮೂಲಕ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ. 16 ವಿಕೆಟ್ ಪಡೆದ ಗುಜರಾತ್ ಟೈಟಾನ್ಸ್ ತಂಡದಲ್ಲಿರುವ ಕನ್ನಡಿಗ ಪ್ರಸಿದ್ಧ ಕೃಷ್ಣ ಎರಡನೇ ಸ್ಥಾನದಲ್ಲಿದ್ದರೆ, ಸಿಎಸ್ ಕೆ ತಂಡದ ಸ್ಪಿನ್ನರ್ ನೂರ್ ಅಹ್ಮದ್ 14 ವಿಕೆಟ್ ನೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ.
ಹಾಜ್ಲೆವುಡ್ ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡುತ್ತಿದ್ದು, ಟೂರ್ನಿಯಲ್ಲಿ 100 ಡಾಟ್ ಬಾಲ್ (ರನ್ ಕೊಡದ ಎಸೆತಗಳ ಸಂಖ್ಯೆ) ಎಸೆದ ಮೊದಲಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಮೊದಲ ಓವರ್ ನಲ್ಲಿ ವಿಕೆಟ್ ಪಡೆಯುತ್ತಿರುವ ಬೌಲರ್ ಎಂಬ ಮತ್ತೊಂದು ಗೌರವಕ್ಕೆ ಹಾಜ್ಲೆವುಡ್ ಪಾತ್ರರಾಗಿದ್ದಾರೆ. ಅಲ್ಲದೇ ಪವರ್ ಪ್ಲೇ ಮತ್ತು ಡೆತ್ ಓವರ್ ಗಳಲ್ಲಿ ಪರಿಣಾಮ ಕಾರಿ ದಾಳಿ ನಡೆಸಿ ಆರ್ ಸಿಬಿ ಗೆಲುವಿಗೆ ಮಹತ್ವದ ಪಾತ್ರ ವಹಿಸಿದ್ದಾರೆ.