ನವದೆಹಲಿ: ದಾಖಲೆಗಳ ವೀರ ವಿರಾಟ್ ಕೊಹ್ಲಿ ಮತ್ತು ಆಲ್ ರೌಂಡರ್ ಕೃನಾಲ್ ಪಾಂಡ್ಯ ಅಮೋಘ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿತು.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಗೆ 163 ರನ್ ಸಂಪಾದಿಸಿತು. ಬೌಲರ್ ಗಳಿಗೆ ನೆರವಾಗುತ್ತಿದ್ದ ಪಿಚ್ ನಲ್ಲಿ ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಆರ್ ಸಿಬಿ 18.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಆರ್ ಸಿಬಿ 10 ಪಂದ್ಯಗಳಿಂದ 7 ಜಯ ಹಾಗೂ 3 ಸೋಲಿನೊಂದಿಗೆ 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ ಹಾಕಿದ್ದೂ ಅಲ್ಲದೇ ಪ್ಲೇಆಫ್ ಗೆ ಅತೀ ಸಮೀಪ ತಲುಪಿತು. ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳಲ್ಲಿ 6 ಜಯ ಹಾಗೂ 3 ಸೋಲಿನೊಂದಿಗೆ 12 ಅಂಕದೊಂದಿಗೆ 4ನೇ ಸ್ಥಾನದಲ್ಲಿ ಉಳಿದುಕೊಂಡಿತು.
ಆರ್ ಸಿಬಿ ಒಂದು ಹಂತದಲ್ಲಿ ಆರ್ ಸಿಬಿ ಸ್ಪಿನ್ನರ್ ಅಕ್ಸರ್ ಪಟೇಲ್ ದಾಳಿಗೆ ತತ್ತರಿಸಿ 26 ರನ್ ಗೆ 3 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿ ತಲುಪಿತು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ 119 ರನ್ ಜೊತೆಯಾಟ ನಿಭಾಯಿಸಿ ರೋಚಕ ಗೆಲುವು ತಂದುಕೊಟ್ಟರು.
ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿ ಸೇರಿದ 51 ರನ್ ಬಾರಿಸಿ ಔಟಾದರೆ, ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೊಂದಿಗೆ ಅಜೇಯ 73 ರನ್ ಸಿಡಿಸಿದರು. ಕೊನೆಯಲ್ಲಿ ಟಿಮ್ ಡೇವಿಡ್ 5 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ ಗೆಲುವಿನ ಔಪಚಾರಿಕತೆ ಪೂರೈಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭುವನೇಶ್ವರ್ ಕುಮಾರ್ ದಾಖಲಿಗೆ ತತ್ತರಿ ಸಾಧಾರಣ ಮೊತ್ತಕ್ಕೆ ಕುಸಿಯಿತು. ಡೆಲ್ಲಿ ಪರ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ 39 ಎಸೆತಗಳಲ್ಲಿ 3 ಬೌಂಡರಿ ಸೇರಿದ 41 ರನ್ ಬಾರಿಸಿ ಭುವನೇಶ್ವರ್ ಗೆ ವಿಕೆಟ್ ಒಪ್ಪಿಸಿದರು. ಟ್ರಿಸ್ಟನ್ ಸ್ಟಬ್ಸ್ 18 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 34 ರನ್ ಬಾರಿಸಿ ತಂಡದ ಮೊತ್ತ 150ರ ಗಡಿ ದಾಟಿಸಿದರು.
ಉಳಿದಂತೆ ಅಭಿಷೇಕ್ ಪೂರಲ್ (28), ಫಾಫ್ ಡು ಪ್ಲೆಸಿಸ್ (22), ನಾಯಕ ಅಕ್ಸರ್ ಪಟೇಲ್ (15), ವಿಪ್ರಾಜ್ ನಿಗಮ್ (12) ಹೋರಾಟ ನಡೆಸಿದರು. ಆರ್ ಸಿಬಿ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಜೋಸ್ ಹಾಜ್ಲೆವುಡ್ 2 ವಿಕೆಟ್ ಗಳಿಸಿದರು.