ಮೊಬೈಲ್ ನಮ್ಮ ಕೈಗೆ ಸಿಕ್ಕಿದುದೇ ತಡ ಜಗತ್ತೆಲ್ಲ ಒಂದಾಯಿತು. ನಮ್ಮವರೆಲ್ಲ ಹತ್ತಿರವಾದರು. ಇದು ನಮ್ಮ ಬದುಕನ್ನು ಇನ್ನಷ್ಟು ಸುಖದತ್ತ ಸಾಗುವಂತೆ ಮಾಡಿತೆಂದು ಭಾವಿಸಿದವರೇ ಹೆಚ್ಚು. ಅದಕ್ಕೆ ತಕ್ಕಂತಹ ಪ್ರಚಾರವೂ ದೊರೆಯಿತು. ಆದರೆ ಆಗಿದ್ದೇನು? ಮನೆಮಂದಿಯೊಂದಿಗೆ, ಅಕ್ಕಪಕ್ಕದ ಮನೆಯವರೊಂದಿಗೆ ಮುಖಾಮುಖಿ ಭೇಟಿಯನ್ನೂ ನಾಶ ಮಾಡಿತೆಂದರೆ ತಪ್ಪಾಗಲಾರದು.
‘ವಿಜ್ಞಾನ ಮತ್ತು ನಾಗರಿಕತೆಯ ಥಳಕು ಬಳುಕುಗಳು ಕಣ್ಣು ಕೋರೈಸುವಂತಿದ್ದರೂ ಸಹ ನಾನು ಸ್ಪಷ್ಟವಾಗಿ ಹೇಳುತ್ತೇನೆ -ಅದು ವ್ಯರ್ಥವೆಂದು. ಅಧ್ಯಾತ್ಮವನ್ನು ತೊರೆಯಬೇಡಿರಿ. ಅದೊಂದೇ ಉಳಿಯುವುದು. ಇತರ ವಿಚಾರಗಳು ಬೇಡವೆಂದಲ್ಲ. ರಾಜಕೀಯ, ಸಾಮಾಜಿಕ, ಆರ್ಥಿಕ ವಿಚಾರಗಳು ಬೇಡವೆಂದು ಈ ಮಾತಿನ ಅರ್ಥವಲ್ಲ. ಪ್ರಥಮ ಸ್ಥಾನ ಅವುಗಳಿಗಿಲ್ಲ. ಅವು ನಮ್ಮ ಜೀವನದ ಶ್ರದ್ಧಾಕೇಂದ್ರಗಳಲ್ಲ. ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೂ ಕುಬೇರನ ಭಂಡಾರ ದಿಂದಲೇ ಹಣ ಸುರಿದರೂ, ಯಾವ ಸಾಮಾಜಿಕ ಸುಧಾರಣೆಯನ್ನೇ ಕೈಗೊಂಡರೂ, ಎಂತಹ ರಾಜಕೀಯ ಕ್ರಾಂತಿಯೇ ನಡೆದರೂ ಧರ್ಮವಿಲ್ಲದೆ ಭಾರತ ಉಳಿಯದು, ಪ್ರಕಾಶಿಸದು’ -ಇದು ಸ್ವಾಮಿ ವಿವೇಕಾನಂದರ ದಿವ್ಯ ಸಂದೇಶದ ನುಡಿ.
ಈ ಸಂದೇಶ ಇಂದಿನ ಜನರನ್ನು ಕುರಿತೇ ಹೇಳಿದಂತಿದೆ. ಆಧುನಿಕತೆಯ ವ್ಯಾಮೋಹ ನಮ್ಮವರಲ್ಲಿ ಅತಿಯಾಗಿದೆ. ನಮ್ಮ ಜೀವನ ಪದ್ಧತಿಯು ಪಾಶ್ಚಿಮಾತ್ಯ ಶೈಲಿಯಲ್ಲೇ ಸಾಗುತ್ತಿದೆ. ಕೇವಲ ಹಣ ಸಂಪಾದನೆಯ ಮಾರ್ಗವೇ ಎಲ್ಲರ ಜೀವನದ ಮುಖ್ಯ ಗುರಿಯಾಗಿದೆ. ದುಡಿಯುವವನಿಗೆ ಕೈ ತುಂಬಾ ಕೆಲಸಗಳಿವೆ. ದುಡಿದಾತನಿಗೆ ಕೈ ತುಂಬಾ ಸಂಪಾದನೆಯಿದೆ. ಇದರ ಫಲವಾಗಿ ನಾವೆಲ್ಲ ಬಯಸುತ್ತಿರುವ ಸುಖ ಸಾಧನಗಳು ನಮ್ಮದಾಗಿವೆ. ಇದರ ದುಷ್ಪರಿಣಾಮ ನಮ್ಮ ಬದುಕಿನ ಮೇಲಾಗುತ್ತಿದೆ. ಶಾಂತಿಯುತ ಬದುಕು, ಕೌಟುಂಬಿಕ ಜೀವನ, ಧಾರ್ಮಿಕ ಪ್ರಜ್ಞೆ ಕುಸಿಯಲು ಅವೆಲ್ಲವೂ ಕಾಣಿಕೆ ನೀಡಿವೆ ಎಂಬಂತೆ ಭಾಸವಾಗುತ್ತಿದೆ.
ಪ್ರಪಂಚವನ್ನೇ ಅರಿಯಲು ಅನುಕೂಲವಾಗಿರುವ ದೂರದರ್ಶನ ನಮ್ಮ ಕಣ್ಣ ಮುಂದೆ ಕಾಲಿಟ್ಟಾಗ ವಿಸ್ಮಯಗೊಂಡೆವು. ಕ್ಷಣ ಮಾತ್ರದಲ್ಲಿ ಜಗತ್ತಿನ ಎಲ್ಲಾ ಘಟನೆಗಳು ತಿಳಿದೇ ಬಿಡುತ್ತವೆ ಎಂದು ಸಂತಸಗೊಂಡೆವು. ಇದು ಸತ್ಯವೂ ಹೌದು. ಆದರೆ ವ್ಯಾಪಾರಿ ಬುದ್ಧಿಯ ಜನರು ಅದರ ಪೂರ್ಣ ಸದುಪಯೋಗ ಪಡಿಸಿಕೊಂಡರು. ಅದೊಂದು ಉದ್ದಿಮೆಯಾಗಿ ಬೆಳೆಯಿತು. ಅದರಲ್ಲೂ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳು ನಮ್ಮ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಂತಿವೆ.
ನಮ್ಮ ಮಕ್ಕಳು ಅವುಗಳಲ್ಲಿ ಬರುತ್ತಿರುವ ಜಾಹೀರಾತುಗಳು, ಪ್ರಸಾರವಾಗುತ್ತಿರುವ ಆಧುನಿಕ ಶೈಲಿಯ ಜೀವನಕ್ರಮಗಳು, ವಿವಿಧ ಬಗೆಯ ಪೋಷಾಕುಗಳು, ಕಾಲ್ಪನಿಕ ಸಾಂಸಾರಿಕ ಧಾರಾವಾಹಿಗಳು, ಕೌಟುಂಬಿಕ ವಿಘಟನೆಗಳು, ಇವುಗಳೇ ನಮ್ಮ ಮನದಲ್ಲಿ ತುಂಬಿ ಹೋಗಿವೆ. ನಮ್ಮ ಅಜ್ಜಿಯರ ಕಥೆಗಳು, ಭಜನೆ, ಜನಪದ, ಜೋಗುಳದ ಹಾಡುಗಳು, ಪೂಜೆ-ಪುನಸ್ಕಾರಗಳು, ಕೌಟುಂಬಿಕ ಮಾತುಕತೆಗಳು, ಹಳ್ಳಿಯ ಆಟಗಳು, ನೆರೆಹೊರೆಯವರ ಒಡನಾಟ ಇವೆಲ್ಲವೂ ಮಣ್ಣುಪಾಲಾಗಿವೆ. ನಮ್ಮ ಹಿರಿಯರ ಆದರ್ಶಗಳು, ಅನುಭವಗಳು ಮೂಢನಂಬಿಕೆಗಳೆಂದು ತಿಳಿದು, ಅವೆಲ್ಲವೂ ಬದುಕಿಗೆ ಮಾರಕವೆಂಬ ಭಾವನೆ ನಮಗೆ ಬಂದಿದೆ. ಮಕ್ಕಳು ಹಿರಿಯರ ಮಾತನ್ನು ಕೇಳದೆ ಟಿ.ವಿ.ಯಲ್ಲಿ ಬಂದಿರುವುದೇ ಸತ್ಯವೆನ್ನುವ ಹಂತಕ್ಕೆ ತಲುಪಿರುವುದು ವಿಪರ್ಯಾಸ !
ಮೊಬೈಲ್ ನಮ್ಮ ಕೈಗೆ ಸಿಕ್ಕಿದುದೇ ತಡ ಜಗತ್ತೆಲ್ಲ ಒಂದಾಯಿತು. ನಮ್ಮವರೆಲ್ಲ ಹತ್ತಿರವಾದರು. ಇದು ನಮ್ಮ ಬದುಕನ್ನು ಇನ್ನಷ್ಟು ಸುಖದತ್ತ ಸಾಗುವಂತೆ ಮಾಡಿತೆಂದು ಭಾವಿಸಿದವರೇ ಹೆಚ್ಚು. ಅದಕ್ಕೆ ತಕ್ಕಂತಹ ಪ್ರಚಾರವೂ ದೊರೆಯಿತು. ಆದರೆ ಆಗಿzನು? ಮನೆಮಂದಿಯೊಂದಿಗೆ, ಅಕ್ಕಪಕ್ಕದ ಮನೆಯವರೊಂದಿಗೆ ಮುಖಾಮುಖಿ ಭೇಟಿಯನ್ನೂ ನಾಶ ಮಾಡಿತೆಂದರೆ ತಪ್ಪಾಗಲಾರದು. ಅದರ ಮೂಲಕ ಇನ್ನಿಲ್ಲದಂತಹ ಸೌಲಭ್ಯಗಳ ಕೊಡುಗೆಯೂ ಹರಿಯಿತು. ಅದುವೇ ಒಂದು ಸುಂದರ ಪುಟ್ಟ ಪ್ರಪಂಚವಾಯಿತು. ಮೊಬೈಲೊಂದು ನಮ್ಮ ಕೈಯಲ್ಲಿದ್ದರೆ ಸಾಕು ಎಲ್ಲವೂ ಇದ್ದಂತೆ. ನಾವೇನು ಆಗಬಾರದೆಂದು ಭಾವಿಸುತ್ತೇವೋ, ಅವೆಲ್ಲವೂ ಅದರ ಮೂಲಕವೇ ಆಗುತ್ತಿದೆ.
ಪ್ರಸ್ತುತ ಸಮಾಜದ ಹದಿಹರೆಯದ ಮಕ್ಕಳು, ಯುವಕ-ಯುವತಿಯರು ಈ ಮೂಲಕ ಇನ್ನಿಲ್ಲದಂತೆ ಶೋಷಣೆಗೊಳಗಾಗುತ್ತಿದ್ದಾರೆಂದರೆ ತಪ್ಪಾಗದು. ಈ ಮೇಲಿನ ಘಟನೆಗಳು ನಮ್ಮ ಬದುಕಿಗೆ ಮಾರಕಗಳಾಗಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಭಾರತೀಯರ ಜೀವನಕ್ರಮದ ಮೇಲೆ ಇಷ್ಟೊಂದು ಅಗಾಧ ದಾಳಿ ನಡೆದೀತೆಂದು ಯಾರೂ ಊಹಿಸಿಯೂ ಇರಲಿಲ್ಲ. ಅಧ್ಯಾತ್ಮಿಕ ಚಿಂತನೆಗಳು ಕೇವಲ ತೋರಿಕೆಗಳಾಗಿವೆ! ನಿಜ. ಧ್ಯಾನ, ಪ್ರಾರ್ಥನೆಗಳು ಕೇವಲ ಸಾಂಕೇತಿಕ ಆಚರಣೆಗೆ ಮಾತ್ರ. ಮಾನಸಿಕ ಸ್ಥೈರ್ಯ, ಆತ್ಮಶಕ್ತಿ ನೀಡುತ್ತಿದ್ದ ಪೂಜೆ-ಪುನಸ್ಕಾರಗಳಲ್ಲಿ ಭಾಗವಹಿಸುವುದಕ್ಕೂ ಸಮಯವಿಲ್ಲದಂತಾಗಿದೆ. ಅವುಗಳ ಮೂಲ ಭೂತ ಆಶಯಗಳು ನಾಶವಾಗಿವೆ. ನಮ್ಮ ಮಕ್ಕಳಿಗೆ ಟಿ.ವಿ, ಮೊಬೈಲ್‌ಗಳೇ ಆದರ್ಶವಾದರೆ, ಪುರಾಣ ಪುರುಷರ ಕಥೆಗಳೆಲ್ಲಿ ಆದರ್ಶವಾದೀತು? ಅವರ ಆದರ್ಶಗಳೂ ಕೂಡ ಮೂಢನಂಬಿಕೆಯ ಮೂಟೆಗಳೆಂದು ತಿಳಿಯುವತ್ತ ಸಾಗುತ್ತಿವೆ ನಮ್ಮ ಮಕ್ಕಳು. ಮುಂದಿನ ನವ ಜನಾಂಗ ಹೇಗಿರಬಹುದು? ಉತ್ತರ ನಮ್ಮ ಕಲ್ಪನೆಗೂ ಸಹ ನಿಲುಕದು.
-ಟಿ. ನರೇಂದ್ರಬಾಬು
ಲೇಖಕರು, ತುಮಕೂರು.
ಮೊ.ಸಂ : ೯೫೩೮೧೮೪೮೦೧