Menu

ಕಾಂಗ್ರೆಸ್ಸಿನವರು ಹೊಣೆಯರಿತು ಮಾತನಾಡಲಿ: ವಿಜಯೇಂದ್ರ

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು, ಪ್ರಿಯಾಂಕ್ ಖರ್ಗೆ ಅವರು ಹೊಣೆಯರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ  ಹೇಳಿದ್ದಾರೆ.

ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಬೆಂಗಳೂರಿನ ಮತ್ತೀಕೆರೆಯ  ಭರತ್ ಭೂಷಣ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ನೀವು ಕೇಂದ್ರದ ಬೇಹುಗಾರಿಕಾ ವೈಫಲ್ಯಗಳ ಬಗ್ಗೆ ಮಾತನಾಡುತ್ತೀರಿ. ಮಾನ್ಯ ಸಿದ್ದರಾಮಯ್ಯನವರೇ, ನೀವು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಪ್ರಶ್ನೆ ಮಾಡಬೇಕಿದೆ. ಕಾಂಗ್ರೆಸ್ಸಿನವರು ಸ್ವಾತಂತ್ರ್ಯ ಬಂದ ಬಳಿಕ ಈ ದೇಶವನ್ನು 60 ವರ್ಷ ಆಡಳಿತ ನಡೆಸಿದ್ದಾರೆ. ಭಯೋತ್ಪಾದನೆಯನ್ನು ಈ ದೇಶದಿಂದ ಕಿತ್ತು ಹಾಕಲು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಸಾಧ್ಯವಾಗಿಲ್ಲ ಎಂದು ಕೇಳಲು ಸವಾಲೆಸೆದರು. ಇದರ ಬಗ್ಗೆ ಚರ್ಚಿಸುವುದನ್ನು ಬಿಟ್ಟು, ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ಭಾರತೀಯರೂ ಒಟ್ಟಾಗಿ, ಒಂದಾಗಿ ನಿಲ್ಲಬೇಕಾಗಿದೆ. ಈ ಜಗತ್ತಿಗೆ ಒಂದು ಸ್ಪಷ್ಟ ಸಂದೇಶ ನೀಡಬೇಕಾಗಿದೆ ಎಂದರು.

ಭಯೋತ್ಪಾದನೆ ಎಂಬುದು ಕೇವಲ ಭಾರತಕ್ಕೆ ಸೀಮಿತವಾಗಿಲ್ಲ; ಇದು ಜಾಗತಿಕ ಸಮಸ್ಯೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಜೀ ಅವರು ಯಾವುದೇ ದೇಶಕ್ಕೆ ಹೋದಾಗಲೂ ಉಗ್ರವಾದವನ್ನು ಜಗತ್ತು ಖಂಡಿಸಬೇಕು; ಬುಡಸಮೇತ ಕಿತ್ತು ಹಾಕಬೇಕೆಂದು ಬಲವಾಗಿ ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರಿಗೆ ಕೇಳಲು ಬಯಸುತ್ತೇನೆ. ನೀವು ಮಲ್ಲಿಕಾರ್ಜುನ ಖರ್ಗೆ ಅವರ ಟ್ವೀಟ್ ನೋಡಿ. ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್‍ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾಗಿ ಹೇಳಿದ್ದಾರೆ. ಪಾಪ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಿಂದೂ ಎಂದು ಅನಿಸಲೇ ಇಲ್ಲ. ಉಗ್ರರು ಪ್ರತಿಯೊಬ್ಬರನ್ನು ಶೂಟ್ ಮಾಡಬೇಕಾದರೆ ಹಿಂದೂವೇ, ಮುಸಲ್ಮಾನರೇ ಎಂದು ಪತ್ತೆ ಹಚ್ಚಿ ಗುಂಡಿಟ್ಟು ಸಾಯಿಸಿದ್ದಾರೆ ಎಂದು ಟೀಕಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇವಲ ಭಾರತೀಯ ಪ್ರವಾಸಿಗರಷ್ಟೇ ಕಾಣುತ್ತಿದ್ದಾರೆ. ಕಾಂಗ್ರೆಸ್ಸಿನವರಿಗೆ ಹಿಂದೂಗಳು ಕಾಣುತ್ತಿಲ್ಲ; ಇದು ದೇಶದ ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕಾರಣ ಮಾಡುವುದನ್ನು ಬಿಡಬೇಕಿದೆ. ಪ್ರತಿಯೊಬ್ಬ ಭಾರತೀಯರೂ ಒಟ್ಟಾಗಿ, ಒಂದಾಗಿ ನಿಲ್ಲಬೇಕೆಂದು ಮನವಿ ಮಾಡಿದರು.

ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯನ್ನು ಮೋದಿಜೀ ಅವರ ಸರಕಾರವು ಗಂಭೀರವಾಗಿ ಪರಿಗಣಿಸಿದೆ. ಆರ್ಟಿಕಲ್ 370 ರದ್ದತಿ ಹಿಂದೆ ಕಾಶ್ಮೀರವನ್ನು ಸಹಜ ಸ್ಥಿತಿಗೆ ತರುವ ಸದುದ್ದೇಶ ಇತ್ತು. ಪ್ರವಾಸಿಗರನ್ನು ಗುರಿ ಮಾಡಿ, ಜಮ್ಮು ಕಾಶ್ಮೀರಕ್ಕೆ ವಿದೇಶಿ ಪ್ರವಾಸಿಗರು ಬರಬಾರದು; ಅಲ್ಲಿನ ಯುವಕರಿಗೆ ಉದ್ಯೋಗ ಸಿಗಬಾರದು; ಯುವಜನತೆ ಬೀದಿಗೆ ಬಂದು ಅವರನ್ನು ಭಯೋತ್ಪಾದನೆಗೆ ಬಳಸಿಕೊಳ್ಳಬೇಕೆಂಬ ದುರುದ್ದೇಶ ಇದರ ಹಿಂದಿದೆ ಎಂಬ ಚರ್ಚೆಗಳು ನಡೆದಿವೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *