ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ತೆಗೆದುಕೊಂಡ ಐದು ಪ್ರಮುಖ ನಿರ್ಧಾರ ಇದಾಗಿದೆ.
ಪಾಕಿಸ್ತಾನ ಈಗಾಗಲೇ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ನೀರಿನ ಲಭ್ಯತೆ ಕಡಿಮೆಯಾಗುವುದರಿಂದ ಕೃಷಿ ಅವಲಂಬಿತ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆ ಇಳುವರಿ ಕಡಿಮೆಯಾಗುವುದು, ಆಹಾರದ ಕೊರತೆ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗುವ ಸಾಧ್ಯತೆಯಿದೆ. ಅಂತರ್ಜಲ ಕುಸಿತ, ಕೃಷಿ ಭೂಮಿಯ ಲವಣಾಂಶ ಕುಸಿತ ಮತ್ತು ಸೀಮಿತ ನೀರಿನ ಸಂಗ್ರಹ ಸಾಮರ್ಥ್ಯದಂತಹ ನೀರಿನ ನಿರ್ವಹಣಾ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಗಡಿಯಾಚೆಗಿನ ನೀರು ಹಂಚಿಕೆ ಉದ್ದೇಶದೊಂದಿಗೆ ಭಾರತ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 19, 1960 ರಂದು ಸಿಂಧೂ ಜಲ ಒಪ್ಪಂದ (ಐಡಬ್ಲ್ಯೂಟಿ)ಕ್ಕೆ ಸಹಿ ಮಾಡಲಾಗಿದೆ. ಒಂಬತ್ತು ವರ್ಷಗಳ ಮಾತುಕತೆಗಳ ನಂತರ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಭಾರತ ಪೂರ್ವದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ಮೇಲೆ ನಿಯಂತ್ರಣ ಹೊಂದಿದ್ದರೆ, ಪಾಕಿಸ್ತಾನವು ಪಶ್ಚಿಮದ ನದಿಗಳಾದ ಸಿಂಧೂ, ಝೀಲಂ ಮತ್ತು ಚೆನಾಬ್ ನಿಂದ ನೀರನ್ನು ಪಡೆಯುತ್ತದೆ. ಒಟ್ಟು ನೀರಿನ ಹರಿವಿನ 80% ರಷ್ಟು ಪಾಕಿಸ್ತಾನಕ್ಕೆ ಹರಿಯುವುದರಿಂದ ಒಪ್ಪಂದದಿಂದ ಹೆಚ್ಚಿನ ಪ್ರಯೋಜನ ದೊರೆಯುತ್ತದೆ. ಈ ನದಿಗಳು ಪಾಕಿಸ್ತಾನದ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಕೃಷಿಗೆ ಅತ್ಯಗತ್ಯ.
1947 ರಲ್ಲಿ ಭಾರತ ವಿಭಜನೆಯಾದಾಗ, ಟಿಬೆಟ್‌ನಲ್ಲಿ ಹುಟ್ಟಿ ಭಾರತ ಮತ್ತು ಪಾಕಿಸ್ತಾನ ಎರಡರಲ್ಲೂ ಹರಿಯುವ, ಅಫ್ಘಾನಿಸ್ತಾನ ಮತ್ತು ಚೀನಾದ ಕೆಲವು ಭಾಗಗಳನ್ನು ತಲುಪುವ ಸಿಂಧೂ ನದಿ ಉದ್ವಿಗ್ನತೆಗೆ ಕಾರಣವಾಯಿತು. 1948 ರಲ್ಲಿ ಭಾರತವು ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿತು, ಇದರಿಂದಾಗಿ ಪಾಕಿಸ್ತಾನವು ವಿಶ್ವಸಂಸ್ಥೆಯ ಮುಂದೆ ಈ ವಿಷಯವನ್ನು ಎತ್ತಿತು. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. 1960 ರಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ನದಿ ವ್ಯವಸ್ಥೆಯನ್ನು ಶಾಂತಿಯುತವಾಗಿ ನಿರ್ವಹಿಸಲು ಮತ್ತು ಹಂಚಿಕೊಳ್ಳಲು ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದರು.