ಬೆಂಗಳೂರು: ಗ್ರಾಮಾಂತರದ ವಿಶ್ವನಾಥಪುರ, ಅನಗೊಂಡನಹಳ್ಳಿ,ಹಾಗೂ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಂಭವಿಸಿದ ಪ್ರತ್ಯೇಕ ಮೂರು ಅಪಘಾತಗಳಲ್ಲಿ ಪಿಯುಸಿ ವಿದ್ಯಾರ್ಥಿ ಸೇರಿ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ತಿರುಮಲಶೆಟ್ಟಿಹಳ್ಳಿಯ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಮನೋಜ್ (18) ಬೈಕ್ ನಲ್ಲಿ ಹೋಗುವಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ದ್ವಿತೀಯ ಪಿಯುಸಿ ಓದುತ್ತಿದ್ದ ಮನೋಜ್ ಮನೆಯಿಂದ ಕಾಲೇಜಿಗೆ ವಿಶ್ವನಾಥಪುರ ಬಳಿ ಬೈಕ್ ನಲ್ಲಿ ಹೋಗುವಾಗ ದುರ್ಘಟನೆ ನಡೆದಿದ್ದು, ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ರೈತ ಸಾವು:
ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿ.ಹೊಸಳ್ಳಿಯಲ್ಲಿಯ ಸಂತೆ ಬಯಲು ಬಳಿ ಅಪರಿಚಿತ ವಾಹನ ಸ್ಕೂಟರ್ ಗೆ ಡಿಕ್ಕಿ ಹೊಡೆದು ರೈತ ಮುನಿರಾಜು(58) ಮೃತಪಟ್ಟಿದ್ದಾರೆ.
ಸೆಕ್ಯೂರಿಟಿಗಾರ್ಡ್ ಸಾವು:
ತಿರುಮಲಹಳ್ಳಿ ಶೆಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದು ಸೆಕ್ಯೂರಿಟಿಗಾರ್ಡ್ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿಗಾರ್ಡ್ ಆಗಿದ್ದ ಒರಿಸ್ಸಾದ ಮದುರಿಷಿ(55)ಮೃತಪಟ್ಟವರು, ಮಂಗಳವಾರ ಸಂಜೆ ಅವರು ಕೆಲಸಕ್ಕೆ ಹೋಗುವಾಗ ಬುಲೆಟ್ ಬೈಕ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ತಿರುಮಲಹಳ್ಳಿ ಶೆಟ್ಟಿ ಪೊಲೀಸರು ಬೈಕ್ ಸವಾರನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.