ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಮಾಡುತ್ತಲೇ ಇರುವ ಚೀನಾ ಶಾಂಘೈನಲ್ಲಿ ಚಿನ್ನದ ಎಟಿಎಂ ಪರಿಚಯಿಸಿದೆ. ಬಳಕೆದಾರರಿಗೆ ತಮ್ಮ ಆಭರಣಗಳನ್ನು ಮಾರಾಟ ಮಾಡಲು ಮತ್ತು ತಕ್ಷಣ ಹಣ ಪಡೆಯಲು ಇದು ಅನುವು ಮಾಡಿಕೊಡುತ್ತದೆ. ಶಾಂಘೈನ ಗೋಲ್ಡ್ ಎಟಿಎಂಗಳನ್ನು ಶೆನ್ಜೆನ್ ಮೂಲದ ಕಿಂಗ್‌ಹುಡ್ ಗ್ರೂಪ್ ತಯಾರಿಸಿದೆ.
ಚೀನಾದ ಸಿಕ್ಸ್ತ್ ಟೋನ್ ವರದಿಯ ಪ್ರಕಾರ, ಚೀನಾದಾದ್ಯಂತ 100 ನಗರಗಳಲ್ಲಿ ಚಿನ್ನದ ಎಟಿಎಂ ಪ್ರಾರಂಭಿಸಲಾಗಿದೆ. ಇಲ್ಲಿ ಚಿನ್ನವನ್ನು 1,200 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕರಗಿಸಿ ನೈಜ-ಸಮಯದ ಶುದ್ಧತೆಯ ಪರಿಶೀಲನೆಗಳು, ನೇರ ಬೆಲೆ ನಿಗದಿ ಬ್ಯಾಂಕ್ ವರ್ಗಾವಣೆಗಳನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಆಭರಣ ಅಂಗಡಿಗಳಿಗೆ ತೆರಳಿ, ಬಂಗಾರ ಕೊಟ್ಟು ಹಣ ತೆಗೆದುಕೊಳ್ಳುವುದಕ್ಕೆ ತ್ವರಿತ ಪರ್ಯಾಯ ಕೆಲಸ ಮಾಡುತ್ತದೆ.
ಮೊದಲನೆಯದಾಗಿ ಈ ಎಟಿಎಂ ಚಿನ್ನದ ತೂಕ ಮಾಡುತ್ತದೆ, ಚಿನ್ನದ 99.99% ಶುದ್ಧತೆ ಪರಿಶೀಲಿಸುತ್ತದೆ. ನಂತರ ಯಂತ್ರವು ಶಾಂಘೈ ಚಿನ್ನದ ವಿನಿಮಯ ಕೇಂದ್ರದ ನೇರ ದರದ ಪ್ರಕಾರ ಹಣ ಲೆಕ್ಕಾಚಾರ ಮಾಡುತ್ತದೆ. ಬಳಿಕ ಚಿನ್ನದ ಹಣವನ್ನು ನೇರವಾಗಿ ಬಳಕೆದಾರರ ಖಾತೆಗೆ ವರ್ಗಾಯಿಸುತ್ತದೆ. ಸಣ್ಣ ಸೇವಾ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ.
ಈ ಚಿನ್ನದ ಎಟಿಎಂಗಳು ನಿಮಗೆ ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಚಿನ್ನವನ್ನು ಮಾರಾಟ ಮಾಡಲು ಅವಕಾಶ ನೀಡುತ್ತವೆ. ರಾತ್ರಿಯೂ ಕೆಲಸ ಮಾಡುತ್ತದೆ. ತುರ್ತು ಸಂದರ್ಭಗಳಲ್ಲಿಯೂ ತುಂಬಾ ಉಪಯುಕ್ತವಾಗಿದೆ. ಎಟಿಎಂನಲ್ಲಿ ಚಿನ್ನವನ್ನು ಸ್ವೀಕರಿಸಲು ಅದು 99.99% ಶುದ್ಧವಾಗಿರಬೇಕು.
ಚಿನ್ನದ ಎಟಿಎಂಗಳು ಭಾರತವನ್ನು ಪ್ರವೇಶಿಸುವ ಸಾಧ್ಯತೆ ಬಲವಾಗಿ ಕಂಡುಬರುತ್ತಿದೆ. ಆರ್‌ಪಿಜಿ ಗ್ರೂಪ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಚೀನಾದ ಶಾಂಘೈನಲ್ಲಿ ಪರಿಚಯಿಸಲಾದ ಗೋಲ್ಡ್ ಎಟಿಎಂಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಎಟಿಎಂಗಳು ಪಾರದರ್ಶಕವಾಗಿವೆ ಮತ್ತು ಶೋಷಣೆ ರಹಿತವಾಗಿವೆ ಎಂದು ಹೇಳಿದ್ದಾರೆ.