ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರನ್ಯಾರಾವ್ ಹಾಗೂ ಉದ್ಯಮಿ ತರುಣ್ ರಾಜು ಅವರ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಜಾಮೀನು ಅರ್ಜಿಗಳ ಸಂಬಂಧ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ನ್ಯಾಯಪೀಠ ತೀರ್ಪು ಕಾಯ್ದಿರಿಸಿತು. ರನ್ಯಾ ರಾವ್ ಪರ ವಕೀಲರು, ವಿಮಾನ ನಿಲ್ದಾಣದಲ್ಲಿ ಅರ್ಜಿದಾರರನ್ನು ತಪಾಸಣೆಗೆ ಒಳಪಡಿಸಿದ, ಅವರ ಮನೆಯಲ್ಲಿ ಶೋಧ ನಡೆಸಿ ಚಿನ್ನಾ ಭರಣ ಹಾಗೂ ನಗದು ಜಪ್ತಿ ಮಾಡಿರುವ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆ ನಿಯಮ ಉಲ್ಲಂಘಿಸಿದ್ದಾರೆ. ಗೆಜೆಟೆಡ್ ಅಧಿಕಾರಿ ಅಥವಾ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಸಬೇಕಿತ್ತು. ರನ್ಯಾ ವಿರುದ್ಧದ ಆರೋಪಕ್ಕೆ ಏಳು ವರ್ಷದವರೆಗೆ ಮಾತ್ರ ಶಿಕ್ಷೆ ವಿಧಿಸಬ ಹುದಾಗಿದೆ. ರನ್ಯಾ 46 ದಿನಗಳಿಂದ ಜೈಲಿನಲ್ಲಿದ್ದು, ಜಾಮೀನು ನೀಡಬೇಕು ಎಂದು ಕೋರಿದರು.
ರನ್ಯಾ ರಾವ್ ಜೊತೆಗೆ ಕಂಪನಿಯನ್ನು ಹೊಂದಿರುವ ಕಾರಣಕ್ಕೆ ಪ್ರಕರಣದಲ್ಲಿ ತರುಣ್ ಅವರನ್ನು ಸಿಲುಕಿಸಲಾಗಿದೆ. ರನ್ಯಾ ತಂದಿರುವ ಚಿನ್ನಕ್ಕೆ ಸುಂಕ ಪಾವತಿಸಿಲ್ಲ ಎಂದಾದರೆ, ಅದಕ್ಕೆ ಅವರನ್ನೇ ಜವಾಬ್ದಾರರನ್ನಾಗಿ ಮಾಡಬೇಕು. ಬದಲಿಗೆ ತನಿಖಾಧಿಕಾರಿಗಳು ತರುಣ್ ಅವರನ್ನು ಹೊಣೆಗಾರನನ್ನಾಗಿ ಮಾಡಲಾಗಿದೆ. ರನ್ಯಾಗೆ ದುಬೈನಲ್ಲಿ ಚಿನ್ನ ನೀಡಿದ ಆರೋಪ ಬಿಟ್ಟರೆ ಮತ್ಯಾವುದೇ ಆರೋಪ ತರುಣ್ ಮೇಲಿಲ್ಲ. ಅವರಿಗೆ ಜಾಮೀನು ನೀಡಬೇಕು ಎಂದು ತರುಣ್ ರಾಜು ಪರ ವಕೀಲರು ಕೋರಿದರು.
ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ತರುಣ್ ಅಮೆರಿಕ ಪ್ರಜೆಯಾಗಿದ್ದಾರೆ. ದುಬೈನಲ್ಲಿ ಚಿನ್ನವನ್ನು ಖರೀದಿಸಿ ಜಿನಿವಾ ಅಥವಾ ಥೈಲ್ಯಾಂಡ್‌ಗೆ ತೆಗೆದುಕೊಂಡು ಹೋಗುವುದಾಗಿ ತಿಳಿಸಿ ಬಳಿಕ ಬೆಂಗಳೂರಿನಲ್ಲಿ ಕಳ್ಳಸಾಗಣೆ ಮಾಡುವ ಸಲುವಾಗಿ ರನ್ಯಾ ರಾವ್ ಅವರಿಗೆ ಹಸ್ತಾಂತರಿಸುತ್ತಿದ್ದಾರೆ. ಈ ಇಬ್ಬರೂ ಒಟ್ಟು 31 ಬಾರಿ ದುಬೈಗೆ ಪ್ರಯಾಣಿಸಿದ್ದಾರೆ. 25 ಬಾರಿ ಒಂದೇ ದಿನದಲ್ಲಿ ದುಬೈಗೆ ಹೋಗಿ ಮತ್ತೆ ಭಾರತಕ್ಕೆ ಹಿಂದಿರುಗಿದ್ದಾರೆ. ಆರೋಪಿಗಳ ಬಂಧನದ ವೇಳೆ ಕಾನೂನು ಪಾಲಿಸಲಾಗಿದೆ. ಅವರಿಗೆ ಈ ಹಂತದಲ್ಲಿ ಜಾಮೀನು ನೀಡಬಾರದು ಎಂದು ಡಿಆರ್‌ಐ ಪರ ವಕೀಲರು ಹೇಳಿದರು.