ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿ ಬೆನ್ನಲ್ಲೇ ಮುಂಬೈ ಮತ್ತು ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಬೈ ಮತ್ತು ದೆಹಲಿಯ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಪ್ರವಾಸಿ ತಾಣಗಳು ಮತ್ತು ಇತರ ಪ್ರಮುಖ ಸ್ಥಳಗಳ ಮೇಲೆ ನಿಗಾ ವಹಿಸುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದು ಹಿಂದೂಗಳ ಹತ್ಯೆ ಮಾಡಿದ್ದಾರೆ. ದಕ್ಷಿಣ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ ಕಣಿವೆಯಲ್ಲಿ ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿ 30ಕ್ಕೂ ಪ್ರವಾಸಿಗರನ್ನು ಗುಂಡಿಕ್ಕಿ ಹೊಂದಿದ್ದಾರೆ.
ಇಬ್ಬರು ವಿದೇಶಿಗರು ಸೇರಿದಂತೆ ಹೆಣಗಳ ರಶಿಯನ್ನು ಟಾರ್ಪಲ್‌ನಲ್ಲಿ ಮುಚ್ಚಲಾಗಿದೆ. ಪ್ರವಾಸಿಗರ ಬಳಿ ಏಕಾಏಕಿ ನುಗ್ಗಿರುವ ಲಷ್ಕರ್‌ನ ಅಂಗ ಉಗ್ರ ಸಂಘಟನೆ ಟಿಆರ್‌ಎಫ್ ಟೆರರಿಸ್ಟ್‌ಗಳು ದಾಳಿ ನಡೆಸಿದ್ದಾರೆ. ಇನ್ನೂ ಭಾರತದ ಪ್ರವಾಸದಲ್ಲಿರುವ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿದ್ದು, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಜಮ್ಮು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಹಾಗೂ ವಿವಿಧ ಸಂಘಟನೆಗಳು ಬುಧವಾರ (ಏಪ್ರಿಲ್ 23) ಜಮ್ಮು ಬಂದ್‌ಗೆ ಕರೆ ನೀಡಿವೆ. ಕಾಶ್ಮೀರದಲ್ಲಿ ಪ್ರವಾಸಿಗರ ಮೇಲಿನ ದಾಳಿ ಖಂಡಿಸಿ ಸ್ಥಳೀಯರು ಸೋಪೋರ್, ಗಂಡೇರ್ಬಲ್, ಹಂದ್ವಾರ, ಬಂಡಿಪೋರಾ ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ಮೇಣದಬತ್ತಿ ಮೆರವಣಿಗೆ ನಡೆಸಿದ್ದಾರೆ.