ಲಕ್ನೊ: ಮಧ್ಯಮ ವೇಗಿ ಮುಖೇಶ್ ಕುಮಾರ್ ಮಾರಕ ದಾಳಿ ಹಾಗೂ ಕೆಎಲ್ ರಾಹುಲ್ ಅಜೇಯ ಅರ್ಧಶತಕದ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ 2ನೇ ಸ್ಥಾನಕ್ಕೇರಿತು.
ಲಕ್ನೋದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಲ್ ಎಸ್ ಜಿ ತಂಡವನ್ನು 6 ವಿಕೆಟ್ ಗೆ 159 ರನ್ ಗೆ ಕಡಿವಾಣ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ 8 ಪಂದ್ಯಗಳಿಂದ 6 ಜಯ ಹಾಗೂ 2 ಸೋಲಿನೊಂದಿಗೆ 12 ಅಂಕ ಸಂಪಾದಿಸಿ 2ನೇ ಸ್ಥಾನದಲ್ಲಿ ಉಳಿದುಕೊಂಡಿದೆ. ಎಲ್ ಎಸ್ ಜಿ 9 ಪಂದ್ಯಗಳಿಂದ 5 ಜಯ ಹಾಗೂ 4 ಸೋಲಿನೊಂದಿಗೆ 10 ಅಂಕದೊಂದಿಗೆ 5ನೇ ಸ್ಥಾನದಲ್ಲಿ ಉಳಿಯಿತು.
ಡೆಲ್ಲಿ ತಂಡ ಕರುಣ್ ನಾಯರ್ (15) ಬೇಗನೇ ಕಳೆದುಕೊಂಡಿದ್ದು, ಅಭಿಷೇಕ್ ಪೂರನ್ ಮತ್ತು ಕೆಎಲ್ ರಾಹುಲ್ ವೈಯಕ್ತಿಕ ಅರ್ಧಶತಕ ದಾಖಲಿಸಿದ್ದೂ ಅಲ್ಲದೇ ಎರಡನೇ ವಿಕೆಟ್ ಗೆ 69 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು.
ಪೂರನ್ 36 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 56 ರನ್ ಬಾರಿಸಿ ಔಟಾದರೆ ಅನುಭವಿ ಕೆಎಲ್ ರಾಹುಲ್ 42 ಎಸೆತಗಳಲ್ಲಿ ತಲಾ 3 ಬೌಂಡರಿ ಮತ್ತು ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿ ಔಟಾಗದೇ ಉಳಿದರು.
ನಾಯಕ ಅಕ್ಸರ್ ಪಟೇಲ್ 20 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಸೇರಿದಂತೆ 34 ರನ್ ಸಿಡಿಸಿದ್ದೂ ಅಲ್ಲದೇ ರಾಹುಲ್ ಜೊತೆ 56 ರನ್ ಜೊತೆಯಾಟದಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಏಡಿಯನ್ ಮರ್ಕರಂ ಮತ್ತು ಮಿಚೆಲ್ ಮಾರ್ಷ್ ಮೊದಲ ವಿಕೆಟ್ ಗೆ 10 ಓವರ್ ಗಳಲ್ಲಿ 87 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು.
ಮರ್ಕರಂ 33 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿದರೆ, ಮಾರ್ಷ್ 36 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 45 ರನ್ ಬಾರಿಸಿದರು. ಇವರಿಬ್ಬರು ನಿರ್ಗಮಿಸುತ್ತಿದ್ದಂತೆ ನಂತರ ಬಂದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದರು.
ಆಯುಷ್ ಬದೋನಿ 21 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 36 ರನ್ ಬಾರಿಸಿ ಹೋರಾಟ ನಡೆಸಿದರು. ಮುಖೇಶ್ ಕುಮಾರ್ 33 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.