ಶ್ರೀನಗರ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಕ್ರೌರ್ಯ ಮೆರೆದಿರುವ ಉಗ್ರರು ಇಬ್ಬರು ವಿದೇಶಿಯರು ಸೇರಿದಂತೆ 26 ಪ್ರವಾಸಿಗರನ್ನು ಹತ್ಯೆಗೈದಿದ್ದಾರೆ.
ಬಾಯಿಸರಣ್ ಕಣಿವೆ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಏಕಾಏಕಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಹಲವು ಕಡೆ ಗುಂಡಿನ ದಾಳಿ ನಡೆಸಿದ್ದಾರೆ. ಪಾದಯಾತ್ರೆ ಮಾಡುತ್ತಿದ್ದ ಹಾಗೂ ಕುದುರೆ ಸವಾರಿ ಮಾಡುತ್ತಿದ್ದ ಪ್ರವಾಸಿಗರೇ ಉಗ್ರರ ಪ್ರಮುಖ ಗುರಿಯಾಗಿತ್ತು.
ಉಗ್ರರ ದಾಳಿಗೆ ಇಡೀ ದೇಶವೇ ಬೆಚ್ಚಿಬಿದ್ದಿದ್ದು, ಮೊದಲ ಹತ್ಯೆಯಾದ ಪ್ರವಾಸಿಗ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಎಂಬುದು ತಿಳಿದು ಬಂದಿದ್ದು, ಉಳಿದವರ ವಿವರ ಇನ್ನಷ್ಟೇ ಹೊರಗೆ ಬರಬೇಕಿದೆ.
ಉಗ್ರರು ಸಾಮಾನ್ಯರಂತೆ ಧಿರಿಸು ಧರಿಸಿದ್ದು, ಅತೀ ಹತ್ತಿರದಿಂದ ಪ್ರವಾಸಿಗರನ್ನು ಗುರಿಯಾಗಿಸಿ ಮನಬಂದಂತೆ ದಾಳಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗುಂಡಿನ ಸದ್ದು ಭಾರೀ ದೂರದವರೆ ಕೇಳಿ ಬಂದಿದೆ.
ಉಗ್ರರು ಪ್ರವಾಸಿಗರನ್ನು ಗುರಿಯಾಗಿ ದಾಳಿ ನಡೆಸಿದ್ದರಿಂದ ಹಲವಾರು ಮಂದಿ ಗಾಯಗೊಂಡಿದ್ದು, ಭಾರತೀಯ ಸೇನೆ ಹೆಲಿಕಾಫ್ಟರ್ ಮೂಲಕ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಘಟನಾ ಸ್ಥಳದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ.
ಸೌದಿ ಅರೆಬಿಯಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೂಡಲೇ ಜಮ್ಮುಕಾಶ್ಮೀರಕ್ಕೆ ತೆರಳಿ ಪರಿಸ್ಥಿತಿ ಅವಲೋಕಿಸುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದಾರೆ.