Menu

ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅನುಮಾನ ಬಗೆಹರಿಸುವ ಶಕ್ತಿ ಸರ್ಕಾರಕ್ಕಿದೆ: ಡಿಕೆ ಸುರೇಶ್

dk suresh

ಬೆಂಗಳೂರು: ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮುಂದಿದೆ. ಈ ಅನುಮಾನಗಳಿಗೆ ತೆರೆ ಎಳೆಯುವ ಶಕ್ತಿ ಸರ್ಕಾರಕ್ಕಿದೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟ ಸುದೀರ್ಘವಾಗಿ ಚರ್ಚಿಸಿ ಈ ಕೆಲಸ ಮಾಡಲಿದ್ದಾರೆ” ಎಂದು ಮಾಜಿ ಸಂಸದ ಡಿಕೆ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ಆಯೋಗ ಹೇಳಿದ್ದು, ಕಳೆದ 15 ವರ್ಷಗಳಲ್ಲಿ ಸಾಕಷ್ಟು ಜನ ನಗರ ಪ್ರದೇಶಗಳಿಗೆ ವಲಸೆ ಬಂದಿದ್ದಾರೆ. ಇವರನ್ನು ವರದಿಯಲ್ಲಿ ಸೇರಿಸಲಾಗಿದೆಯೇ ಇಲ್ಲವೇ ಎಂಬ ಗೊಂದಲವಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆಗಿದ್ದು, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದು, ಎಲ್ಲಾ ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಂಬಿಕೆ ಇದೆ. ಎಲ್ಲರಿಗೂ ಸರಿಯಾದ ರೀತಿ ನ್ಯಾಯ ಒದಗಿಸುವುದು ಅವರ ಜವಾಬ್ದಾರಿಯೂ ಆಗಿದೆ. ಈ ಪ್ರಕ್ರಿಯೆಯಲ್ಲಿ ಅನುಮಾನಗಳನ್ನು ನಿವಾರಿಸುವುದು ಮೊದಲ ಕೆಲಸವಾಗಬೇಕು” ಎಂದು ಅಭಿಪ್ರಾಯಪಟ್ಟರು.

ಕಾಂತರಾಜು ಆಯೋಗ ವರದಿ ಒಪ್ಪಿದ್ದ ಬಿಜೆಪಿ ಸರ್ಕಾರ:

“ಕಾಂತರಾಜು ಆಯೋಗವು ಯಾವುದೇ ರೀತಿಯ ಜಾತಿಗಣತಿಯನ್ನು ಮಾಡಿಲ್ಲ. ಆ ಸಮಿತಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಿ ಸರ್ಕಾರದ ಮುಂದಿಟ್ಟಿದೆ. ನಂತರ ಬಂದ ಜಯಪ್ರಕಾಶ್ ಹೆಗ್ಡೆ ಅವರು ವರದಿಯನ್ನು ಪೂರ್ಣಗೊಳಿಸಿ ಅಂಕಿ ಅಂಶಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. ಈ ಮಧ್ಯೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂತರಾಜು ಅವರು ಮಧ್ಯಂತರ ವರದಿಯನ್ನು ಸಲ್ಲಿಕೆ ಮಾಡಿದ್ದರು. ಈ ಮಧ್ಯಂತರ ವರದಿ ಒಪ್ಪಿಕೊಂಡ ಬಿಜೆಪಿ ಇದು ಸರಿ ಇದೆ ಎಂದು ಒಳಮೀಸಲಾತಿ ಗೆಜೆಟ್ ನೋಟಿಫಿಕೇಶನ್ ಮಾಡಿತ್ತು” ಎಂದು ತಿಳಿಸಿದರು.

ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಕ ಮಾಡಿದ್ದು ಕೂಡ ಬಿಜೆಪಿ ಸರ್ಕಾರ. ಇಂದು ಈ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿದೆ. 2015-16ರಲ್ಲಿ ಆರಂಭವಾದ ಸಮೀಕ್ಷೆ ರಾಜ್ಯದಲ್ಲಿ ಸರ್ಕಾರಿ ನೌಕರರು ಮನೆ ಮನೆಗೆ ಹೋಗಿ ಮಾಹಿತಿ ಕಲೆಹಾಕಿದ್ದಾರೆ. ಕೆಲವರು ಮಾಹಿತಿ ಕೊಟ್ಟರೆ ಮತ್ತೆ ಕೆಲವರು ಮಾಹಿತಿ ಕೊಟ್ಟಿಲ್ಲ. ಸಮಾಜದ ಬಗ್ಗೆ ಕಾಳಜಿ ಇರುವವರು ಈ ಬಗ್ಗೆ ಪೇಪರ್ ನೋಟಿಫಿಕೇಶನ್ ಕೂಡ ನೀಡಿದ್ದರು. ಇದರಲ್ಲಿ ತಮ್ಮ ಸಮುದಾಯದವರು ಇಂತಹ ಜಾತಿ, ಇಂತಹುದೇ ಉಪಜಾತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದರು.

ಜಾತಿಗಳ ಸಂಖ್ಯೆಗಿಂತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆ

“ವರದಿ ಸಿದ್ಧವಾಗಿ 10 ವರ್ಷಗಳಾಗಿರುವುದರಿಂದ ಸಾಕಷ್ಟು ಗೊಂದಲಗಳಿವೆ. 1.34 ಕೋಟಿ ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ ಎಂದು ವರದಿಯಲ್ಲಿ ಸಲ್ಲಿಸಲಾಗಿದೆ. ಅಂದಿನ ಸಮೀಕ್ಷೆ ಅನೇಕ ಮಾನದಂಡಗಳನ್ನು ಆಧರಿಸಿ ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯಾಗಿತ್ತು. ಈ ವರದಿ ಅಂಕಿ ಅಂಶಗಳು ಬಹಿರಂಗವಾದ ನಂತರ ಜಾತಿ ವಿಚಾರ ಚರ್ಚೆಯಾಗುತ್ತಿದೆಯೇ ಹೊರತು, ಯಾರು ಎಷ್ಟು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಮಾಜಿಕವಾಗಿ ಪ್ರಗತಿ ಸಾಧಿಸಿವೆ, ಯಾರು ಪ್ರಗತಿ ಸಾಧಿಸಿಲ್ಲ ಎಂಬ ಚರ್ಚೆಯಾಗುತ್ತಿಲ್ಲ. ಉದಾಹರಣೆಗೆ ಬ್ರಾಹ್ಮಣರಲ್ಲಿ, ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಆರ್ಥಿಕವಾಗಿ ಕೆಳಗಿರುವವರು. ಇನ್ನು ಗೊಲ್ಲ ಸಮುದಾಯದವರು ಎಸ್ ಟಿ ಪ್ರವರ್ಗದಲ್ಲಿ ಸೇರಲು ಹೋರಾಟ ಮಾಡುತ್ತಿದ್ದಾರೆ. ಅವರ ಬಗ್ಗೆ ಪೂರ್ಣ ಪ್ರಮಾಣದ ವರದಿ ಇಲ್ಲ, ಇನ್ನು ಈ ಭಾಗದಲ್ಲಿ ಬೆಸ್ತರು ಎಂದು ಕರೆಯಲ್ಪಡುವ ಸಮುದಾಯವನ್ನು ಉತ್ತರ ಕರ್ನಾಟಕ ಭಾಗದಲ್ಲಿ ಅಂಬಿಗರು ಎಂದು ಕರೆಯುತ್ತಾರೆ, ಕರಾವಳಿ ಭಾಗದಲ್ಲಿ ಮೊಗವೀರರು ಎಂದು ಕರೆಯಲಾಗುತ್ತದೆ. ಈ ಸಮುದಾಯವೂ ಎಸ್ ಟಿ ಪ್ರವರ್ಗಕ್ಕೆ ಸೇರಲು ಪಟ್ಟು ಹಿಡಿದಿದ್ದಾರೆ. ಈ ಸಮುದಾಯದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆ ಇಲ್ಲ” ಎಂದು ತಿಳಿಸಿದರು.

“ಕಾಂತರಾಜು ಅವರ ವರದಿ ಹಾಗೂ ಜಯಪ್ರಕಾಶ್ ಹೆಗ್ಡೆ ಅವರ ವರದಿ ಸಚಿವರ ಬಳಿ ಇದೆಯೇ ಹೊರತು ಸಾರ್ವಜನಿಕರ ಬಳಿ ಇಲ್ಲ. ಈ ಮಧ್ಯೆ ಕೆಲವು ಮಾಧ್ಯಮಗಳು ನಿತ್ಯ ಅರ್ಧರ್ಧ ಪುಟ ಮಾಹಿತಿ ಕೊಡುತ್ತಿವೆ. ಈ ವರದಿಗಳು ಗೊಂದಲಗಳನ್ನು ಸೃಷ್ಟಿಸುತ್ತಿವೆ. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಸ್ವಾತಂತ್ರ್ಯ ಪೂರ್ವದಿಂದ ಸ್ವಾತಂತ್ರ್ಯ ಬಂದ ನಂತರ ನೆಹರೂ ಅವರ ಕಾಲದಿಂದ ಮಲ್ಲಿಕಾರ್ಜುನ ಖರ್ಗೆ ಅವರ ಕಾಲದವರೆಗೂ ಶೋಷಿತರು, ರೈತರು, ದೀನದಲಿತರ ಪರವಾಗಿದ್ದು, ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ” ಎಂದರು.

“ಈ ವರದಿಯನ್ನು ಯಾರೂ ವಿರೋಧ ಮಾಡುತ್ತಿಲ್ಲ. ಬಿಜೆಪಿಯವರಂತು ಅಧಿಕಾರದಲ್ಲಿದ್ದಾಗಲೇ ಒಪ್ಪಿಕೊಂಡಿದ್ದಾರೆ. ಅಶೋಕ್ ಅವರು ರಾಜಕೀಯವಾಗಿ ಏನೇ ಟೀಕೆ ಮಾಡಬಹುದು. ಅಶೋಕ್ ಹಾಗೂ ಸುನೀಲ್ ಅವರು ತಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಕಾಂತರಾಜು ಆಯೋಗದ ವರದಿ ಎಲ್ಲಿ ಎಂದು ಕೇಳಬೇಕಿತ್ತು. ಈ ವರದಿ ಸರಿಯಿಲ್ಲವಾಗಿದ್ದರೆ ಅಂದೇ ಅವರು ತಿರಸ್ಕರಿಸಬಹುದಿತ್ತು. ಈಗ ವಿರೋಧ ಪಕ್ಷದಲ್ಲಿದ್ದೇವೆ ಎಂದು ಟೀಕೆ ಮಾಡುವುದು ಸರಿಯಲ್ಲ. ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು, ಸಾರ್ವಜನಿಕ ವಲಯದಲ್ಲಿರುವ ಅನುಮಾನಗಳನ್ನು ನಿವಾರಣೆ ಮಾಡಬೇಕು” ಎಂದು ಹೇಳಿದರು.

ಮರು ಸಮೀಕ್ಷೆ ಮಾಡಲು ಒತ್ತಾಯಿಸುತ್ತೀರಾ ಎಂದು ಕೇಳಿದಾಗ, “ಸಮೀಕ್ಷೆ ಮಾಹಿತಿಗಳಿವೆ ಎಂದು ಮಾಧ್ಯಮಗಳಲ್ಲಿ ಓದಿದ್ದೇನೆ. ಅದನ್ನು ಆಯಾ ಗ್ರಾಮಗಳಿಗೆ ಕೊಟ್ಟು, ಯಾರ ಮಾಹಿತಿ ಬಿಟ್ಟುಹೋಗಿದ್ದರೆ ಅದನ್ನು ಸೇರಿಸಿಕೊಳ್ಳಲು ಅವಕಾಶ ನೀಡಬೇಕು. ಏನಾದರೂ ತಪ್ಪುಗಳಾಗಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು 3-4 ತಿಂಗಳು ಕಾಲಾವಕಾಶ ನೀಡಬೇಕು. ಪ್ರತಿಯೊಂದಕ್ಕೂ ಮೇಲ್ಮನವಿ ಎಂಬ ಅವಕಾಶವಿದೆ. ಜನ 140 ಸ್ಥಾನ ಕೊಟ್ಟು ಆಶೀರ್ವಾದ ನೀಡಿದ್ದು, ಜನರ ಅನುಮಾನಗಳನ್ನು ನಿವಾರಣೆ ಮಾಡುವುದು ಸರ್ಕಾರದ ಮೊದಲ ಕರ್ತವ್ಯ. ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲಾ ಸಮುದಾಯಗಳಲ್ಲಿನ ಶೋಷಿತರಿಗೆ ನ್ಯಾಯ ಒದಗಿಸಬೇಕು. ಕುರುಬರನ್ನು ಹೆಚ್ಚಾಗಿ ತೋರಿಸಿದ್ದಾರೆ ಎಂಬುದು ಬಹುತೇಕರ ಆರೋಪ. ಅದನ್ನು ಮುಖ್ಯಮಂತ್ರಿಗಳೇ ನಿವಾರಣೆ ಮಾಡಬೇಕು. ಹಳ್ಳಿಗಳಿಗೆ ಮಾಹಿತಿ ಕಳುಹಿಸಿಕೊಟ್ಟಾಗ ಆ ಮಾಹಿತಿಯನ್ನು ಯಾರೂ ತಿರಸ್ಕರಿಸಲು ಆಗುವುದಿಲ್ಲ” ಎಂದು ತಿಳಿಸಿದರು.

ಪಡಿತರ ಕಾರ್ಡುದಾರರ ಕುಟುಂಬಗಳ ಸಂಖ್ಯೆಯೇ 1.50 ಕೋಟಿ ಇದೆ

“ಈ ಸಮೀಕ್ಷೆಯಲ್ಲಿ ಒಳಪಟ್ಟಿರುವ ಕುಟುಂಬಗಳ ಸಂಖ್ಯೆ 1.34 ಕೋಟಿ ಇದೆ. ನಮ್ಮಲ್ಲಿ ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡುಗಳೇ 1.50 ಕೋಟಿಗಳಿವೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಕಾರ್ಯಕ್ರಮ ಈ ಕುಟುಂಬಗಳಿಗೆ ತಲುಪುತ್ತಿವೆ. 10,78,106 ಅಂತ್ಯೋದಯ ಕಾರ್ಡ್, 1,17,49,098 ಬಿಪಿಎಲ್ ಕಾರ್ಡ್‌, 25,48,458 ಎಪಿಲ್ ಕಾರ್ಡ್‌ಗಳು ಸೇರಿ ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿವೆ. ನಮ್ಮ ಸರ್ಕಾರದ ಪ್ರಮುಖ ಗ್ಯಾರಂಟಿ ಗೃಹಜ್ಯೋತಿಯಲ್ಲಿ ಸುಮಾರು 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 1.22 ಕೋಟಿ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು ಸೇರಿದಂತೆ ಅನೇಕರು ಪಡೆಯುತ್ತಿದ್ದಾರೆ. ಈ ಯೋಜನೆಗಳಿಂದ ವಂಚನೆಯಾಗಿರುವವರೂ ಅನೇಕರಿದ್ದಾರೆ. ಇಂತಹ ಅಂಕಿಅಂಶಗಳು ನಮ್ಮ ಬಳಿ ಇರುವಾಗ ಸಾರ್ವಜನಿಕರಲ್ಲಿ ಅನುಮಾನ ಬರುವುದು ಸಹಜ. ಹೀಗಾಗಿ ಜಾತಿಗಣತಿ ವರದಿಯಲ್ಲಿ ಸಮೀಕ್ಷೆ ಮಾಡಿಲ್ಲ ಎಂದು ಹೇಳಲಾಗುವುದಿಲ್ಲ. ಸಮೀಕ್ಷೆಯಲ್ಲಿ ಕೆಲವರನ್ನು ಬಿಟ್ಟಿರುವುದರಿಂದ ಅವರನ್ನು ಸೇರಿಸಿಕೊಳ್ಳಬೇಕು. ಕೆಲವರು ಉಪಜಾತಿಗಳನ್ನು ನೋಂದಣಿ ಮಾಡಿದ್ದು, ನಮ್ಮ ಸಂಖ್ಯೆ ಕಮ್ಮಿಯಾಗಿದೆ, ಅವರ ಸಂಖ್ಯೆ ಜಾಸ್ತಿಯಾಗಿದೆ ಎಂಬ ವಾದಗಳು ಸೃಷ್ಟಿಯಾಗಿವೆ. ಇದೆಲ್ಲದಕ್ಕೂ ಕೊನೆಯಾಡುವ ಶಕ್ತಿ ಮಾನ್ಯ ಮುಖ್ಯಮಂತ್ರಿಗಳಿಗಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಚಿವ ಸಂಪುಟ ಈ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ಮಾಡಿ 7 ಕೋಟಿ ಕನ್ನಡಿಗರಿಗೆ ನ್ಯಾಯ ಕೊಡಿಸಬೇಕು” ಎಂದು ಹೇಳಿದರು.

“ಜಾತಿಗಣತಿ ಪದೇಪದೆ ಮಾಡುವಂತದ್ದಲ್ಲ. ಸ್ವತಂತ್ರಪೂರ್ವದಲ್ಲಿ 1931ರಲ್ಲಿ ಜಾತಿಗಣತಿ ನಡೆದಿತ್ತು. ಆನಂತರ ಈಗ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದೆ. ಇದು ನ್ಯಾಯಸಮ್ಮತವಾಗಿ ಆಗಬೇಕು ಎಂದು ಸಾರ್ವಜನಿಕರಲ್ಲಿ ಚರ್ಚೆಯಾಗುತ್ತಿದ್ದು, ಬೇರೆಯವರಿಗೆ ಮಾತನಾಡಲು ಅವಕಾಶ ನೀಡುವುದು ಬೇಡ. ವಿರೋಧಪಕ್ಷಗಳು, ಸಂಘಸಂಸ್ಥೆಗಳು ಸಾರ್ವಜನಿಕವಾಗಿ ಚರ್ಚೆ ಮಾಡುತ್ತಿದ್ದಾರೆ. ತಪ್ಪನ್ನು ಸರಿಮಾಡಿಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು. ಎಲ್ಲರನ್ನು ಸಮಾಧಾನಪಡಿಸಬೇಕಾಗಿರುವುದೇ ಸರ್ಕಾರದ ಕೆಲಸ. ಆ ಕೆಲಸವನ್ನು ಮಾಡಬೇಕು ಎಂದು ಸರ್ಕಾರಕ್ಕೆ ವಿನಮ್ರವಾಗಿ ಮನವಿ ಮಾಡುತ್ತೇನೆ” ಎಂದರು.

ಆದಿ ಚುಂಚನಗಿರಿ ಶ್ರೀಗಳು ಆಪ್ ಸಿದ್ಧಪಡಿಸಲು ಸೂಚಿಸಿದ್ದಾರೆ ಎಂದು ಕೇಳಿದಾಗ, “ನನಗೆ ಚುಂಚನಗಿರಿಯ ಬಗ್ಗೆ ಗೊತ್ತಿಲ್ಲ. ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಒಕ್ಕಲಿಗ ಹಾಗೂ ಲಿಂಗಾಯತರ ಸಭೆಯಲ್ಲಿ ಈ ಒತ್ತಾಯ ಮಂಡಿಸುತ್ತೀರಾ ಎಂದು ಕೇಳಿದಾಗ, “ನನಗೆ ಈ ಸಭೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅನುಮಾನಗಳನ್ನು ನಿವಾರಣೆ ಮಾಡಬೇಕಾದ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ” ಎಂದರು.

ಜಾತಿಗಣತಿ ವರದಿ ಬಗ್ಗೆ ಸಚಿವರಲ್ಲಿ ಒಮ್ಮತವಿಲ್ಲ ಎಂದು ಕೇಳಿದಾಗ, “ಸಚಿವರಲ್ಲಿ ಒಮ್ಮತ ಇದೆಯೋ ಇಲ್ಲವೋ ನನಗೆ ತಿಳಿಯುವುದಿಲ್ಲ. ನೀವು ಎಲ್ಲರ ಬಳಿ ಹೋಗುವುದರಿಂದ ನಿಮಗೆ ಅದರ ಬಗ್ಗೆ ತಿಳಿದಿರುತ್ತದೆ” ಎಂದು ತಿಳಿಸಿದರು.

ಕಳೆದ 10-15 ವರ್ಷಗಳಿಂದ ಆಯಾಕಟ್ಟಿನ ಜಾಗದಲ್ಲಿದ್ದವರನ್ನು ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿಸಲಾಗಿದೆ ಎಂದು ಕೇಳಿದಾಗ, “ಕುರುಬರಲ್ಲೂ ಸಾಕಷ್ಟು ಬಲಾಢ್ಯರೂ ಇದ್ದಾರೆ, ಸಂಕಷ್ಟದಲ್ಲಿರುವವರೂ ಇದ್ದಾರೆ. ನಮ್ಮ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈನವರನ್ನು ಆದಿ ಕರ್ನಾಟಕ ಎಂದು ಕರೆಯುತ್ತೇವೆ. ಎಡಗೈನವರನ್ನು ಆದಿ ದ್ರಾವಿಡ ಎಂದು ಕರೆಯುತ್ತೇವೆ. ಚಿಕ್ಕಬಳ್ಳಾಪುರದಿಂದ ಮುಂದೆ ಹೋದರೆ, ಬಲಗೈನವರನ್ನು ಆದಿ ದ್ರಾವಿಡ, ಎಡಗೈನವರನ್ನು ಆದಿ ಕರ್ನಾಟಕ ಎಂದು ಕರೆಯುತ್ತಾರೆ. ಹೀಗೆ ಕೆಲವು ಲೋಪದೋಷಗಳಿವೆ. ಈ ವರದಿ ಸರಿಯಾಗಿದ್ದರೆ ಒಳಮೀಸಲಾತಿ ವಿಚಾರವಾಗಿ ನಾಗಮೋಹನ್ ದಾಸ್ ಅವರ ವರದಿ ಮಾಡುವ ಅಗತ್ಯವೇ ಇರುವುದಿಲ್ಲ” ಎಂದು ತಿಳಿಸಿದರು.

ಸಚಿವ ಈಶ್ವರ್ ಖಂಡ್ರೆ ಅವರು ಕೂಡ ಒಳಮೀಸಲಾತಿಗೆ ಈ ವರದಿ ಪರಿಗಣಿಸಿ ಅಥವಾ ವರದಿ ಅಪ್ ಡೇಟ್ ಮಾಡಲು ಆಗ್ರಹಿಸಿದ್ದಾರೆ ಎಂದು ಕೇಳಿದಾಗ, “ಈ ವರದಿಯನ್ನು ಅಪ್ ಡೇಟ್ ಮಾಡುವುದು ಒಳ್ಳೆಯದೇ. ಜಾತಿಗಣತಿ ಸಮೀಕ್ಷೆ ನಡೆದ ನಂತರ ರಾಜ್ಯದಲ್ಲಿ 1 ಕೋಟಿ ಜನಸಂಖ್ಯೆ ಜಾಸ್ತಿಯಾಗಿದ್ದು, ಅನುಮಾನಗಳಿಗೆ ತೆರೆ ಎಳೆಯುವ ಮುಕ್ತ ಅವಕಾಶ ಸಿಗಲಿದೆ” ಎಂದರು.

224 ಕ್ಷೇತ್ರಗಗಳ ಪೈಕಿ 212 ಕ್ಷೇತ್ರಗಳಲ್ಲಿ ಅಹಿಂದ ಸಂಖ್ಯೆ ಹೆಚ್ಚಾಗಿದೆ ಎಂಬ ವಾದದ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಕೆಲವರು ಹಿಂದೂಗಳೇ ಇಲ್ಲ ಎನ್ನುತ್ತಾರೆ, ಕೆಲವು ಮಾಧ್ಯಮಗಳಲ್ಲಿ ಮುಸಲ್ಮಾನರೇ ಹೆಚ್ಚಾಗಿದ್ದಾರೆ ಎಂದು ಹೇಳುತ್ತೀರಿ, ಅವರನ್ನು ಕೇಳಿದರೆ ನಮ್ಮ ಶೇಕಡಾವಾರು ಪ್ರಮಾಣ ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಒಂದು ಕಡೆ ಅಹಿಂದ ಜಾಸ್ತಿಯಾಗಿದೆ ಎನ್ನುತ್ತಾರೆ, ಮತ್ತೊಂದು ಕಡೆ ಕುರುಬರು ಹೆಚ್ಚಾಗಿದ್ದಾರೆ ಎನ್ನುತ್ತಾರೆ, ನಾವು ಯಾವುದನ್ನು ನಂಬಬೇಕು? ಇಂತಹ ಅನುಮಾನಗಳಿಗೆ ಕೊನೆಯಾಡಬೇಕು. ಅಂಬೇಡ್ಕರ್ ಅವರ ತತ್ವ ಆಶಯದಂತೆ ಜಾತ್ಯಾತೀತ ನಿಲುವು, ತತ್ವದ ಮೇಲೆ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕು” ಎಂದರು.

ಸಾರ್ವಜನಿಕ ಚರ್ಚೆಯಾಗಲು ವಿಧಾನಸಂಡಲ ಅಧಿವೇಶನ ಕರೆಯಬೇಕೆ ಎಂದು ಕೇಳಿದಾಗ, “ಅದು ಕೂಡ ಒಂದು ಭಾಗ. ನಾನು ಅದನ್ನು ಅಲ್ಲಗಳೆಯುವುದಿಲ್ಲ. ಇಂತಹ ದೊಡ್ಡ ತೀರ್ಮಾನ ತೆಗೆದುಕೊಳ್ಳುವಾಗ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ತೆಲಂಗಾಣದಲ್ಲೂ ಗಣತಿ ಮಾಡಿದಾಗ ಅದನ್ನು ಅಧಿವೇಶನದಲ್ಲಿ ಮಂಡನೆ ಮಾಡಿ ಚರ್ಚಿಸಲಾಯಿತು. ಹೀಗಾಗಿ ಅಧಿವೇಶನದಲ್ಲಿ ಚರ್ಚೆ ಮಾಡುವುದರಲ್ಲಿ ತಪ್ಪಿಲ್ಲ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *