ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿರುವ ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬೆಂಗಳೂರು ವಕೀಲರ ಸಂಘದ ಸದಸ್ಯರು ಹೈಕೋರ್ಟ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಹೈಕೋರ್ಟ್‌ನ ಗೋಲ್ಡನ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ ವಕೀಲರು, ನ್ಯಾಯಮೂರ್ತಿಗಳನ್ನು ಹಠಾತ್ ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ. ಕೊಲಿಜಿಯಂ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, ನ್ಯಾಯಮೂರ್ತಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಕೊಲಿಜಿಯಂ, ನ್ಯಾಯಾಂಗವನ್ನು ವೈವಿಧ್ಯಮಯಗೊಳಿಸುವುದು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ವೈವಿಧ್ಯಮಯ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಎಂದು ತಿಳಿಸಿದೆ. ಹಾಗಿದ್ದಲ್ಲಿ ಈ ನಿಯಮ ದೇಶದ ಎಲ್ಲ ನ್ಯಾಯಾಲಯಗಳಿಗೂ ಅನ್ವಯವಾಗಬೇಕಲ್ಲವೇ ಎಂದು ಪ್ರಶ್ನಿಸಿದರು. ಆದ್ದರಿಂದ ವರ್ಗಾವಣೆಯನ್ನು ಮರು ಪರಿಶೀಲಿಸಿ ತಕ್ಷಣ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದ ನಾಲ್ವರು ನ್ಯಾಯಮೂರ್ತಿಗಳನ್ನು ವರ್ಗಾವಣೆ ಮಾಡಿರುವುದು ಅನ್ಯಾಯ. ಇತರ ರಾಜ್ಯಗಳ ನ್ಯಾಯಮೂರ್ತಿಗಳನ್ನು ಕರ್ನಾಟಕಕ್ಕೆ ನಿಯೋಜನೆ ಮಾಡಲಾಗುತ್ತಿದೆ. ಕರ್ನಾಟಕ ಹೈಕೋರ್ಟ್ ಕಸದ ಬುಟ್ಟಿಯೇ ಎಂದು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಕೊಲಿಜಿಯಂ ನ್ಯಾಯಮೂರ್ತಿಗಳು ಮತ್ತು ಕೇಂದ್ರ ಕಾನೂನು ಸಚಿವರಿಗೆ ಮನವಿ ಮಾಡಿ ವರ್ಗಾವಣೆ ಆದೇಶ ಹಿಂಪಡೆಯಲು ಕೋರಲಾಗುವುದು ಎಂದರು.
ಹಿರಿಯ ವಕೀಲ ಬಿ.ವಿ.ಆಚಾರ್ಯ ಮಾತನಾಡಿ, “ಇತ್ತೀಚೆಗೆ ನಡೆದ ಸಮೀಕ್ಷೆ ಪ್ರಕಾರ ದೇಶದಲ್ಲಿ ಕರ್ನಾಟಕ ರಾಜ್ಯ ನ್ಯಾಯಾಂಗ ನ್ಯಾಯನಿರ್ಣಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂಬ ಅಂಶವಿದೆ. ನಮ್ಮ ಕೋರ್ಟ್ನ ನ್ಯಾಯಮೂರ್ತಿಗಳು ಸಮಗ್ರತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಪಾಡುತ್ತಿದ್ದು, ಅವರ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ” ಎಂದು ಹೇಳಿದರು.
ಉತ್ತಮ ಆಡಳಿತ ಮತ್ತು ಒಳಗೊಳ್ಳುವಿಕೆ ಎಂಬ ಕಾರಣವನ್ನು ನೀಡಿ ನಮ್ಮ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ಬೇರೊಂದು ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಯಾವ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂದು ನಮಗೆ ಗೊತ್ತಾಗುತ್ತಿಲ್ಲ. ಹೀಗಾ, ಕೊಲಿಜಿಯಂ ತನ್ನ ನಿರ್ಣಯವನ್ನು ತಕ್ಷಣ ಹಿಂಪಡೆಯಬೇಕು. ಸರ್ಕಾರವೂ ಇದಕ್ಕೆ ಅವಕಾಶ ನೀಡಬಾರದು” ಎಂದು ಒತ್ತಾಯಿಸುವುದಾಗಿ ಹೇಳಿದರು.
ಹಿರಿಯ ವಕೀಲರಾದ ಉದಯ್ ಹೊಳ್ಳ, ವಿಜಯ್‌ಕುಮಾರ್ ಎಸ್.ಪಾಟೀಲ್, ಕೆ.ಎನ್.ಫಣೀಂದ್ರ, ನರಗುಂದ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.