ಶಾಸಕಾಂಗ ಮತ್ತು ಕಾರ್ಯಾಂಗವು ತನ್ನ ವಿಧಿಬದ್ಧ ಕರ್ತವ್ಯವೆಸಗಲು ವಿಫಲವಾದಾಗ, ಅನ್ಯಾಯಕ್ಕೊಳಗಾದವನ ಪರವಾಗಿ ಕಂಪ್ಲೀಟ್ ಜಸ್ಟೀಸ್ ಅಡಿ ಸುಪ್ರೀಂಕೋರ್ಟ್, ಆರ್ಟಿಕಲ್ ೧೪೨ ಅಸ್ತ್ರವನ್ನು ಬಳಸುವುದರಲ್ಲಿ ತಪ್ಪೇನಿದೆ?
ಕಳೆದ ವಾರದಲ್ಲಿ ದೇಶದ ಸರ್ವೋನ್ನತ ನ್ಯಾಯಪೀಠವಾದ ಸುಪ್ರೀಂಕೋರ್ಟ್ ನೀಡಿದ ಎರಡು ಪ್ರಮುಖ ಆದೇಶಗಳು ಎಲ್ಲರ ಗಮನ ಸೆಳೆದಿವೆ. ಅಲ್ಲದೆ ಚರ್ಚೆಗೂ ಎಡೆ ಮಾಡಿಕೊಟ್ಟಿವೆ. ಒಂದು, ವಕ್ಫ್ ನೂತನ ಕಾಯಿದೆಗೆ ವಿಧಿಸಲಾದ ಮಧ್ಯಂತರ ಆದೇಶ, ಎರಡನೆಯದು ರಾಷ್ಟ್ರಪತಿ ಕೂಡಾ ಸರ್ಕಾರ ಕಳುಹಿಸುವ ಯಾವುದೇ ವಿಧೇಯಕವನ್ನು ವಿಳಂಬವಿಲ್ಲದೆ ಮೂರು ತಿಂಗಳೊಳಗೆ ಅದನ್ನು ವಿಲೇವಾರಿ ಮಾಡಿ ಸರ್ಕಾರಕ್ಕೆ ಮತ್ತೆ ವಾಪಸ್ ಕಳುಹಿಸುವುದು.
ಮೇಲಿನ ಸುಪ್ರೀಂಕೋರ್ಟ್ ಆದೇಶಕ್ಕೆ ಒಂದು ರೀತಿಯಲ್ಲಿ ತಿರುಗಿಬಿದ್ದು ಕಟು ಟೀಕೆಗೆ ಇಳಿದವರೆಂದರೆ ದೇಶದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷರಾದ ಜಗದೀಪ್ ಧನಕರ್. ಸಂವಿಧಾನದ ಸಂರಕ್ಷಕರಾದ ರಾಷ್ಟ್ರಪತಿಗೆ ಈ ರೀತಿಯಾದ ಕೋರ್ಟ್ ಡೈರೆಕ್ಷನ್ ನೀಡಲು ಈ ಸುಪ್ರೀಂಕೋರ್ಟ್ ಯಾರು? ಸಂವಿಧಾನದ ಆರ್ಟಿಕಲ್ ೧೪೨ ಅನ್ನು ಸುಪ್ರೀಂಕೋರ್ಟ್ ನ್ಯೂಕ್ಲಿಯರ್ ಮಿಸೈಲ್ ಆಗಿ ಬಳಸಿದ್ದು ಸರಿಯೇ ಎಂದು ಉಪರಾಷ್ಟ್ರಪತಿ ಸರ್ವೋನ್ನತ ನ್ಯಾಯಸ್ಥಾನದ ಕರ್ತವ್ಯದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಇನ್ನು ಕೇಂದ್ರ ಸರ್ಕಾರದ ರೂಲಿಂಗ್ ಪಾರ್ಟಿಯ ಓರ್ವ ಸಂಸದ, ಸುಪ್ರೀಂಕೋರ್ಟ್ ಕುರಿತು ತುಸು ಖಾರವಾಗಿ ಮಾತನಾಡಿರು ವುದು ಗಂಭೀರ.
ಒಟ್ಟಿನಲ್ಲೀಗ ಸುಪ್ರೀಂಕೋರ್ಟ್, ರಾಷ್ಟ್ರಪತಿ ಹಾಗು ಸಂಸತ್ ಈ ಮೂರು ವ್ಯಕ್ತಿತ್ವಗಳ ನಡುವೆ ಬಲವಾದ ಜಿಜ್ಞಾಸೆ ಮತ್ತು ವೈಚಾರಿಕ ಸಂಘರ್ಷ ಶುರುವಾಗಿದೆ. ಸಂವಿಧಾನದ ಮೂರೂ ಅಂಗಗಳ ಹೊಣೆಗಾರಿಕೆ ಹೊಂದಿದ ರಾಷ್ಟ್ರಪತಿ ಪರಮೋಚ್ಚ ವ್ಯಕ್ತಿಯೇ? ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವ ಗುರುತರ ಹೊಣೆಗಾರಿಕೆ ಹೊತ್ತ ಸುಪ್ರೀಂಕೋರ್ಟ್ ಪರಮಶ್ರೇಷ್ಟವೆ? ಈ ದಿಶೆಯಲ್ಲಿ ಯಾರು ಯಾರಿಗೆ ಅಧೀನ? ಮತ್ತು ಯಾರು, ಯಾರ ಆದೇಶ ವನ್ನು ಪಾಲಿಸಬೇಕು?
ಧನಕರ್ ಟೀಕೆಗಳ ಬಳಿಕ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ನೀಡಿರುವ ಹೇಳಿಕೆ ಗಮನಾರ್ಹ. ಕೇಂದ್ರ ಸರ್ಕಾರದ ರಿಯಲ್‌ಎಕ್ಸಿಕ್ಯೂಟಿವ್ ಆಗಿರುವ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್, ತನ್ನ ಅಧಿಕಾರ ಬಳಸಿ ಡೈರೆಕ್ಷನ್ ಯಾಕೆ ನೀಡಬಾರದು? ಮಿಗಿಲಾಗಿ ಧನಕರ್, ಆರ್ಟಿಕಲ್ ೧೪೨ ಅನ್ನು ಸುಪ್ರೀಂಕೋರ್ಟ್ ಈ ದಿಶೆಯಲ್ಲಿ ಬಳಸಿದ್ದನ್ನು ಮಿಸೈಲ್‌ಗೆ ಹೋಲಿಸಿದ್ದನ್ನು ಸಿಬಲ್ ತೀವ್ರವಾಗಿ ಖಂಡಿಸಿದ್ದಾರೆ.
ಎಪ್ಪತ್ತು ವರ್ಷಗಳ ಹಿಂದೆ ನಮ್ಮ ದೇಶಕ್ಕೆಂದು ರಚನೆಯಾದ ಸಂವಿಧಾನದಲ್ಲಿ ಮೇಲಿನ ಎಲ್ಲ ಅಂಶಗಳಿಗೆ ಸಂಬಂಧಿಸಿದ ಉಲ್ಲೇಖಗಳು ಮತ್ತು ಪರಿಚ್ಛೇದಗಳು ಸಾಕಷ್ಟು ಇವೆ. ಆದರೆ ಅವುಗಳನ್ನು ಕಾಲಕಾಲಕ್ಕೆ ತಿದ್ದಲು ಸಂವಿಧಾನದಲ್ಲಿ ಅವಕಾಶವೂ ಇದೆ. ನಮ್ಮದು ಅಮೆರಿಕ ಸಂವಿಧಾನದ ಹಾಗೆ ರಿಜಿಡ್ ಸಂವಿಧಾನ ವೇನೂ ಅಲ್ಲ. ಹಾಗೆಯೇ ಕಾರ್ಯಾಂಗ ಮತ್ತು ಶಾಸಕಾಂಗವನ್ನು ಪಕ್ಕಕ್ಕಿಟ್ಟು ಸಂಪೂರ್ಣವಾಗಿ ಪ್ರತ್ಯೇಕ ನ್ಯಾಯಾಂಗ ವ್ಯವಸ್ಥೆಯನ್ನು ಭಾರತ ಹೊಂದಿದೆ. ಪ್ರಾಯಶಃ ಭಾರತದಂತಹ ಅತ್ಯಧಿಕ ನಿರಕ್ಷರ ಮತ್ತು ಅತಿದೊಡ್ಡ ಪ್ರಜಾತಂತ್ರದ ಜನತೆಯ ಮೂಲಭೂತ ಹಕ್ಕುಗಳ ಸಂರಕ್ಷಣೆ ವಿಚಾರದಲ್ಲಿ ಇದುವರೆಗೆ ಸುಪ್ರೀಂಕೋರ್ಟ್ ವಹಿಸಿದ ಹೊಣೆಗಾರಿಕೆಯ ಪರಂಪರೆಯನ್ನು ನಾವಿಲ್ಲಿ ಅತಿಮುಖ್ಯವಾಗಿ ಪರಾಮರ್ಶಿಸುವ ಅಗತ್ಯವಿದೆ.
ಒಂದು ವೇಳೆ ಇಂತಹ ಸರ್ವ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ನಮ್ಮ ದೇಶದಲ್ಲಿ ಇಲ್ಲದೆ ಇದ್ದಿದ್ದರೆ ದೇಶದ ಸಾಮಾನ್ಯ ಪ್ರಜೆಯ ಪರಿಸ್ಥಿತಿ ಇಂದೇನಾಗುತ್ತಿತ್ತು? ರಾಜಕೀಯ ಹಿತಾಸಕ್ತಿಗಳು ಮತ್ತು ಪಕ್ಷದ ಪರಮಾಕಾಂಕ್ಷಿಗಳ ಕಪಿಮುಷ್ಠಿಯಲ್ಲಿ ದೇಶದ ಸಂವಿಧಾನ ಎಂಬುದು ಮಕ್ಕಳ ಆಟಿಕೆಯಾಗುತ್ತಿತ್ತು! ಆಟದ ಮೈದಾನದಲ್ಲಿ ಒಂದು ಗೋಲ್‌ಪೋಸ್ಟ್‌ನಿಂದ ಇನ್ನೊಂದು ಗೋಲ್ ಪೋಸ್ಟ್‌ಗೆ ಆಟಗಾರ ಒದೆಯುವ ಫುಟ್‌ಬಾಲ್‌ನಂತೆ ಆಗುತಿತ್ತು! ಸರ್ಕಾರಗಳು ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳುವ ಅಥವಾ ತಮ್ಮ ಸ್ವಹಿತಾಸಕ್ತಿಗಳನ್ನು ಗಟ್ಟಿಯಾಗಿ ನೆಲೆಯೂರಿಸುವ ದಿಶೆಯಲ್ಲಿ ಕಾಲಕಾಲಕ್ಕೆ ತಮ್ಮ ರಾಜಕೀಯ ನಿಲುವುಗಳನ್ನು ಬದಲಾಯಿಸಿಕೊಂಡು ಬಿಟ್ಟಿವೆ. ಇಂತಹ ಬದಲಾವಣೆಗಳಿಗೆ ಪ್ರಜಾತಂತ್ರ ಅಥವಾ ಪ್ರಜಾಹಿತದ ಬಲವೇನೂ ಇರುವುದಿಲ್ಲ. ಸುಪ್ರೀಂಕೋರ್ಟ್ ಸರಿಯಿಲ್ಲ ಎಂದು ಮೂದಲಿಸುವ ಪ್ರಭೂತಿಗಳು ಮತ್ತು ಪ್ರಜಾಪ್ರತಿನಿಧಿಗಳು ತಾವೆಷ್ಟರ ಮಟ್ಟಿಗೆ ಸಂವಿಧಾನಿಕ ಕೆಲಸಗಳು ಮತ್ತು ಕರ್ತವ್ಯಗಳನ್ನು ಚಾಚೂ ತಪ್ಪದೆ ಕೈಗೊಂಡಿzವೆ ಎಂಬುದನ್ನು ಮೊದಲು ಈ ದೇಶದ ಜನತೆಗೆ ವಿವರಿಸಬೇಕಿದೆ. ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಎಂದು ಆರಂಭದಲ್ಲಿಯೆ ಪ್ರತಿಜ್ಞೆ ಸ್ವೀಕರಿಸುವ ಪ್ರಜಾಪ್ರತಿನಿಧಿಗಳು ಸಂವಿಧಾನ ಮತ್ತು ಕೋರ್ಟ್‌ಗಳನ್ನು ಧಿಕ್ಕರಿಸುವ ರೀತಿಯಲ್ಲಿ ಸರ್ವಾಧಿಕಾರಿ ಧೋರಣೆಯನ್ನೂ ಹೊಂದಿರುವುದು ಸತ್ಯಕ್ಕೆ ದೂರವಾದ ಸಂಗತಿಯೇನಲ್ಲ.
ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ನೇರ ಸಂಘರ್ಷ ಸಂಭವಿಸುತ್ತಿರುವುದು ಈ ದೇಶದಲ್ಲಿ ಇದು ಹೊಸದೇನಲ್ಲ. ಯಾವಾಗ ಕಾರ್ಯಾಂಗ ಮತ್ತು ಶಾಸಕಾಂಗವು ತನ್ನ ಕರ್ತವ್ಯಗಳನ್ನು ಪಾಲಿಸಲು ವಿಫಲವಾಗುವುದೋ ಅಂತಹ ಎಲ್ಲ ಸನ್ನಿವೇಶಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡುವುದು ಅನಿವಾರ್ಯ. ನ್ಯಾಯಾಂಗದ ಹಸ್ತಕ್ಷೇಪವಿಲ್ಲದಂತೆ ಪ್ರಜಾತಂತ್ರದ ಚೌಕಟ್ಟಿನಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ನಡೆದುಕೊಂಡಾಗ, ನ್ಯಾಯಾಂಗದ ಅಧಿಕ ಹಸ್ತಕ್ಷೇಪದ ಪ್ರಶ್ನೆಯೆ ಉದ್ಭವಿಸದು. ರಾಷ್ಟಪತಿಯಾಗಲಿ, ರಾಜ್ಯಪಾಲರಾಗಲಿ. ಅವರು ಕ್ಯಾಬಿನೆಟ್ ಮಾದರಿ ಸರ್ಕಾರದಲ್ಲಿ ಸಂಪುಟದ ತೀರ್ಮಾನಗಳಿಗೆ ಮುದ್ರೆ ಒತ್ತುವ ರಬ್ಬರ್ ಸ್ಟಾಂಪ್‌ಗಳಷ್ಟೆ. ಆದರೆ ಇವರು ಮುದ್ರೆ ಒತ್ತುವ ಕೆಲಸದ ಹಿಂದೆ ಕ್ಯಾಬಿನೆಟ್ ತೀರ್ಮಾನದ ಪರಮಾಶಯಗಳೇ ಅಡಗಿರುವುದಲ್ಲವೇ? ಇದನ್ನು ರಾಜ್ಯಪಾಲರೋ, ರಾಷ್ಟ್ರಪತಿಯೋ ಒಂದು ಸಾರಿ ಪ್ರಶ್ನಿಸಿ ಸರ್ಕಾರಕ್ಕೆ ವಾಪಸ್ ಕಳುಹಿಸಬಹುದು. ಅನಂತರ ಅದು ತಮ್ಮ ಬಳಿ ಅಂಕಿತಕ್ಕೆಂದು ಬಂದಾಗ ತಮ್ಮ ಬಳಿಯೇ ಅದನ್ನು ವರ್ಷಗಟ್ಟಳೆ ಇಟ್ಟುಕೊಂಡು ವಿಳಂಬ ಮಾಡಲು ಇವರಿಗೆ ಯಾವ ಅಧಿಕಾರವಿದೆ? ಹೀಗೆ ವಿಳಂಬವಾದಾಗ ಇದನ್ನು ಮುಂದಿಟ್ಟುಕೊಂಡು ಸಹಜ ನ್ಯಾಯ ಕೋರಿ ಸಂಬಂಧಪಟ್ಟ ವ್ಯಕ್ತಿ (ಇಲ್ಲಿ ಸರ್ಕಾರ) ಹೈಕೋರ್ಟಿಗೋ ಅಥವಾ ಸುಪ್ರೀಂಕೋರ್ಟಿಗೋ ಮೊರೆ ಹೋಗದೆ ಇನ್ನೆಲ್ಲಿಗೆ ಮೊರೆಯಿಡಬೇಕು? ಇಂತಹ ಅರ್ಜಿಗಳು ತನ್ನ ಮುಂದೆ ಬಂದಾಗ ಸಂವಿಧಾನ ಪೀಠಗಳು ನಾಮ್ ಕೇ ವಾಸ್ತೆ ಆದೇಶಗಳನ್ನು ಕೊಡಬೇಕಾ ಅಥವಾ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯವನ್ನು (ಆರ್ಟಿಕಲ್ ೧೪೨ ಕಂಪ್ಲೀಟ್ ಜಸ್ಟೀಸ್ ಪರಿಕಲ್ಪನೆಯಿದು ) ಒದಗಿಸಿಕೊಡುವ ಕೆಲಸವನ್ನು ಮಾಡಬೇಕಾ? ಈ ವಿಚಾರದಲ್ಲಿ ದೇಶದ ಸರ್ವೋನ್ನತ ನ್ಯಾಯಸ್ಥಾನ ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ತನ್ನ ಕರ್ತವ್ಯವನ್ನು ದೇಶದ ಜನತೆಯ ವಿಶ್ವಾಸ ಮತ್ತು ನಂಬಿಕೆ ಕಳೆದುಕೊಳ್ಳುವಂತಹ ರೀತಿಯಲ್ಲಿ ಖಂಡಿತವಾಗಿಯೂ ನಡೆದುಕೊಂಡಿಲ್ಲ. ದೇಶದ ಜನತೆಗಿಂದು ಶಾಸಕಾಂಗದ ಬದ್ಧತೆ ಮತ್ತು ಕಾರ್ಯಕ್ಷಮತೆ ಬಗ್ಗೆ ಸಂಪೂರ್ಣ ವಿಶ್ವಾಸವಿಲ್ಲ. ಜನತೆಯ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಕಾರ್ಯಾಂಗವಿಂದು ಶಾಸಕಾಂಗದ ಮಾತನ್ನೇ ಕೇಳುವುದಿಲ್ಲ. ಸಂವಿಧಾನದ ಅಡಿ ಇವರಿಬ್ಬರಿಗೂ ಪ್ರಜಾಡಳಿತದಲ್ಲಿ ಅತ್ಯಧಿಕ ಹೊಣೆಗಾರಿಕೆ ಮತ್ತು ಕರ್ತವ್ಯಗಳಿವೆ. ಅವುಗಳನ್ನು ಸಂಪೂರ್ಣವಾಗಿ ಸಮಾಧಿ ಮಾಡಿ ತಮಗಿಷ್ಟ ಬಂದ ರೀತಿಯಲ್ಲಿ ಇವರು ಮಿತಿ ಮೀರಿದಾಗ, ಈ ದೇಶದ ಸಾಮಾನ್ಯನಿಗೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಅಲ್ಲದೆ ಬೇರ್‍ಯಾರೂ ದಿಕ್ಕಿಲ್ಲ.
ಸಂವಿಧಾನದ ಆರ್ಟಿಕಲ್ ೩೬೧ ಪ್ರಕಾರ ರಾಜ್ಯಪಾಲರು ಮತ್ತು ರಾಷ್ಟಪತಿಗೆ ಸುಪ್ರೀಂಕೋರ್ಟ್ ಆದೇಶಿಸುವ ಹಾಗಿಲ್ಲ. ಇವರಿಗೆ ಇಮ್ಯೂನಿಟಿ ಇದೆ ನಿಜ. ಆದರೆ ಕೆಲವೊಂದು ಸಂದರ್ಭದಲ್ಲಿ ರಾಜಭವನ ಅಥವಾ ರಾಷ್ಟ್ರಪತಿ ಭವನದಿಂದ ಮಾಹಿತಿ ಪಡೆಯಲು ಸುಪ್ರೀಂಕೋರ್ಟ್‌ಗೆ ಪರಮಾಧಿಕಾರವಿದೆ. ಆದರೆ ಸುಪ್ರೀಂ ಕೋರ್ಟ್ ಆರ್ಟಿಕಲ್ ೧೪೨ ಅಡಿಯಲ್ಲಿ ಹೊಂದಿರುವ ವಿಶೇಷ ಅಧಿಕಾರವೀಗ ಪ್ರಸ್ತುತ. ಶಾಸನದ ಸೀಮಾರೇಖೆಗಳನ್ನು ದಾಟಿ ಸುಪ್ರೀಂಕೋರ್ಟ್ ಈ ಆರ್ಟಿಕಲ್ ಅನ್ನು ಬಳಸಿದೆ ಎಂಬುದಾದರೆ ಇಂತಹ ಅಧಿಕಾರವನ್ನು ದೇಶದ ಸರ್ವೋನ್ನತ ನ್ಯಾಯಪೀಠವು ಹೊಂದಿರಬೇಕೆ ಅಥವಾ ಅದರ ದಮನವಾಗಬೇಕೇ ಎಂಬುದೂ ಈಗ ಸಾಂವಿಧಾನಿಕ ಪ್ರಶ್ನೆಯಾಗಿದೆ. ಈ ದೇಶದ ಪ್ರಜೆಯ ಸಾಂವಿಧಾನಿಕ ಹಕ್ಕುಗಳಿಗೆ ಧಕ್ಕೆ ಬಂದಾಗ ಅದರ ಸಂರಕ್ಷಣೆಯ ಕೆಲಸ ಆಗುತ್ತಿರುವುದು ಸುಪ್ರೀಂಕೋರ್ಟಿನಿಂದಲೇ. ರಾಜಕೀಯ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ಆಯಾ ಕಾಲಕ್ಕೆ ತಕ್ಕ ಹಾಗೆ ಸರ್ಕಾರಗಳು ಪ್ರಜಾತಂತ್ರ ಮತ್ತು ಮೆಜಾರಿಟಿ ಹೆಸರಿನಲ್ಲಿ ಶಾಸನಗಳನ್ನು ರೂಪಿಸಿಕೊಂಡರೂ ಇದರ ಕಾನೂನುಬದ್ಧತೆಯನ್ನು ಅಂತಿಮವಾಗಿ ನಿರ್ಧರಿಸುವುದು ಸರ್ವೋನ್ನತ ನ್ಯಾಯಾಲಯವೇ. ಯಾವಾಗ ನಮ್ಮ ದೇಶದ ಸಂವಿಧಾನವು ಕಾರ್ಯಾಂಗ ಮತ್ತು ಶಾಸಕಾಂಗಕ್ಕಿಂತಲೂ ಮಿಗಿಲು ಮತ್ತು ಎತ್ತರದ ಸ್ಥಾನ ಮತ್ತು ಅಧಿಕಾರವನ್ನು ಸುಪ್ರೀಂಕೋರ್ಟ್‌ಗೆ ನೀಡಿರುವಾಗ ಬಿಯಾಂಡ್ ದಿ ಬೌಂಡರೀಸ್ ಆಫ್ ಸ್ಟಾಟುಟರಿ ಲಾ ಅನ್ನು ಅರ್ಥೈಸುವ ಆರ್ಟಿಕಲ್ ೧೪೨ ಕೂಡಾ ಈ ದಿಶೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಒಟ್ಟಿನಲ್ಲಿ ಭಾರತೀಯ ಸಂವಿಧಾನದಲ್ಲಿ ರಾಷ್ಟ್ರಪತಿಗೆ ಪರಮ ವಿಶೇಷ ಅಧಿಕಾರಗಳಿವೆ. ಹಾಗೆಯೇ ಸಂವಿಧಾನದ ಕಸ್ಟೋಡಿಯನ್ ಎಂದೆನಿಸಿಕೊಂಡಿರುವ ಸುಪ್ರೀಂಕೋರ್ಟಿಗೂ ಪರಮಾಧಿಕಾರಗಳಿವೆ. ಇವುಗಳ ಪರಾಮರ್ಶೆ ಮತ್ತು ವಿಮರ್ಶೆ ಪ್ರಜಾತಂತ್ರಕ್ಕೆ ಪೂರಕವಾಗಿರಬೇಕೇ ವಿನಹ ಅರ್ಥಹೀನ ಜಗಳಕ್ಕೆ ಜುಗಲ್‌ಬಂಧಿಯಾಗಬಾರದು.
-ಪಿ. ರಾಜೇಂದ್ರ
ಲೇಖಕರು